Advertisement

ಮಂಗಳೂರು: ಮಂಗಳಾ ಕ್ರೀಡಾಂಗಣ ಗ್ಯಾಲರಿ ಪೂರ್ಣ

01:15 PM Sep 12, 2022 | Team Udayavani |

ಮಹಾನಗರ: ನಗರದ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಯಾಗುತ್ತಿದ್ದು, ಬಹುನಿರೀಕ್ಷಿತ ಮೊದಲನೇ ಹಂತದ ಗ್ಯಾಲರಿ ನಿರ್ಮಾಣ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯ ಮೂಲಕ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಗೊಂಡಿದ್ದು, ಸುಮಾರು 80 ಮೀ. ಉದ್ದಕ್ಕೆ ಪೆವಿಲಿಯನ್‌, ಎರಡು ಮಹಡಿಗಳ ಕಟ್ಟಡ, ಟೆನ್ಸಿಲ್‌ ಛಾವಣಿ, ಸುಮಾರು 600 ಮಂದಿ ವೀಕ್ಷಕರಿಗೆ ಆಸನ ವ್ಯವಸ್ಥೆ, ಶೌಚಾಲಯ, ಕ್ರೀಡಾಪಟುಗಳ ಡ್ರೆಸ್‌ ಛೇಂಜಿಂಗ್‌ ರೂಂ ಮತ್ತು ಟಾಯ್ಲೆಟ್‌ಗಳು, ಜಿಮ್‌ ಕೊಠಡಿ, ಜಿಮ್‌ ಉಪಕರಣ, ಉಗ್ರಾಣ ಕೊಠಡಿ, ಕಚೇರಿ ಕೊಠಡಿ, ಅಗ್ನಿಶಾಮಕ ವ್ಯವಸ್ಥೆ, ಮೋಟಾರೈಸ್ಡ್ ರೋಲಿಂಗ್‌ ಷಟರ್‌ ಮುಂತಾದ ವ್ಯವಸ್ಥೆ ಕಲ್ಪಿಸಲಾಗಿದೆ.

8,000 ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ

ಮಂಗಳಾ ಕ್ರೀಡಾಂಗಣದ ಎರಡನೇ ಹಂತದ ಕಾಮಗಾರಿಯತ್ತ ನಿರೀಕ್ಷೆ ಇಟ್ಟಿದೆ. ಒಟ್ಟಾರೆ ಕ್ರೀಡಾಂಗಣದ ಸುತ್ತಲೂ ಗ್ಯಾಲರಿ ನಿರ್ಮಿಸುವ ಯೋಜನೆ ಇದ್ದು, ಒಟ್ಟು ಸುಮಾರು 120 ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್‌ ಪ್ಲ್ಯಾನ್ ತಯಾರಿಸಲು ಮುಂದಾಗಿದೆ.‌

ಪೂರ್ಣ ಹಂತದ ಅಭಿವೃದ್ಧಿಯ ಬಳಿಕ ಕ್ರೀಡಾಂಗಣದಲ್ಲಿ ಸುಮಾರು 8,000 ಮಂದಿ ಗ್ಯಾಲರಿಯಲ್ಲಿ ಕುಳಿತು ಕ್ರೀಡೆ ವೀಕ್ಷಣೆಗೆ ಸಹಕಾರಿಯಾಗಲಿದೆ. ಕೇಂದ್ರ ಸರಕಾರದ ಖೇಲೋ ಇಂಡಿಯ ಸಹಿತ ಇತರ ಯೋಜನೆಯ ಮೂಲಕ ಹಣ ಹೊಂದಿಸಲು ರೂಪರೇಖೆ ಸಿದ್ಧಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌, ಸ್ಥಳೀಯ ಶಾಸಕ ವೇದವ್ಯಾಸ ಕಾಮತ್‌ ಸಭೆ ನಡೆಸಿ ಚರ್ಚಿಸಿದ್ದಾರೆ.

Advertisement

ಆ್ಯತ್ಲೀಟ್‌ಗಳಿಗೆ ಸುಸಜ್ಜಿತ ಜಿಮ್‌

ಆ್ಯತ್ಲೀಟ್‌ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಮಂಗಳಾ ಕ್ರೀಡಾಂಗಣದ ಒಂದು ಬದಿಯಲ್ಲಿ ಸುಸಜ್ಜಿತ ಜಿಮ್‌ ನಿರ್ಮಾಣಗೊಂಡಿದೆ. ಜಿಮ್‌ನ ಕೊಠಡಿಯಲ್ಲಿ ಕಮರ್ಷಿಯಲ್‌ ಮಲ್ಟಿಜಿಮ್‌ -1, ಕಮರ್ಷಿಯಲ್‌ ಮೋಟರೈಸ್ಡ್ ಟ್ರೆಡ್‌ಮಿಲ್‌-4, ಸ್ಪಿನ್‌ ಬೈಕ್‌-3, ಒಲಿಂಪಿಕ್‌ ಡೆಕ್ಲೈನ್‌ವೈಟ್‌ ಬೆಂಚ್‌, ಮಲ್ಟಿ ಅಡ್ಜಸ್ಟೇಬಲ್‌ ಬೆಂಚ್‌, ಯುಟಿಲಿಟಿ ಬೆಂಚ್‌, ಫ್ಲ್ಯಾಟ್‌ ಬೆಂಚ್‌ ಸಲಕರಣೆಯನ್ನು ಹೊಂದಿದೆ. ಒಟ್ಟು 340 ಕೆ.ಜಿ. ತೂಕದ 2.5 ಕೆ.ಜಿ., 5, 7.5, 10, 15, 20 ಕೆ.ಜಿಯ ರಬ್ಬರ್‌ ಕೋಟೆಡ್‌ ಹೆಕ್ಸಾಗೋನ್‌ ಡಂಬೆಲ್‌ಗ‌ಳು, ಮೂರು ಡಂಬೆಲ್‌ ಸ್ಟ್ಯಾಂಡ್‌ ಅಳವಡಿಸಲಾಗಿದೆ. ತಲಾ ಒಂದು ಫಂಕ್ಷನಲ್‌ ಟ್ರೈನರ್‌, ಎಬಿ ಬೆಂಚ್‌, ಕಮರ್ಷಿಯಲ್‌ ಆಪ್‌ರೈಟ್‌ ಬೈಕ್‌, ಬಾರ್‌ಬೆಲ್‌ ರ್ಯಾಕ್‌, ಎರಡು ವೇಟ್‌ ಲಿಫ್ಟಿಂಗ್‌ ಫ್ಲಾಟ್‌ ಫಾರ್ಮ್, ಜಿಮ್‌ ಮಿರರಲ್‌ ಮುಂತಾದವುಗಳನ್ನು ಒಳಗೊಂಡಿದೆ.

ವಿಸ್ತೃತ ವರದಿ: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣ ಅಭಿವೃದ್ಧಿಯಾಗುತ್ತಿದ್ದು, ಮೊದಲನೇ ಹಂತದ ಕಾಮಗಾರಿ ಶೀಘ್ರ ಉದ್ಘಾಟನೆಗೊಳ್ಳಲಿದೆ. ಮುಂದುವರಿದ ಕಾಮಗಾರಿಗೆ ಅನುದಾನ ಹೊಂದಿಸುವ ನಿಟ್ಟಿನಲ್ಲಿ ಹೊಸ ವಿಸ್ತೃತ ವರದಿ ರಚಿಸಿ, ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು. –ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next