Advertisement

ಮಂಗಳಾದೇವಿ: ವಸತಿಗೃಹ ಸಹಿತ ಸುಸಜ್ಜಿತ ಬಸ್‌ ಟರ್ಮಿನಲ್‌

02:24 PM Feb 28, 2022 | Team Udayavani |

ಮಂಗಳಾದೇವಿ : ಇತಿಹಾಸ ಪ್ರಸಿದ್ಧ ಶ್ರೀ ಮಂಗಳಾ ದೇವಿ ದೇವ ಸ್ಥಾನದ ಸಮೀಪದಲ್ಲಿರುವ ಪಾಲಿಕೆಯ ಹಳೆಯ ಕೆಲವು ಕಟ್ಟಡಗಳನ್ನು ತೆರವುಗೊಳಿಸಿ ಅಲ್ಲಿ ಬಸ್‌ ಟರ್ಮಿನಲ್‌, ವಸತಿಗೃಹ ಸಹಿತ ಬಹು ಉಪಯೋಗಿ ಕಟ್ಟಡ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಜಂಟಿಯಾಗಿ ನಿರ್ಧರಿಸಿದೆ.

Advertisement

ಸದ್ಯ ಇಲ್ಲಿ ಜಪ್ಪು ಹೆರಿಗೆ ಕೇಂದ್ರ, ಡಿಸ್ಪೆನ್ಸರಿ, ಪಶುವೈದ್ಯಕೀಯ ಚಿಕಿತ್ಸಾಲಯ, ನಗರ ನೈರ್ಮಲ್ಯ ನಿರೀಕ್ಷಕರ ಕಚೇರಿ ಹಾಗೂ ವಸತಿಗೃಹಗಳಿವೆ. ಸದ್ಯ ಇವು ಹಳೆಯ ಕಟ್ಟಡಗಳಾಗಿದ್ದು ಉಪಯೋಗಿಸಲು ಯೋಗ್ಯವಲ್ಲದ ರೀತಿಯಲ್ಲಿವೆ. ಹೀಗಾಗಿ ಇಲ್ಲಿನ ಹಳೆಯ ಕಟ್ಟಡವನ್ನು ತೆರವುಗೊಳಿಸುವುದು ಅನಿವಾರ್ಯ ವಾಗಿದೆ ಎಂದು ಪಾಲಿಕೆ ನಿರ್ಧರಿಸಿದೆ.

ಈ ಸ್ಥಳವು ಪಾಲಿಕೆಗೆ ಸೇರಿದ್ದು ಹಾಗೂ ಕಟ್ಟಡಗಳು ಸಹ ಪಾಲಿಕೆಯ ಆಸ್ತಿ. ಇವುಗಳು ಬರೋಬ್ಬರಿ 60 ವರ್ಷಗಳಿಗಿಂತಲೂ ಹಳೆಯದಾಗಿದ್ದು, ನಾದುರಸ್ತಿಯಲ್ಲಿದೆ. ದುರಸ್ತಿ, ನಿರ್ವಹಣೆಗೆ ಬಹಳಷ್ಟು ಖರ್ಚು ತಗಲುವ ನಿರೀಕ್ಷೆಯಿದೆ. ಹೀಗಾಗಿ ಇಲ್ಲಿನ ಹಳೆ ಕಟ್ಟಡವನ್ನು ತೆರವುಗೊಳಿಸಿ ಇಲ್ಲಿ ಬಹು ಉಪಯೋಗಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮೇಯರ್‌ ಪ್ರೇಮಾನಂದ ಶೆಟ್ಟಿ ಅವರು ಆಯುಕ್ತರಾದ ಅಕ್ಷಯ್‌ ಶ್ರೀಧರ್‌ ಅವರಿಗೆ ಸೂಚಿಸಿದ್ದರು.

ಈ ಸ್ಥಳದಲ್ಲಿ ಬಸ್‌ ಟರ್ಮಿನಲ್‌, ವಸತಿ ಗೃಹಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯ ಹಾಗೂ ನೈರ್ಮಲ್ಯ ನಿರೀಕ್ಷಕರ ವಾರ್ಡ್‌ ಕಚೇರಿ ಇತ್ಯಾದಿಗಳನ್ನು ಒಳಗೊಂಡ ಬಹು ಉಪಯೋಗಿ ಬಸ್‌ ಟರ್ಮಿನಲ್‌ ಹಬ್‌ ಅಭಿವೃದ್ಧಿಪಡಿಸುವ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಪಾಲಿಕೆಯ ಸಹಯೋಗದೊಂದಿಗೆ ವಸತಿಗೃಹಗಳ ನಿರ್ಮಾಣ ಮಾಡುವುದು ಹಾಗೂ ಬಸ್‌ ಟರ್ಮಿನಲ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯವನ್ನು ಸ್ಮಾರ್ಟ್‌ಸಿಟಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ.

ಸ್ಮಾರ್ಟ್‌ಸಿಟಿ ವತಿಯಿಂದ ಬಸ್‌ ಟರ್ಮಿನಲ್‌, ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯ ಚಿಕಿತ್ಸಾಲಯಗಳನ್ನು ನಿರ್ಮಿಸಲು ಪ್ರಸ್ತಾವನೆ ತಯಾರಿಸಲಾಗಿದೆ. ಇದಕ್ಕೆ ಒಟ್ಟು 442 ಲಕ್ಷ ರೂ. ಎಂದು ಅಂದಾಜಿಸಲಾಗಿದ್ದು ಟೆಂಡರ್‌ ಕರೆಯಲಾಗಿದೆ.

Advertisement

ಬಹುಉಪಯೋಗಿ ಕಟ್ಟಡ ಯೋಜನೆ
ಪಾಲಿಕೆಗೆ ಸೇರಿದ ಸ್ಥಳದಲ್ಲಿ ಇರುವ ಅಪಾಯಕಾರಿ ವಸತಿಗೃಹ, ಡಿಸ್ಪೆನ್ಸರಿ, ಪಶುವೈದ್ಯ ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡಗಳನ್ನು ತೆರವುಗೊಳಿಸಲು ಪಾಲಿಕೆ ಪರಿಷತ್‌ನಲ್ಲಿ ಒಪ್ಪಿಗೆ ದೊರೆತಿದೆ. ಇಲ್ಲಿ ಬಸ್‌ ಟರ್ಮಿನಲ್‌, ವಸತಿಗೃಹ ಸಹಿತ ಬಹು ಉಪಯೋಗಿ ಜನಸ್ನೇಹಿ ಯೋಜನೆಗಳ ಅನುಷ್ಠಾನಕ್ಕೆ ಸ್ಮಾರ್ಟ್‌ ಸಿಟಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಈ ಯೋಜನೆ ಜಾರಿಯಾಗುವ ಮೂಲಕ ಮಂಗಳಾದೇವಿ ವ್ಯಾಪ್ತಿಯಲ್ಲಿ ಅಭಿವೃದ್ಧಿಯ ಹೊಸ ಕನಸು ಸಾಕಾರವಾಗಲಿದೆ.- ಪ್ರೇಮಾನಂದ ಶೆಟ್ಟಿ, ಮೇಯರ್‌, ಮಹಾನಗರ ಪಾಲಿಕೆ

20 ವಸತಿಗೃಹ
ಹಾಲಿ ಅಪಾಯಕಾರಿ ಸ್ಥಿತಿಯಲ್ಲಿರುವ ವಸತಿಗೃಹಗಳನ್ನು ತೆರವುಗೊಳಿಸಿ ಐದು ಅಂತಸ್ತಿನಲ್ಲಿ (ಪ್ರತೀ ಅಂತಸ್ತಿನಲ್ಲಿ 4 ವಸತಿ ಗೃಹ-ಪ್ರತೀ ಮನೆ 99 ಚದರ ಅಡಿ)ಒಟ್ಟು 20 ವಸತಿಗೃಹಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದರಂತೆ ಪ್ರಥಮ ಹಂತದಲ್ಲಿ ಎರಡು ಅಂತಸ್ತಿನ ಎಂಟು ವಸತಿಗೃಹಗಳಿಗೆ ಒಟ್ಟು 199.50 ಲಕ್ಷ ರೂ. ಪ್ರಸ್ತಾವನೆ ತಯಾರಿಸಲಾಗಿದೆ. ಇದು ನಿರ್ಮಾಣವಾದರೆ ಪಾಲಿಕೆ ಸಿಬಂದಿಗೆ ನೆರವಾಗಬಹುದು.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next