Advertisement
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿ ಪೊಲೀಸ್ ವಶವಾಗುವುದರೊಂದಿಗೆ ಈ ಪ್ರಕರಣದ ಸುತ್ತ ಹರಡಿದ್ದ ಊಹಾಪೋಹಗಳಿಗೆಲ್ಲ ಸದ್ಯಕ್ಕೆ ತೆರೆ ಬಿದ್ದಿದೆ. ಆದರೆ ಈ ಪ್ರಕರಣ ವಿಮಾನ ನಿಲ್ದಾಣಗಳು ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳ ಭದ್ರತೆಗೆ ಸಂಬಂಧಿಸಿದ ವಿಚಾರದಲ್ಲಿ ಹಲವಾರು ಪ್ರಶ್ನೆಗಳನ್ನೆತ್ತಿದೆ.
Related Articles
Advertisement
ಹಾಗೆ ನೋಡಿದರೆ ನಮ್ಮ ವಿಮಾನ ನಿಲ್ದಾಣಗಳ ಒಳಗಿನ ಭದ್ರತೆ ಸಾಕಷ್ಟು ಬಿಗುವಾಗಿಯೇ ಇದೆ. ಭದ್ರತಾ ಸಿಬಂದಿ ಕಣ್ಣುತಪ್ಪಿಸಿ ಒಂದು ಚಿಕ್ಕ ಬ್ಲೇಡ್ ಕೂಡ ಒಯ್ಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದಿನಿಂದ ಇಲೆಕ್ಟ್ರಾನಿಕ್ ವಸ್ತುಗಳನ್ನು ಪ್ರತ್ಯೇಕವಾಗಿಯೇ ತಪಾಸಣೆಗೊಳಪಡಿಸುವ ವ್ಯವಸ್ಥೆಯೂ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿವೆ. ಇಡೀ ವಿಮಾನ ನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುವುದು ಕೇಂದ್ರೀಯ ಔದ್ಯೋಗಿಕ ಭದ್ರತಾ ಪಡೆ (ಸಿಐಎಸ್‌ಎಫ್) ಎಂಬ ವಿಶೇಷವಾಗಿ ತರಬೇತಿ ಹೊಂದಿರುವ ಯೋಧರ ಪಡೆ. ಆದರೆ ಚಿಂತೆಯಿರುವುದು ವಿಮಾನ ನಿಲ್ದಾಣಗಳ ಹೊರಗಿನ ಭದ್ರತೆ ಕುರಿತು. ಮಂಗಳೂರು ಪ್ರಕರಣದಲ್ಲಾಗಿರುವಂತೆ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ತನಕ ತಪಾಸಣೆಯಿಲ್ಲದೆ ಹೋಗಬಹುದು. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಹೋಗುವವರನ್ನು ಬೀಳ್ಕೊಡಲು, ಬರುವವರನ್ನು ಸ್ವಾಗತಿಸಲು ಬಂದವರಿಂದ ತುಂಬಿರುತ್ತದೆ. ಇಂಥ ಸಂದರ್ಭದಲ್ಲಿ ಸ್ಫೋಟವೇನಾದರೂ ಸಂಭವಿಸಿದರೆ ಸಾಕಷ್ಟು ಹಾನಿಯಾಗುವುದು ನಿಶ್ಚಿತ.
ಒಟ್ಟಾರೆಯಾಗಿ ವಿಮಾನ ನಿಲ್ದಾಣಗಳ ಭದ್ರತೆಯನ್ನು ಸಮಗ್ರವಾಗಿ ಸುಧಾರಿಸಬೇಕಾದ ಅಗತ್ಯವನ್ನುಮಂಗಳೂರು ಪ್ರಕರಣ ಒತ್ತಿ ಹೇಳಿದೆ. ವಿಮಾನ ನಿಲ್ದಾಣಗಳಲ್ಲಿ ಇಷ್ಟೆಲ್ಲ ಬಿಗು ಭದ್ರತೆ ಇದ್ದರೂ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆ (ಐಸಿಎಒ) ಸುಮಾರು ಎರಡು ವರ್ಷಗಳ ಹಿಂದೆಯಷ್ಟೇ ಭಾರತದ ವಿಮಾನ ನಿಲ್ದಾಣಗಳ ಭದ್ರತೆ ಬೆಳೆಯುತ್ತಿರುವ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಮೇಲ್ದರ್ಜೆಗೇರುತ್ತಿಲ್ಲ ಎಂಬ ವರದಿಯನ್ನು ನೀಡಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳ ಭದ್ರತೆ ಎಂದರೆ ಅದು ಸರಕಾರ ಅಥವಾ ವ್ಯವಸ್ಥೆಯ ಜವಾಬ್ದಾರಿ ಮಾತ್ರ ಅಲ್ಲ. ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯ ಸಹಭಾಗಿತ್ವವೂ ಅಗತ್ಯ. ನಮ್ಮ ದೇಶದಲ್ಲಿ ಭದ್ರತಾ ತಪಾಸಣೆಗಳನ್ನು ಅನಗತ್ಯ ಕಿರಿಕಿರಿ ಎಂದು ಭಾವಿಸುವವರೇ ಅಧಿಕ. ವಾಹನ ತಪಾಸಣೆಗಾಗಿ ಐದು ನಿಮಿಷ ನಿಲ್ಲಿಸಿದರೂ ರೇಗುವವರಿದ್ದಾರೆ. ಜನರ ಈ ಮನೋಭಾವ ಬದಲಾಗಬೇಕು. ಅಂತಿಮವಾಗಿ ಇಂಥ ಭದ್ರತೆ ಇರುವುದು ನಮ್ಮ ಸುರಕ್ಷತೆಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.