Advertisement

ಮಂಗಳೂರು: ಮತ ಯಂತ್ರಗಳಿಗೆ ಇನ್ನೂ ಆರು ತಿಂಗಳು ಭದ್ರತೆ!

12:12 AM May 16, 2023 | Team Udayavani |

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮೇ 13 ರಂದು ಪೂರ್ಣಗೊಂಡು ಫಲಿತಾಂಶ ಹೊರಬಿದ್ದಿದ್ದರೂ ಬಳಕೆಯಾದ ಮತಯಂತ್ರಗಳು ಕನಿಷ್ಠ 6 ತಿಂಗಳು ಆಯಾಯ ಜಿಲ್ಲೆಯಲಿಲ ವಿಶೇಷ ಭದ್ರತೆಯಲ್ಲಿರುತ್ತವೆ.

Advertisement

ಫಲಿತಾಂಶದ ಬಗ್ಗೆ ರಾಜಕೀಯ ಪಕ್ಷಗಳು ಮುಂಬರುವ ದಿನದಲ್ಲಿ ನ್ಯಾಯಾಲಯಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಈ ಸಂದರ್ಭ ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡು ಮರು ಮತ ಎಣಿಕೆಗೆ ಸೂಚಿಸಲೂ ಬಹುದು. ಹಾಗಾಗಿ ಎಲ್ಲ ಮತಯಂತ್ರಗಳನ್ನು ವಿಶೇಷ ಭದ್ರತೆಯಲ್ಲಿ ಇರಿಸಲಾಗುತ್ತದೆ. ಆದ್ದರಿಂದ ಯಂತ್ರಗಳಲ್ಲಿರುವ ಮತಗಳನ್ನು ಅಳಿಸುವುದಾಗಲೀ ಇತರ ಚುನಾವಣೆಗೆ ತತ್‌ಕ್ಷಣಕ್ಕೆ ಬಳಸುವುದಾಗಲೀ ಮಾಡುವಂತಿಲ್ಲ.

ಆಯಾ ಜಿಲ್ಲೆಯಲ್ಲಿರುವ ಮತ ಯಂತ್ರಗಳನ್ನು ಇಟ್ಟಿರುವ ಸ್ಟ್ರಾಂಗ್‌ ರೂಂ ವ್ಯಾಪ್ತಿಗೆ ಬಿಗಿ ಭದ್ರತೆ ವಿಧಿಸಿದ್ದು, ವಿಧಾನಸಭಾವಾರು ಮತಯಂತ್ರ ಗಳನ್ನು ಜೋಡಿಸಿಡಲಾಗಿದೆ. ಕೊಠಡಿ ಸುತ್ತ ಸಿಸಿ ಕೆಮರಾ ಅಳವಡಿಸಲಾಗಿದೆ. 24 ಗಂಟೆಯೂ ಬಿಗಿ ಪೊಲೀಸ್‌ ಭದ್ರತೆ ಇರಲಿದೆ. ಯಾವುದೇ ಕಾರಣಕ್ಕೂ ಕೊಠಡಿಯನ್ನು ತೆರೆಯುವಂತಿಲ್ಲ. ತೆರೆಯಲೇ ಬೇಕಾದರೆ ಎಲ್ಲ ರಾಜಕೀಯ ಪಕ್ಷಗಳವರ ಗಮನಕ್ಕೆ ತರಲಾಗುತ್ತದೆ.

ಕೇಂದ್ರ ಚುನಾವಣ ಆಯೋಗ ಕೈಗೊಳ್ಳುವ ವಿ.ಸಭೆ ಹಾಗೂ ಲೋಕಸಭೆಗೆ ಬಳಸುವ ಮತಯಂತ್ರಗಳನ್ನು ಸ್ಥಳೀಯ ಚುನಾವಣೆಗೆ ಬಳಸುವುದಿಲ್ಲ. ಮತ ಎಣಿಕೆ ಆದ ಬಳಿಕ ನ್ಯಾಯಾಲಯದಲ್ಲಿ ಆಕ್ಷೇಪಣೆ ಇಲ್ಲದ ಮತಯಂತ್ರಗಳನ್ನು ಮತ್ತೂಂದು ಚುನಾವಣೆಗೆ ಬಳಸಲಾಗುತ್ತದೆ.

ಹೈದರಾಬಾದ್‌ನ ಮತಯಂತ್ರ
ಹಿಂದಿನ ಬಿಇಎಲ್‌ ಉತ್ಪಾದಿತ ಮತಯಂತ್ರಗಳ ಬದಲಿಗೆ ಹೈದರಾಬಾದ್‌ನ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿ. ಸಂಸ್ಥೆಯವರು ರೂಪಿಸಿದ “ಮಾರ್ಕ್‌ 3′ ಮತಯಂತ್ರಗಳನ್ನು ಈ ಬಾರಿ ತರಿಸಲಾಗಿತ್ತು. ಒಂದು ಮತಯಂತ್ರದಲ್ಲಿ ನೋಟಾ ಸೇರಿ 16 ಅಭ್ಯರ್ಥಿಗಳ ಹೆಸರಿಗೆ ಅವಕಾಶವಿತ್ತು. ಹಿಂದಿನ ಮತಯಂತ್ರಗಳಲ್ಲಿ ಒಂದು ಕಂಟ್ರೋಲ್‌ ಯುನಿಟ್‌ಗೆ 4 ಬ್ಯಾಲೆಟ್‌ ಯುನಿಟ್‌ಗಳನ್ನಷ್ಟೇ ಜೋಡಿಸಲು ಸಾಧ್ಯವಿತ್ತು. ಈಗಿನದ್ದರಲ್ಲಿ 24 ಬ್ಯಾಲೆಟ್‌ ಯುನಿಟ್‌ ಜೋಡಿಸಬಹುದಾಗಿದೆ.

Advertisement

ಪ್ರತೀ ತಿಂಗಳು ಪರಿಶೀಲನೆ
ಇವಿಎಂ, ವಿವಿ ಪ್ಯಾಟ್‌, ಮತ್ತು ಕಂಟ್ರೋಲ್‌ ಯುನಿಟ್‌ಗಳನ್ನು ಜಿಲ್ಲಾ ಕೇಂದ್ರದಲ್ಲೇ ಸಂಗ್ರಹಿಸಿ ಇಡಲಾಗುತ್ತದೆ. ಹೀಗೆ ಇರಿಸಿರುವ ಮತಯಂತ್ರಗಳನ್ನು ಪ್ರತೀ ತಿಂಗಳು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಥವಾ ಉಪ ಚುನಾವಣಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಕೊಠಡಿಗಳಿಗೆ ಮತ್ತೆ ಬೀಗ ಹಾಕಿ ಸೀಲ್‌ ಮಾಡುತ್ತಾರೆ. ಕೊಠಡಿಗಳ ಕೀಲಿ ಕೈಗಳು ಈ ಇಬ್ಬರು ಅಧಿಕಾರಿಗಳ ಸುಪರ್ದಿಯಲ್ಲೇ ಇರುತ್ತವೆ.

ವಿವಿ ಪ್ಯಾಟ್‌ ಸ್ಲಿಪ್‌ ಪ್ರತ್ಯೇಕ ಲಕೋಟೆಯಲ್ಲಿ!
ಈ ಬಾರಿ ವಿವಿ ಪ್ಯಾಟ್‌ನ ಸ್ಲಿಪ್‌ಗ್ಳನ್ನು ತೆಗೆದು ಕಪ್ಪು ಲಕೋಟೆಯಲ್ಲಿ ಹಾಕಿ ಭದ್ರತೆಯಲ್ಲಿಡಲಾಗಿದೆ. ವಿವಿ ಪ್ಯಾಟ್‌ ಒಳಗೆ ಇರುವ ಪೇಪರ್‌ ರೋಲ್‌ಗ‌ಳನ್ನು ತೆಗೆದು ಭದ್ರತೆಯಲ್ಲಿಡಲಾಗಿದೆ. ಯಂತ್ರಗಳನ್ನು ಕೂಡ ಅವುಗಳಿಗೆ ಇರುವ ಪ್ರತ್ಯೇಕ ಬಾಕ್ಸ್‌ಗಳಲ್ಲಿ ಹಾಕಿ ಸ್ಟ್ರಾಂಗ್‌ ರೂಂನಲ್ಲಿ ಕಾಪಿಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next