Advertisement

ಮಂಗಳೂರು ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಪ್ರಸ್ತಾವನೆ ಬಂದಿಲ್ಲ: ಸಚಿವ ವಿ.ಕೆ. ಸಿಂಗ್‌

01:13 AM Feb 08, 2022 | Team Udayavani |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಕೋರಿ ಕರ್ನಾಟಕ ಸರಕಾರದಿಂದ ಯಾವುದೇ ಪ್ರಸ್ತಾವನೆ ಕೇಂದ್ರ ಸರಕಾರಕ್ಕೆ ಬಂದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ.ಕೆ. ಸಿಂಗ್‌ ತಿಳಿಸಿದ್ದಾರೆ.

Advertisement

ಮರುನಾಮಕರಣ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯಸಭಾ ಸದಸ್ಯ ಡಾ| ಸುಬ್ರಹ್ಮಣ್ಯ ಸ್ವಾಮಿ ರಾಜ್ಯಸಭೆಯಲ್ಲಿ “ಮಂಗಳೂರು ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಕುರಿತಂತೆ ಬಹುಬೇಡಿಕೆ ಇದೆಯೇ? ಈ ಕುರಿತಂತೆ ಹಲವಾರು ಸಲಹೆಗಳು ಬಂದಿರುವುದು ನಿಜವೇ? ಹಾಗೂ ಮರುನಾಮಕರಣಕ್ಕೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂಬುದಾಗಿ ಪ್ರಶ್ನಿಸಿ ಮಾಹಿತಿ ಕೋರಿದ್ದರು.

ರಾಜ್ಯಸಭೆಯಲ್ಲಿ ಫೆ. 7ರಂದು ಸಚಿವ ವಿ.ಕೆ. ಸಿಂಗ್‌ ನೀಡಿರುವ ಉತ್ತರದಲ್ಲಿ, ವಿಮಾನ ನಿಲ್ದಾಣಗಳ ನಾಮಕರಣ/ಮರುನಾಮಕರಣಕ್ಕಾಗಿ ರಾಜ್ಯ ಸರಕಾರಗಳು ರಾಜ್ಯ ಶಾಸನ ಸಭೆಗಳಲ್ಲಿ ಆದ ನಿರ್ಣಯ ಸಹಿತವಾಗಿ ಕಳುಹಿಸುವ ಪ್ರಸ್ತಾವನೆಗಳನ್ನು ಪರಿಗಣಿಸಲಾಗುತ್ತದೆ. ಮಂಗಳೂರು ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರಕಾರದಿಂದ ಇಂತಹ ಯಾವುದೇ ಪ್ರಸ್ತಾವನೆಬಂದಿಲ್ಲ. ಕೇಂದ್ರ ಸಚಿವ ಸಂಪುಟ ಕೂಡ ಸಂಬಂಧಪಟ್ಟ ಕೇಂದ್ರ ಸಚಿವರು ಹಾಗೂ ಇಲಾಖೆಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ವಿಮಾನ ನಿಲ್ದಾಣಗಳಿಗೆ ಮರುನಾಮಕರಣ ನಿರ್ಧಾರಗಳನ್ನು ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ- ಚೆನ್ನಯ, ರಾಣಿ ಅಬ್ಬಕ್ಕ, ಉಳ್ಳಾಲ ಶ್ರೀನಿವಾಸ ಮಲ್ಯ ಮುಂತಾದವರ ಹೆಸರುಗಳನ್ನು ಇಡಬೇಕು ಎಂಬ ಬೇಡಿಕೆಗಳು ಇವೆ.

Advertisement

Udayavani is now on Telegram. Click here to join our channel and stay updated with the latest news.

Next