Advertisement

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

08:40 PM Jan 27, 2022 | Team Udayavani |

ಲಾಲ್‌ಬಾಗ್‌: ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತಾವಧಿಯ ಎರಡನೇ ಅವಧಿಯ ಬಜೆಟ್‌ ಶುಕ್ರವಾರ ಮಂಡನೆಯಾಗಲಿದೆ.

Advertisement

ತೆರಿಗೆ ಸ್ಥಾಯೀ ಸಮಿತಿ ಆಧ್ಯಕ್ಷೆ ಶೋಭಾ ರಾಜೇಶ್‌ ಅವರು ಅಪರಾಹ್ನ 3 ಗಂಟೆಗೆ ಬಜೆಟ್‌ ಮಂಡನೆ ಮಾಡಲಿದ್ದು, ಈ ಸಂಬಂಧ ಮಹಾನಗರ ಪಾಲಿಕೆಯಲ್ಲಿ ಸ್ಥಾಯೀ ಸಮಿತಿಯ ಮಹತ್ವದ ಸಭೆ ನಡೆದಿದೆ. ಬಜೆಟ್‌ನಲ್ಲಿರುವ ಅಂಶ ಹಾಗೂ ಸಭೆಯ ಸ್ಥೂಲ ಅಂಶಗಳ ಬಗ್ಗೆ ಮನಪಾ ಸದಸ್ಯರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಪಾಲಿಕೆ ಬಜೆಟ್‌ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌ ಅವರ ಕಾರ್ಯಕ್ರಮ ದಿಢೀರ್‌ ಆಗಿ ನಿಗದಿಯಾದ ಪರಿಣಾಮ ಸಭೆಯನ್ನು ಅಪರಾಹ್ನ 3 ಗಂಟೆಗೆ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ಕಾರಣದಿಂದಾಗಿ ಪಾಲಿಕೆಯ ಆದಾಯದಲ್ಲಿ ಇಳಿಮುಖಗೊಂಡಿದ್ದು, ಈ ಬಾರಿಯ ಬಜೆಟ್‌ನಲ್ಲಿ ಆದಾಯ ಕ್ರೋಡೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ. ಪಾಲಿಕೆಯ ಆಡಳಿತ ಸುಧಾರಣೆಗೆ ಒತ್ತು ನೀಡುವ ಸಾಧ್ಯತೆಯಿದೆ. ಅದೇ ರೀತಿ, ಘನತ್ಯಾಜ್ಯ ವಿಲೇವಾರಿ, ಮಾರುಕಟ್ಟೆ ಮೂಲ ಸೌಕರ್ಯ, ಪಾರ್ಕಿಂಗ್‌ ಸಮಸ್ಯೆ, ಆನ್‌ಲೈನ್‌ ವ್ಯವಸ್ಥೆ ಸಹಿತ ಹಲವು ವಿಷಯಗಳು ಬಜೆಟ್‌ನಲ್ಲಿ ಮಹತ್ವ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಕಳೆದ ಬಾರಿ ಸಂಪನ್ಮೂಲ ಕ್ರೋಡೀಕರಣ, ಘನ ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ, ಪೇಪರ್‌ ಲೆಸ್‌ ಆಡಳಿತಕ್ಕೆ ಒತ್ತು ಸಹಿತ ಹಲವು ಯೋಜನೆಗಳನ್ನು ಒಳಗೊಂಡಂತೆ ಬಜೆಟ್‌ ಮಂಡಿಸಲಾಗಿತ್ತು. ಒಟ್ಟು 609.92 ಕೋಟಿ ರೂ. ಆದಾಯ ನಿರೀಕ್ಷೆ ಮತ್ತು 576.28 ಕೋಟಿ ರೂ. ಖರ್ಚು ಸಹಿತ ಒಟ್ಟು 317.18 ಕೋಟಿ ರೂ.ಗಳ ಮಿಗತೆ ಬಜೆಟ್‌ ಮಂಡನೆಯಾಗಿತ್ತು.

ಬಜೆಟ್‌ ಮಂಡನೆ ಹಿನ್ನೋಟ

Advertisement

2015ರಿಂದ ಇಲ್ಲಿಯವರೆಗೆ ಪಾಲಿಕೆಯ ಕಾಂಗ್ರೆಸ್‌ ಸಮಯದ 2015-16ರಲ್ಲಿ ಮೇಯರ್‌ ಮಹಾಬಲ ಮಾರ್ಲ ಅವರ ಅಧ್ಯಕ್ಷತೆಯಲ್ಲಿ ಮನಪಾ ತೆರಿಗೆ ಮತ್ತು ಹಣಕಾಸು ಸ್ಥಾಯೀ ಸಮಿತಿ ಅಧ್ಯಕ್ಷೆ ಜೆಸಿಂತಾ ಆಲ್ಫ್ರೆಡ್‌ ಅವರು ಮೊದಲ ಬಜೆಟ್‌ ಮಂಡಿಸಿದ್ದರು. 2016-17ರಲ್ಲಿ ಮೇಯರ್‌ ಜೆಸಿಂತಾ ಆಲ್ಫ್ರೆಡ್‌ ಅವರ ಅಧ್ಯಕ್ಷತೆಯಲ್ಲಿ ಹರಿನಾಥ್‌, 2017-18ರಲ್ಲಿ ಮೇಯರ್‌ ಹರಿನಾಥ್‌ ಅವರ ಅಧ್ಯಕ್ಷತೆಯಲ್ಲಿ ಅಪ್ಪಿ, 2018-19ರಲ್ಲಿ ಮೇಯರ್‌ ಕವಿತಾ ಸನಿಲ್‌ ಅಧ್ಯಕ್ಷತೆಯಲ್ಲಿ ಪ್ರತಿಭಾ ಕುಳಾಯಿ ಹಾಗೂ 2019-20ರಲ್ಲಿ ಮೇಯರ್‌ ಭಾಸ್ಕರ್‌ ಕೆ. ಅಧ್ಯಕ್ಷತೆಯಲ್ಲಿ ತೆರಿಗೆ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬಜೆಟ್‌ ಮಂಡಿಸಿದ್ದರು. 2020ರಲ್ಲಿ ಪಾಲಿಕೆ ಆಡಳಿತಾಧಿಕಾರಿ ಬಜೆಟ್‌ ಮಂಡಿಸಿದ್ದರು. 2021ರಲ್ಲಿ ಮೇಯರ್‌ ದಿವಾಕರ್‌ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ಕಿರಣ್‌ ಕುಮಾರ್‌ ಅವರು ಬಜೆಟ್‌ ಮಂಡಿಸಿದ್ದರು. ಇದೀಗ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರ ಆಧ್ಯಕ್ಷತೆಯಲ್ಲಿ ತೆರಿಗೆ ಸ್ಥಾಯೀಸಮಿತಿ ಅಧ್ಯಕ್ಷೆ ಶೋಭಾ ರಾಜೇಶ್‌ ಅವರು ಬಜೆಟ್‌ ಮಂಡಿಸಲಿದ್ದಾರೆ.

ಆಡಳಿತ ಸುಧಾರಣೆಗೆ ಒತ್ತು:

ಮಹಾನಗರ ಪಾಲಿಕೆ ಬಜೆಟ್‌ ಜ. 28ರಂದು ಮಂಡನೆಯಾ ಗಲಿದೆ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳ ಅಭಿವೃದ್ಧಿಗೆ ಗಮನ ನೀಡಲಾಗುವುದು. ಆಡಳಿತ ಸುಧಾರಣೆಗೆ ಒತ್ತು ನೀಡಲಾಗುವುದು. -ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next