Advertisement

ಮಂಗಳೂರು: ಇಂದಿನಿಂದ ತ್ರಿದಿನ ಹಕ್ಕಿ ಹಬ್ಬ

11:47 AM Feb 09, 2018 | |

ಮಂಗಳೂರು : ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವೃತ್ತ ಹಾಗೂ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ “ಹಕ್ಕಿ ಹಬ್ಬ’ (ಬರ್ಡ್‌ ಫೆಸ್ಟಿವಲ್‌) ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಫೆ. 9ರಿಂದ 11ರ ವರೆಗೆ ಮಂಗಳೂರು ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ.

Advertisement

ರಂಗನತಿಟ್ಟು, ದಾಂಡೇಲಿ ಹಾಗೂ ಬಳ್ಳಾರಿ ಯಲ್ಲಿ ಈಗಾಗಲೇ ಯಶಸ್ವಿಯಾಗಿ ಪೂರ್ಣ ಗೊಂಡಿರುವ “ಹಕ್ಕಿಹಬ್ಬ’ವನ್ನು ಮೊದಲ ಬಾರಿಗೆ ಕರಾವಳಿಯಲ್ಲಿ ಸಂಘಟಿಸಲಾಗಿದೆ. ಹಕ್ಕಿಗಳ ಕುರಿತ ಆಸಕ್ತರಿಗೆ ಹಾಗೂ ಪಕ್ಷಿ ಅಧ್ಯಯನಶೀಲರಿಗೆ ಉಪಯೋಗಿಯಾಗುವ ನೆಲೆಯಲ್ಲಿ ಮತ್ತು ಪರಿಸರ-ಹಕ್ಕಿಗಳ ಬಗ್ಗೆ ಜನರಲ್ಲಿ ಪ್ರೀತಿ ಮೂಡುವಂತಾಗಲಿ ಎಂಬ ನೆಲೆಯಿಂದ ಈ ಹಕ್ಕಿ ಹಬ್ಬವನ್ನು ಸಂಘಟಿಸಲಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳ ಪಕ್ಷಿ ಪ್ರಿಯರು ಇದರಲ್ಲಿ ಭಾಗವಹಿಸಲಿದ್ದಾರೆ.

ಫೆ. 9ರಂದು ಬೆಳಗ್ಗೆ 11ಕ್ಕೆ ಮಂಗಳೂರು ಪುರಭವನದಲ್ಲಿ ಸಚಿವ ಬಿ. ರಮಾನಾಥ ರೈ ಅವರು ಹಕ್ಕಿ ಹಬ್ಬ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಪಕ್ಷಿ ಜಾಗೃತಿ ಜಾಥಾ ನಡೆಯಲಿದೆ. ಫೆ. 10ರಂದು ಪಿಲಿಕುಳದ ವಿಜ್ಞಾನ ಭವನದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಕ್ಕಿಗಳ ಚಿತ್ರಕಲಾ ಕಾರ್ಯಾಗಾರ ಮತ್ತು ರಸಪ್ರಶ್ನೆ ಕಾರ್ಯಕ್ರಮಗಳು ನಡೆಯಲಿದ್ದು, ಫೆ. 11ರಂದು ಸಮುದ್ರದಲ್ಲಿ ಹಕ್ಕಿಗಳ ವೀಕ್ಷಣೆಯೂ ನಡೆಯಲಿದೆ ಎಂದು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಪ್ರಕಟನೆ ತಿಳಿಸಿದೆ

ಕಡಲಲ್ಲಿ ಸಂಚರಿಸುತ್ತ ಪಕ್ಷಿ ವೀಕ್ಷಣೆ! ಅರಬ್ಬಿ ಸಮುದ್ರದಲ್ಲಿ ಸರಿಸುಮಾರು 10-15 ಕಿ.ಮೀ.ನಷ್ಟು ದೂರದವರೆಗೆ ಪಕ್ಷಿಪ್ರಿಯರನ್ನು ದೋಣಿಯಲ್ಲಿ ಕರೆದೊಯ್ದು ಹಕ್ಕಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿರುವುದು ಈ ಬಾರಿಯ ವಿಶೇಷ. ಅಪರೂಪದ ಕಡಲ ಹಕ್ಕಿಗಳ ಕುರಿತು ಅಭ್ಯಸಿಸುವ ಹಾಗೂ ಛಾಯಾಚಿತ್ರ ತೆಗೆಯುವ ಅವಕಾಶ ಇದು. ಅಂಡಮಾನ್‌, ನಿಕೋಬಾರ್‌ ವ್ಯಾಪ್ತಿಯಲ್ಲಿ ಹಕ್ಕಿಗಳ ಬಗ್ಗೆ ಅಭ್ಯಸಿಸಿದ ತಜ್ಞರು ಕೂಡ ಈ ಸಂದರ್ಭದಲ್ಲಿ ಜತೆಗಿರಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next