Advertisement

ಮಂಗಳೂರು: ಮನೆ ಮೇಲೆ ಕುಸಿದ ತಡೆಗೋಡೆ

12:54 AM Jul 11, 2019 | Sriram |

ಮಂಗಳೂರು/ಕಾಸರಗೋಡು: ಕರಾವಳಿಯಾದ್ಯಂತ ಬುಧವಾರ ಉತ್ತಮ ಮಳೆಯಾಗಿದೆ. ವಿವಿಧೆಡೆ ಮರಗಳು ಬಿದ್ದು ವಿದ್ಯುತ್‌ ಕಂಬಗಳಿಗೆ, ಮನೆಗಳಿಗೆ ಹಾನಿ, ವಾಹನ ಸಂಚಾರ ವ್ಯತ್ಯಯವಾದ ಬಗ್ಗೆ ವರದಿಯಾಗಿದೆ.

Advertisement

ಆಕಾಶಭವನದ ಆನಂದನಗರದಲ್ಲಿ ಮಂಗಳವಾರ ರಾತ್ರಿ ಜಯಶ್ರೀ ಅವರ ಮನೆ ಮೇಲೆ ಪಕ್ಕದ ಮನೆಯ ಆವರಣದಲ್ಲಿದ್ದ ಮರ ಬಿದ್ದು ಹಾನಿಯಾಗಿದೆ. ಆಕಾಶಭವನದ ಪರಪಾದೆ ಯಲ್ಲಿ ಶುಭಾ ಅವರ ಮನೆಗೆ ಪಕ್ಕದ (ಹಿಂಬದಿ) ಗುಡಿಯೊಂದರ ತಡೆಗೋಡೆ ಕುಸಿದು ಬಿದ್ದು, ಶೌಚಾಲಯ ಕೊಠಡಿ ಮತ್ತು ಮಲಗುವ ಕೋಣೆಗೆ ಹಾನಿಯಾಗಿದೆ.

ಪಡೀಲ್‌ ರೈಲ್ವೇ ಮೇಲ್ಸೇತುವೆ ಬದಿಯಿಂದ ಬುಧವಾರ ಬೆಳಗ್ಗೆ ಮಣ್ಣು ಜರಿದು ಬಿದ್ದ ಪರಿಣಾಮ ಸೇತುವೆಯ ಒಳ ಭಾಗದ ರಸ್ತೆ ಕೆಸರುಮಯವಾಗಿತ್ತು.

ತಡೆಗೋಡೆ ಕುಸಿತ
ಮಂಗಳೂರಿನ ಜಪ್ಪು ಮಾರ್ನಮಿಕಟ್ಟೆ ರೈಲ್ವೇ ಸೇತುವೆ ಬಳಿ ತಡೆಗೋಡೆಯ ಪಾರ್ಶ್ವದ ಸಿಮೆಂಟ್‌ ಗಾರೆ ಬುಧವಾರ ರಾತ್ರಿ ಕುಸಿಯಿತು. ಇದರಿಂದ ರೈಲು ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ರಾತ್ರಿ 10.20ಕ್ಕೆ ಹೊರಡಬೇಕಿದ್ದ ವೆಸ್ಟ್‌ಕೋಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ಕುಸಿದ ಸಿಮೆಂಟ್‌ ಗಾರೆಯನ್ನು ತೆರವುಗೊಳಿಸಿದ ಬಳಿಕ 11 ಗಂಟೆಗೆ ಬಿಡಲಾಯಿತು.

ಪಡೀಲ್‌ ಕಣ್ಣೂರಿನ ರಾ.ಹೆ. 75ರಲ್ಲಿ ರಸ್ತೆಯಲ್ಲಿ ಮಳೆನೀರು ನಿಂತ ಕಾರಣ ಲಾರಿಯೊಂದಕ್ಕೆ ಹಿಂಬದಿಯಿಂದ ಬೈಕ್‌ ಢಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದಾರೆ.

Advertisement

ಕಾಸರಗೋಡು: ಹೆದ್ದಾರಿಗೆ ಉರುಳಿದ ಮರ
ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿರುಸು ಪಡೆದುಕೊಂಡಿದ್ದು, ಮಳೆ-ಗಾಳಿಗೆ ಹಲವೆಡೆ ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರ ಬಾಧಿತವಾಯಿತು.

ಕಾಸರಗೋಡು ಚೌಕಿ ಸಿಪಿಸಿಆರ್‌ಐ ಪರಿಸರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಸಂಜೆ ಬೃಹತ್‌ ಆಲದ ಮರವೊಂದು ಬುಡ ಸಹಿತ ಉರುಳಿ ಬಿದ್ದಿದ್ದು, ರಾತ್ರಿ 12 ಗಂಟೆಯ ವರೆಗೆ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು.

ಚೌಕಿ-ಕಂಬಾರು ರಸ್ತೆಯ ಅರ್ಜಾಲ್‌ನಲ್ಲಿ ತೇಗದ ಮರ ಹೈಟೆನ್ಶನ್‌ ವಿದ್ಯುತ್‌ ಲೈನ್‌ಗೆ ಮಂಗಳವಾರ ರಾತ್ರಿ ಮುರಿದು ಬಿದ್ದಿದ್ದು, ಹಲವು ವಿದ್ಯುತ್‌ ತಂತಿಗಳು ಕಡಿದು ಬಿದ್ದವು. ಕಾಸರಗೋಡು ಅಗ್ನಿಶಾಮಕ ದಳದವರು ಮರಗಳನ್ನು ತೆರವುಗೊಳಿಸಿದರು.

ಮುಂದುವರಿದ ಕಡಲ್ಕೊರೆತ
ಚೇರಂಗೈ ಕಡಪ್ಪುರದಲ್ಲಿ ಸಮುದ್ರ ಕೊರೆತ ಮುಂದುವರಿದಿದ್ದು, ಹಲವು ಮರಗಳು ಬಿದ್ದಿವೆ. ಕಸಬಾ ಕಡಪ್ಪುರದ ಸಿ.ಕೆ. ಬಾಲನ್‌ ಮನೆಗೆ ಹಾನಿಯಾಗಿದೆ. ಮಣಿಮುಂಡದ ಅಬ್ದುಲ್‌ ರಶೀದ್‌, ಸಫಿಯಾ, ಶಾರದಾ ಅವರ ಮನೆಗಳು ಹಾನಿಗೀಡಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next