Advertisement

ಕಾರ್ಯಕರ್ತರ ಧೈರ್ಯ, ಬೆಂಬಲವೇ ದೊಡ್ಡ ಶಕ್ತಿ: ಮಂಗಳಾ ಅಂಗಡಿ

10:55 PM Mar 26, 2021 | Team Udayavani |

ಬೆಳಗಾವಿ: ಸುರೇಶ್‌ ಅಂಗಡಿ ಸಾವನ್ನು ಅರಗಿಸಿಕೊಳ್ಳಲು ಈಗಲೂ ಕಷ್ಟಪಡುತ್ತಿರುವ ಅವರ ಪತ್ನಿ ಮಂಗಳಾ ಅಂಗಡಿ ಅವರು ಈಗ ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ. ಪತಿ ಇಲ್ಲದ ಚುನಾವಣೆಯನ್ನು ನಿರೀಕ್ಷಿಸಿರಲಿಲ್ಲ ಎನ್ನುವ ಅವರು, ಸುರೇಶ್‌ ಅಂಗಡಿ 20 ವರ್ಷಗಳ ಕಾಲ ಮಾಡಿದ ಜನಸೇವೆ, ಜನಪರ ಕಾರ್ಯಕ್ರಮಗಳಿಂದಲೇ ತನಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಆಶೀರ್ವಾದವೇ ಶ್ರೀರಕ್ಷೆ ಎಂದು “ಉದಯವಾಣಿ’ ಜತೆ ಮಾತನಾಡುತ್ತಾ ಹೇಳಿಕೊಂಡಿದ್ದಾರೆ.

Advertisement

– ಸುರೇಶ್‌ ಅಂಗಡಿ ಅವರಿಲ್ಲದ ರಾಜಕೀಯ ಹೇಗಿದೆ?
ನಮ್ಮ ಸರ್‌ (ಸುರೇಶ ಅಂಗಡಿ) ಎಲ್ಲವನ್ನೂ ನಿಭಾಯಿಸಿಕೊಂಡು ಹೋಗುತ್ತಿ ದ್ದರು. ನಾನು ಎರಡು ದಶಕಗಳಿಂದ ಅವರ ರಾಜಕೀಯ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದೆ. ಆರು ತಿಂಗಳಾದರೂ ಪತಿಯ ನಿಧನದ ಆಘಾತದಿಂದ ನಮ್ಮ ಕುಟುಂಬ ಹೊರಬಂದಿಲ್ಲ. ಅವರ ಜೀವನ ಶೈಲಿ ಹಾಗೂ ಕೆಲಸ ಮನಸ್ಸಿನಲ್ಲಿ ಶಾಶ್ವತವಾಗಿದೆ. ಅವರು ಕಾರ್ಯಕರ್ತರನ್ನು ಮನೆಯವರಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಾನೂ ಅದನ್ನು ಮುಂದುವರಿಸುತ್ತೇನೆ.

– ಉಪ ಚುನಾವಣೆಯ ಸ್ಪರ್ಧೆ ನಿರೀಕ್ಷೆ ಇತ್ತೇ?
ಖಂಡಿತ ಇರಲಿಲ್ಲ. ಸರ್‌ ಇಲ್ಲದಿದ್ದರೂ ಮನೆಗೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬರುವುದು ನಿಂತಿಲ್ಲ. ಅವರು ಕಣ್ಣೀರು ಹಾಕುತ್ತಾ, ನಾವು ಅನಾಥರಾಗಿದ್ದೇವೆ. ನಿಮ್ಮ ಮನೆಯಲ್ಲಿ ಯಾರಿಗಾದರೂ ಟಿಕೆಟ್‌ ತೆಗೆದುಕೊಂಡು ಬನ್ನಿ. ಮುಂದಿನ ಜವಾಬ್ದಾರಿ ನಮಗೆ ಬಿಡಿ ಎನ್ನುತ್ತಿದ್ದರು. ಇದನ್ನು ಪಕ್ಷದ ವರಿಷ್ಠರ ಗಮನಕ್ಕೆ ತಂದೆವು. ಈಗ ಪಕ್ಷ ಅವಕಾಶ ನೀಡಿದೆ.

– ಉಪ ಚುನಾವಣೆ ಸಿದ್ಧತೆ ಹೇಗಿದೆ?
ಸಮಯದ ಕೊರತೆಯಿದ್ದು, ಪ್ರಚಾರ ವೇಗವಾಗಿ ನಡೆಯಬೇಕು. ನನಗೆ ಟಿಕೆಟ್‌ ಸಿಕ್ಕಿದ್ದು ಗೊತ್ತಾದ ಕೂಡಲೇ ನೂರಾರು ಕಾರ್ಯಕರ್ತರು ಮನೆಗೆ ಬರಲಾರಂಭಿಸಿದ್ದು, ಪ್ರಚಾರದ ಹೊಣೆಯನ್ನು ಹೊತ್ತುಕೊಳ್ಳುತ್ತಿದ್ದಾರೆ. ಕಾರ್ಯಕರ್ತರ ಧೈರ್ಯ ಹಾಗೂ ಬೆಂಬಲವೇ ನಮಗೆ ದೊಡ್ಡ ಶಕ್ತಿ. ಮುಖ್ಯವಾಗಿ ಜಗದೀಶ್‌ ಶೆಟ್ಟರ್‌ ಕೂಡ ಧೈರ್ಯ ತುಂಬಿದ್ದಾರೆ.

– ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ಆಗುತ್ತಿವೆ. ಹೇಗೆ ನಿಭಾಯಿಸುವಿರಿ?
ಎಲ್ಲ ಬೆಳವಣಿಗೆಗಳನ್ನು ಸಕಾರಾತ್ಮಕವಾಗಿ ನೋಡಲಿದ್ದೇನೆ. ಮುಖ್ಯವಾಗಿ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಲಹೆ ಮುಖ್ಯ. ವರಿಷ್ಠರು ಕೊಟ್ಟಿರುವ ಅಭಯ ಹಾಗೂ ಕಾರ್ಯಕರ್ತರ ಸಹಕಾರದಿಂದ ಎಲ್ಲವನ್ನೂ ನಿಭಾಯಿಸುತ್ತೇನೆ,

Advertisement

– ಚುನಾವಣೆಯ ಪ್ರಚಾರದ ಮುಖ್ಯ ವಿಷಯ ಯಾವುದು?
ನಮ್ಮ ಸರ್‌ (ಸುರೇಶ್‌ ಅಂಗಡಿ) 20 ವರ್ಷಗಳಲ್ಲಿ ಮಾಡಿದ ಕೆಲಸ ಹಾಗೂ ಹಾಕಿಕೊಂಡ ಯೋಜನೆ. ಜನರಿಗೂ ಅವರು ಮಾಡಿದ ಕೆಲಸಗಳ ಅರಿವಿದೆ.

– ಎದುರಾಳಿ ಪ್ರಬಲರಾಗಿದ್ದಾರೆ. ಈ ಬಗ್ಗೆ ಏನು ಹೇಳುತ್ತೀರಿ?
ನಮಗೆ ಕಾರ್ಯಕರ್ತರ ಬಲ ಗಟ್ಟಿಯಾಗಿದ್ದು, ಜಯ ಗಳಿಸಲು ಒಳ್ಳೆಯ ಅವಕಾಶವಿದೆ. ಸುರೇಶ್‌ ಅಂಗಡಿ ಅವರ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವ ಕನಸಿದ್ದು, ಅದನ್ನು ಸಾಕಾರಗೊಳಿಸಲು ಜನರು ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ.

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next