Advertisement

ಮಾಣೆಕ್‌ ಷಾ ಮೈದಾನ ಸಜ್ಜು

06:07 AM Jan 25, 2019 | Team Udayavani |

ಬೆಂಗಳೂರು: ಗಣರಾಜ್ಯೋತ್ಸವ ಆಚರಣೆಗೆ ರಾಜಧಾನಿ ಸಕಲ ರೀತಿಯಲ್ಲೂ ಸಜ್ಜುಗೊಂಡಿದ್ದು, ರಾಷ್ಟ್ರೀಯ ಹಬ್ಬದ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಬಿಂದು ಎಂ.ಜಿ.ರಸ್ತೆಯ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಬಿಗಿ ಪೊಲೀಸ್‌ ಸರ್ಪಗಾವಲು ಸಹಿತ ವೇದಿಕೆ ಸಿದ್ಧವಾಗಿದೆ.

Advertisement

ಅಂದು ಮೈದಾನದಲ್ಲಿ ಪೊಲೀಸ್‌, ಸ್ಕೌಟ್ಸ್‌, ಗೈಡ್ಸ್‌, ಎನ್‌ಸಿಸಿ, ಸೇವಾದಳ, ವಿವಿಧ ಶಾಲಾ ವಿದ್ಯಾರ್ಥಿಗಳ ತಂಡಗಳಿಂದ ಆಕರ್ಷಕ ಪಥಸಂಚಲನ ಹಾಗೂ 2,200 ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಗಣರಾಜ್ಯೋತ್ಸವದ ವೀಕ್ಷಣೆಗೆ ಆಗಮಿಸುವವರಿಗೆ ವಿವಿಧ ಹಂತಗಳಲ್ಲಿ ಒಂಬತ್ತು ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಭದ್ರತೆಗಾಗಿ 50 ಕಡೆಗಳಲ್ಲಿ ಸಿಸಿ ಕ್ಯಾಮೆರಾ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮತ್ತು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಂಜುನಾಥ್‌ ಪ್ರಸಾದ್‌ ಮಾತನಾಡಿ, ಅಂದು ಬೆಳಗ್ಗೆ 8.58ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಮೈದಾನಕ್ಕೆ ಆಗಮಿಸಿ, 9 ಗಂಟೆಗೆ ಧ್ವಜಾರೋಹಣ ಮಾಡುವರು. ನಂತರ ಇದೇ ಸಮಯಕ್ಕೆ ಹೆಲಿಕಾಪ್ಟರ್‌ ಮೂಲಕ ಪುಷ್ಪವೃಷ್ಟಿ ಆಗಲಿದೆ. ನಂತರ ರಾಜ್ಯಪಾಲರು ನಾಡಿನ ಜನತೆಗೆ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ.

ನಂತರ 2,200 ಮಕ್ಕಳಿಂದ ಸಾಮೂಹಿಕ ನೃತ್ಯ ಪ್ರದರ್ಶನ, ಟೆಂಟ್‌ ಪೆಗ್ಗಿಂಗ್‌, ಮ್ಯೂಲ್‌ ಟ್ರಿಕ್‌ ರೈಡಿಂಗ್‌, ರೂಮ್‌ ಇಂಟರ್‌ವೆನನ್‌ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಉತ್ಸವಕ್ಕಾಗಿ ಬಿಬಿಎಂಪಿ 45 ಲಕ್ಷ ಹಾಗೂ ಸರ್ಕಾರವು 35 ಲಕ್ಷ ರೂ. ವೆಚ್ಚ ಮಾಡಲಿವೆ ಎಂದರು.

Advertisement

ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌ ಮಾತನಾಡಿ, ಮಾಣೆಕ್‌ ಷಾ ಮೈದಾನದಲ್ಲಿ ನಡೆಯುವ ಇಡೀ ಕಾರ್ಯಕ್ರಮದ ಭದ್ರತೆಗೆ 12 ಡಿಸಿಪಿಗಳು, 16 ಎಸಿಪಿಗಳು, 51 ಇನ್‌ಸ್ಪೆಕ್ಟರ್‌ಗಳು, 108 ಸಬ್‌ ಇನ್‌ಸ್ಪೆಕ್ಟರ್‌ಗಳು, 77 ಎಎಸ್‌ಐ, 71 ಮಹಿಳಾ ಸಿಬ್ಬಂದಿ ಸೇರಿದಂತೆ 1,813 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬಿಳಿಬಣ್ಣದ ಪಾಸುಗಳನ್ನು ಹೊಂದಿರುವ ಅತಿ ಗಣ್ಯ ವ್ಯಕ್ತಿಗಳಿಗೆ “ಜಿ-2′, ಹಳದಿ ಪಾಸು ಹೊಂದಿರುವವರು “ಜಿ-1′ ಹಾಗೂ ಪಿಂಕ್‌ ಪಾಸುಗಳಿರುವವರು “ಜಿ-3′ ಹಾಗೂ ಹಸಿರು ಪಾಸುಗಳನ್ನು ಹೊಂದಿದವರು “ಜಿ-4′ ಪ್ರವೇಶ ದ್ವಾರದ ಮೂಲಕ ಆಗಮಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯ ಶಂಕರ್‌, ನಗರ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

ವಾಹನ ನಿಲುಗಡೆ ನಿಷಿದ್ಧ: ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಮಾಣೆಕ್‌ ಷಾ ಪರೇಡ್‌ ಮೈದಾನಕ್ಕೆ ಕೂಡುವ ರಸ್ತೆಗಳಾದ ಕಾಮರಾಜ ರಸ್ತೆ, ಕಾವೇರಿ ಆರ್ಟ್ಸ್ ಆಂಡ್‌ ಕ್ರಾಫ್ಟ್ ಜಂಕ್ಷನ್‌ನಿಂದ ಕಬ್ಬನ್‌ರಸ್ತೆ, ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್‌ ನಿಲ್ದಾಣ, ಕಬ್ಬನ್‌ ರಸ್ತೆ, ಸಿಟಿಒ ವೃತ್ತದಿಂದ ಕೆ.ಆರ್‌.ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ ಹಾಗೂ ಎಂ.ಜಿ.ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವಿನ್ಸ್‌ ವೃತ್ತದವರೆಗೆ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಹಳದಿ ಮತ್ತು ಬಿಳಿ ಕಾರು ಪಾಸುಗಳನ್ನು ಹೊಂದಿರುವವರಿಗೆ ಮೈದಾನದ ಪಶ್ಚಿಮ ಭಾಗದಲ್ಲಿ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಪಿಂಕ್‌ ಪಾಸು ಹೊಂದಿರುವವರು ಸಫೀನಾ ಪ್ಲಾಜಾ ಮುಂಭಾಗ, ಕಾಮರಾಜ ರಸ್ತೆಯ ಆರ್ಮಿ ಪಬ್ಲಿಕ್‌ ಶಾಲೆ ಮುಂಭಾಗ ಮತ್ತು ಆರ್‌ಎಸ್‌ಐ ಗೇಟ್‌ ಮುಂದೆ ವಾಹನ ನಿಲುಗಡೆ ಮಾಡಬೇಕು.

ಹಸಿರು ಪಾಸುಗಳನ್ನು ಹೊಂದಿರುವವರು ಶಿವಾಜಿನಗರ ಬಸ್‌ ನಿಲ್ದಾಣದ 1ನೇ ಮಹಡಿಯ ವಾಹನ ನಿಲುಗಡೆ ಸ್ಥಳದಲ್ಲಿ ಪಾರ್ಕ್‌ ಮಾಡಬೇಕು. ಶಾಲಾ ಮಕ್ಕಳನ್ನು ಕರೆತರುವ ಬಿಎಂಟಿಸಿ ಬಸ್‌ಗಳ ನಿಲುಗಡೆಗೆ ಅನಿಲ್‌ ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೆ ಅವಕಾಶ ಕಲ್ಪಿಸಲಾಗಿದೆ. ಪಾಸು ಹೊಂದಿಲ್ಲದವರು ಪ್ರವೇಶ ದ್ವಾರ 4ರ ಮೂಲಕ ಮೈದಾನ ಪ್ರವೇಶಿಸಬಹುದು ಎಂದರು.

ಪರ್ಯಾಯ ಮಾರ್ಗ: ಇನ್‌ಫ್ಯಾಂಟ್ರಿ ರಸ್ತೆಯಲ್ಲಿ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫ್ಯಾಂಟ್ರಿ ರಸ್ತೆ- ಸಫೀನಾ ಪ್ಲಾಜಾ ಮೂಲಕ ಎಡ ತಿರುವು ಪಡೆದು, ಮೈನ್‌ಗಾರ್ಡ್‌ರಸ್ತೆ- ಆಲಿ ಸರ್ಕಲ್‌- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ- ಕಬ್ಬನ್‌ ರಸ್ತೆ-ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗಬಹುದು.

ಮಣಿಪಾಲ್‌ ಸೆಂಟರ್‌ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್‌ ಕಡೆಗೆ ಹೋಗುವ ವಾಹನಗಳು ಕಾಮರಾಜ ರಸ್ತೆ ಮತ್ತು ಕಬ್ಬನ್‌ ರಸ್ತೆ, ಕಾವೇರಿ ಆರ್ಟ್ಸ್ ಆಂಡ್‌ ಕ್ರಾಫ್ಟ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಎಂ.ಜಿ.ರಸ್ತೆ ಮೂಲಕ ಅನಿಲ್‌ ಕುಂಬ್ಳೆ ವೃತ್ತದಲ್ಲಿ ತಿರುವು ಪಡೆದು ಹೋಗಬಹುದು. 

ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್‌ ರಸ್ತೆಯಲ್ಲಿ ಸಾಗಿ, ಬಲಕ್ಕೆ ತಿರುಗಿ ಇನ್‌ಫ್ಯಾಂಟ್ರಿ ರಸ್ತೆ-ಸಫೀನಾ ಪ್ಲಾಜಾ ಎಡಕ್ಕೆ ತಿರುವು ಪಡೆದು, ಮೈನ್‌ಗಾರ್ಡ್‌ ರಸ್ತೆ-ಆಲಿ ಸರ್ಕಲ್‌-ಡಿಸ್ಪೆನ್ಸರಿ ರಸ್ತೆ-ಕಾಮರಾಜ ರಸ್ತೆಯಿಂದ ಕಬ್ಬನ್‌ ರಸ್ತೆ ಮೂಲಕ ಮಣಿಪಾಲ್‌ ಸೆಂಟರ್‌ಗೆ ಬರಬಹುದು.

ಕಬ್ಬನ್‌ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ಗೆ ಹೋಗುವವರು ಎಂ.ಜಿ.ರಸ್ತೆಯಲ್ಲಿ ಸಾಗಿ, ಅನಿಲ್‌ ಕುಂಬ್ಳೆ ವೃತ್ತದ ಬಳಿಗೆ ಬಂದು, ಬಲ ತಿರುವು ಪಡೆದು, ಬಿಆರ್‌ವಿ ಜಂಕ್ಷನ್‌ನಲ್ಲಿ ನೇರವಾಗಿ ಸಂಚರಿಸಿ, ಸೆಂಟ್ರಲ್‌ ಸ್ಟ್ರೀಟ್‌ ರಸ್ತೆ ಮೂಲಕ ಸಾಗಬಹುದು. 

ಇವೆಲ್ಲವನ್ನು ತರುವಂತಿಲ್ಲ: ಭದ್ರತೆ ದೃಷ್ಟಿಯಿಂದ ಸಿಗರೇಟ್‌, ಬೆಂಕಿಪೊಟ್ಟಣ, ಕರಪತ್ರ, ಬಣ್ಣದ ದ್ರಾವಣ, ಮದ್ಯ ಅಥವಾ ನೀರಿನ ಬಾಟಲಿಗಳು ಮತ್ತು ಕ್ಯಾನ್‌ಗಳು, ಶಸ್ತ್ರಾಸ್ತ್ರ, ತಿಂಡಿ-ತಿನಿಸು, ಮಾದಕ ವಸ್ತು, ಬಾವುಟ, ಪಟಾಕಿ ಮತ್ತು ಸ್ಫೋಟಕ ವಸ್ತುಗಳು, ಮೊಬೈಲ್‌, ಕ್ಯಾಮೆರಾ, ರೇಡಿಯೋ, ಕೊಡೆ, ಕೈಚೀಲ ತರುವಂತಿಲ್ಲ. ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಂದರೆ ಬೆಳಗ್ಗೆ 8.30ಕ್ಕೆ ಮೈದಾನದಲ್ಲಿ ಹಾಜರಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next