Advertisement

ಬಾಂಬ್ ಇಡುವ ಮುನ್ನ ಕಾರ್ಕಳದ ಬಾರ್ ನಲ್ಲಿ ಎರಡು ದಿನ ಕಳೆದಿದ್ದ ಆದಿತ್ಯ ರಾವ್

09:57 AM Jan 24, 2020 | keerthan |

ಕಾರ್ಕಳ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕವನ್ನಿರಿಸಿ ಈಗ ಪೊಲೀಸರ ವಶದಲ್ಲಿರುವ ಉಡುಪಿ ಮೂಲದ ಆದಿತ್ಯ ರಾವ್ ಕೃತ್ಯಕ್ಕೆ ಎರಡು ದಿನ ಮೊದಲು ಕಾರ್ಕಳದ  ಬಾರಿನಲ್ಲಿ ಕೆಲಸಕ್ಕಿದ್ದ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಜ.20ರಂದು ಬೆಳಿಗ್ಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅನುಮಾನಸ್ಪದ ಬ್ಯಾಗ್ ನಲ್ಲಿ ಸ್ಪೋಟಕ ಪತ್ತೆಯಾಗಿತ್ತು. ಕರಾವಳಿಯನ್ನು ಬೆಚ್ಚಿ ಬೀಳಿಸಿದ್ದ ಈ ಘಟನೆಯ ಆರೋಪಿ ಆದಿತ್ಯ ರಾವ್ ಬುಧವಾರ ಬೆಂಗಳೂರಿನಲ್ಲಿ ಪೊಲೀಸರ ಎದುರು ಶರಣಾಗಿದ್ದ. ಸದ್ಯ ಆತನನ್ನು ಮಂಗಳೂರು ಪೊಲೀಸರ ವಶಕ್ಕೆ ನೀಡಲಾಗಿದೆ.

ಕಾರ್ಕಳದಲ್ಲಿದ್ದ ಆರೋಪಿ

ಆರೋಪಿ ಆದಿತ್ಯ ರಾವ್ ಜನವರಿ 18ರಂದು ಬೆಳಿಗ್ಗೆ 11.45ರ ಸುಮಾರಿಗೆ ಕಾರ್ಕಳದ ಕರಿಯಕಲ್ಲಿನಲ್ಲಿರುವ ರಾಕ್ ಸೈಡ್  ಬಾರ್ ಆಂಡ್ ರೆಸ್ಟೋರೆಂಟ್ ಗೆ ಹೋಗಿದ್ದ. ಅಲ್ಲಿ ವೆಯಿಟರ್ ಕೆಲಸ ಬೇಕೆಂದು ವಿನಂತಿಸಿದ್ದ. ಆದರೆ ಅಲ್ಲಿನ ಮ್ಯಾನೇಜರ್ ಆದಿತ್ಯ ರಾವ್ ಗೆ ಕೆಲಸ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.

Advertisement

ಉದ್ದ ತೋಳಿನ ಬಿಳಿ ಅಂಗಿ ಧರಿಸಿದ್ದ ಆತ ‘23’ ಎಂದು ದೊಡ್ಡದಾಗಿ ಬರೆದಿದ್ದ ಟೋಪಿ ತೊಟ್ಟಿದ್ದ. ಕಪ್ಪು ಬಣ್ಣದ ಬ್ಯಾಗ್ ನೊಂದಿಗೆ ಆತ ಬಂದಿದ್ದ.  ಗಮನಿಸಬೇಕಾದ ಅಂಶವೆಂದರೆ ಏರ್ ಪೋರ್ಟ್ ಗೆ ಹೋಗುವಾಗಲೂ ಆತ ಇದೇ ಅಂಗಿ ಮತ್ತು ಟೋಪಿ ಧರಿಸಿದ್ದ. ಏರ್ ಪೋರ್ಟ್ ಸಿಸಿಟಿವಿ ಕ್ಯಾಮರಾದ ದೃಶ್ಯಗಳಲ್ಲಿ ಇದು ಸೆರೆಯಾಗಿತ್ತು.

ಅದೇ ದಿನ (ಜ.18 ಶನಿವಾರ) ಸಂಜೆ 7 ಗಂಟೆ ಸುಮಾರಿಗೆ ಕಾರ್ಕಳ ಪೇಟೆಯಲ್ಲಿರುವ ಕಿಂಗ್ಸ್ ಬಾರ್ ಗೆ ಬಂದು ಅಲ್ಲಿನ ಮ್ಯಾನೇಜರ್ ಪದ್ಮನಾಭ ಅವರಲ್ಲಿ ಕೆಲಸ ಕೇಳಿದ್ದ. ತಾನು ಈ ಹಿಂದೆ ಮಂಗಳೂರಿನಲ್ಲಿ ಬಿಲ್ ಕೌಂಟರ್, ವೆಯಿಟರ್, ಸಪ್ಲೈಯರ್ ಆಗಿ ಕೆಲಸ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ.

ಬಾರ್ ಮ್ಯಾನೇಜರ್ ಈತನ ಆಧಾರ್ ಕಾರ್ಡ್ ಮತ್ತು ಫೋಟೋ ಕೇಳಿದಾಗ ಮೊದಲು ಇಲ್ಲ ಎಂದಿದ್ದ. ಆದರೆ ಮ್ಯಾನೇಜರ್ ಅದಿಲ್ಲದೆ ಕೆಲಸ ನೀಡುವುದಿಲ್ಲ ಎಂದಿದ್ದಕ್ಕೆ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಕೊಟ್ಟು ಕೆಲಸಕ್ಕೆ ಸೇರಿದ್ದ.

 ಜಿಮ್ ಸೇರಿದ್ದ ಆದಿತ್ಯ ರಾವ್

ಕಿಂಗ್ಸ್ ಬಾರ್ ನಲ್ಲಿ ಕೆಲಸಕ್ಕೆ ಸೇರಿದ್ದ ಆದಿತ್ಯ ರಾವ್ ಶನಿವಾರ ಕೆಲಸ ಮಾಡಿದ್ದ. ಅದೇ ದಿನ ಸಂಜೆ 6 ಗಂಟೆಗೆ ತನ್ನ ಬ್ಯಾಗ್ ನೊಂದಿಗೆ ಹತ್ತಿರದ ಜಿಮ್ ಗೆ ಹೋಗಿದ್ದ. ಅಲ್ಲಿ ಜಿಮ್ ಮಾಲಕರೊಂದಿಗೆ ಇಂಗ್ಲೀಷ್ ನಲ್ಲಿ ಮಾತನಾಡಿ, ಒಂಚೂರು ಜಿಮ್ ಮಾಡುತ್ತೇನೆ ಎಂದಿದ್ದ.

ಜೊತಗಿತ್ತು ಡಂಬಲ್ಸ್

ಆದಿತ್ಯ ರಾವ್ ತನ್ನ ಜೊತೆಗೆ ವ್ಯಾಯಾಮ ಮಾಡುವ ಡಂಬಲ್ಸ್ ತಂದಿದ್ದ. ಆದಿತ್ಯವಾರ ಕೆಲಸ ಮಾಡಿ ಬಾರ್ ನ ಸಿಬ್ಬಂದಿ ಮಲಗುವ ಕೋಣೆಯಲ್ಲಿ ಮಲಗಿದ್ದ. ಮರದಿನ ಅಂದರೆ ಜನವರಿ 20ರಂದು ಸೋಮವಾರ ಬೆಳಿಗ್ಗೆ 5 ಗಂಟೆಗೆ ಕ್ಯಾಪ್ ತೊಟ್ಟು ಬ್ಯಾಗ್ ನೊಂದಿಗೆ ಅಲ್ಲಿಂದ ಕಾಣೆಯಾಗಿದ್ದ.

ಕಾರ್ಕಳದಿಂದ ನೇರವಾಗಿ ಬಜ್ಪೆ ವಿಮಾನ ನಿಲ್ದಾಣಕ್ಕೆ ಹೋಗಿ ಅಲ್ಲಿ ಸ್ಪೋಟಕ ತುಂಬಿದ್ದ ಬ್ಯಾಗ್ ಇರಿಸಿ ನಾಪತ್ತೆಯಾಗಿದ್ದ. ಅಲ್ಲಿಂದ ಬೆಂಗಳೂರಿಗೆ ಹೋಗಿ ಅಲ್ಲಿ ಪೊಲೀಸರಿಗೆ ಶರಣಾಗಿದ್ದ.

ಡಂಬಲ್ಸ್ ನಲ್ಲಿ ಹಳದಿ ಪುಡಿ; ಆತಂಕದಲ್ಲಿ ಸಿಬ್ಬಂದಿ

ಆದಿತ್ಯ ರಾವ್ ಬಿಟ್ಟುಹೋಗಿದ್ದ ಡಂಬಲ್ಸ್ ನ ಒಂದು ಭಾಗದಲ್ಲಿ ಬಿರುಕು ಮೂಡಿದ್ದು, ಅದರಲ್ಲಿ ಹಳದಿ ಪುಡಿ ಹೊರಬಂದಿದೆ. ಇದರಲ್ಲಿ ಸ್ಪೋಟಕ ಇರಬಹುದು ಎಂದು ಬಾರ್ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next