ಮಂಗಳೂರು:ಮಂಗಳೂರು ಸಹಿತ 6 ವಿಮಾನ ನಿಲ್ದಾಣಗಳ ಖಾಸಗೀ ಕರಣ ಸಂಬಂಧ ವಿವಿಧ ಕಂಪೆನಿಗಳಿಂದ ಆಹ್ವಾನಿಸಿದ್ದ ಆರ್ಥಿಕ ಬಿಡ್‌ಗಳ ಪೈಕಿ ಐದಕ್ಕೆ ಗುಜರಾತ್ ಮೂಲದ ಅದಾನಿ ಎಂಟರ್‌ಪ್ರೈಸಸ್ ಅತಿಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಗುವಾಹಟಿಯೂ ಸೇರಿದಂತೆ 6 ವಿಮಾನ ನಿಲ್ದಾಣಗಳಿಗೆ ಆರ್ಥಿಕ ಬಿಡ್ ಕರೆದಿತ್ತು. ಸೋಮವಾರ ಐದನ್ನು ತೆರೆದಿದ್ದು, ಮಂಗಳೂರು, ತಿರುವನಂತಪುರ, ಜೈಪುರ, ಲಕ್ನೋ, ಅಹಮದಾಬಾದ್ ನಿಲ್ದಾಣಗಳಿಗೆ ಅದಾನಿ ಗ್ರೂಪ್ ಹೆಚ್ಚು ಮೊತ್ತದ ಬಿಡ್ ಮಾಡಿದೆ. ಈ ಮೂಲಕ ಮೂಲಸೌಕರ್ಯ ಹಾಗೂ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವ ಗ್ರೂಪ್ ಈಗ ಏರ್‌ಪೋರ್ಟ್ ಅಭಿವೃದ್ಧಿಯತ್ತ ಆಸಕ್ತಿ ವಹಿಸಿದೆ. ಪ್ರಾಧಿಕಾರದ ಅಂತಿಮ ತೀರ್ಮಾನದ ಬಳಿಕ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಗುವಾಹಟಿ ನಿಲ್ದಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಏರ್‌ಪೋರ್ಟ್‌ಗೆ ಬಂದು ಹೋಗುವ ಪ್ರತಿ ಪ್ರಯಾಣಿಕನನ್ನು ಆಧರಿಸಿ ಪ್ರಾಧಿಕಾರಕ್ಕೆ ಎಷ್ಟು ಹಣ ಪಾವತಿಸಬೇಕೆಂಬುದು ಬಿಡ್‌ನ ಪ್ರಮುಖ ಅಂಶವಾಗಿತ್ತು.
ಪ್ರಾಧಿಕಾರದ ಪತ್ರಿಕಾ ಪ್ರಕಟನೆ ಯಂತೆ, ಮಂಗಳೂರು ಏರ್‌ಪೋರ್ಟ್ ಅನ್ನು ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು 3 ಕಂಪೆನಿಗಳು ಪಾಲ್ಗೊಂಡಿದ್ದವು. ಅದಾನಿ ಗ್ರೂಪ್ ಪ್ರತಿ ಪ್ರಯಾಣಿಕನ ಮೇಲೆ ಮಾಸಿಕ 115 ರೂ.ಗಳನ್ನು ಪಾವತಿಸುವುದಾಗಿ ತಿಳಿಸಿದೆ. ಕೊಚ್ಚಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ 45 ರೂ., ಜಿಎಂಆರ್ ಏರ್‌ಪೋಟ್ಸ್ ì ಲಿ. 18 ರೂ. ನೀಡುವುದಾಗಿ ಹೇಳಿದ್ದವು. ಅಹಮದಾಬಾದ್ ಏರ್‌ಪೋರ್ಟ್ ನಿರ್ವಹಣೆಗೆ 177 ರೂ., ಜೈಪುರ ಏರ್‌ಪೋರ್ಟ್‌ನಲ್ಲಿ 174 ರೂ., ಲಕ್ನೋ ಏರ್‌ಪೋರ್ಟ್‌ಗೆ 171 ರೂ. ಹಾಗೂ ತಿರುವನಂತಪುರ ಏರ್‌ಪೋರ್ಟ್‌ಗೆ 168 ರೂ. ನೀಡುವುದಾಗಿ ಅದಾನಿ ಗ್ರೂಪ್ ತಿಳಿಸಿದೆ.
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿ ಯಿಸಿದ ಪ್ರಾಧಿಕಾರದ ಅಧಿಕಾರಿ ಯೊಬ್ಬರು, 5 ಬಿಡ್‌ಗಳ ಮೊತ್ತವನ್ನು ಪ್ರಕಟಿಸಲಾಗಿದೆ. ಪ್ರಾಧಿಕಾರ ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಯಾವ ಏರ್‌ಪೋರ್ಟ್ ಯಾರ ಪಾಲಾಗಲಿದೆ ಎಂದು ಹೇಳಲಾಗದು’ ಎಂದಿದ್ದಾರೆ.