Advertisement

73ನೇ ಸ್ವಾತಂತ್ರ್ಯೋತ್ಸವಕ್ಕೆ ಮಾಣೆಕ್‌ ಷಾ ಪರೇಡ್ ಮೈದಾನ ಸಜ್ಜು

01:06 AM Aug 14, 2019 | Lakshmi GovindaRaj |

ಬೆಂಗಳೂರು: 73ನೇ ಸ್ವಾತಂತ್ರ್ಯ ದಿನಾಚರಣೆಗೆ ನಗರದ ಕಬ್ಬನ್‌ ರಸ್ತೆಯ ಫೀಲ್ಡ್‌ ಮಾರ್ಷಲ್‌ ಮಾಣೆಕ್‌ ಷಾ ಪರೇಡ್‌ ಮೈದಾನ ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದು, ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಳೆದ ಒಂದು ವಾರದಿಂದ ತಾಲೀಮು ನಡೆಯುತ್ತಿದೆ.

Advertisement

ಸದ್ಯ ಮೈದಾನದಲ್ಲಿ ಒಂದೆಡೆ ವೇದಿಕೆ ನಿರ್ಮಾಣ, ಆಸನ ವ್ಯವಸ್ಥೆ ಮಾಡಲಾಗುತ್ತಿದ್ದು, ಇನ್ನೊಂದೆಡೆ ಕೆಎಸ್‌ಆರ್‌ಪಿ, ಸ್ಕೌಟ್ಸ್‌-ಗೈಡ್ಸ್‌, ಎನ್‌ಸಿಸಿ, ಸೇವಾದಳ, ವಿವಿಧ ಶಾಲಾ ಮಕ್ಕಳನ್ನು ಸೇರಿ 1,130 ಮಂದಿಯ 34 ತುಕಡಿಗಳು ಪಥಸಂಚಲನ ತಾಲೀಮು ನಡೆಸುತ್ತಿದ್ದಾರೆ. ಸಮರ್ಪಣಾ ಅಂಧ ಮಕ್ಕಳ ತಂಡ, ಶ್ವಾನ ಪೊಲೀಸ್‌ ದಳದ ಪಥಸಂಚಲನವು ಎಲ್ಲರನ್ನು ಆಕರ್ಷಿಸುವಂತಿದೆ. ಮಧ್ಯಾಹ್ನ ಬಳಿಕ ಬಿಬಿಎಂಪಿ ಹಾಗೂ ಸರ್ಕಾರಿ ಶಾಲೆಯ 1,250ಕ್ಕೂ ಹೆಚ್ಚು ಮಕ್ಕಳು ನೃತ್ಯ ತಯಾರಿಯಲ್ಲಿ ನಿರತರಾಗಿದ್ದರು.

ಮಂಗಳವಾರ ಬಿಬಿಎಂಪಿ ಆಯುಕ್ತರು, ನಗರ ಪೊಲೀಸ್‌ ಆಯುಕ್ತರು ಹಾಗೂ ನಗರ ಜಿಲ್ಲಾಧಿಕಾರಿಗಳನ್ನು ಸೇರಿಂದತೆ ಸೇನಾ ಪಡೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ 34 ತುಕಡಿಗಳಿಂದ ಪಥಸಂಚಲನ ಹಾಗೂ ಮೃತ್ಯುಂಜಯ ದೊಡ್ಡವಾಡ ತಂಡದಿಂದ ನಾಡಗೀತೆ ಮತ್ತು ರೈತಗೀತೆಯ ಅಂತಿಮ ಹಂತದ ತಾಲೀಮು ನಡೆಯಿತು.

ಮುಖ್ಯಮಂತ್ರಿಗಳಿಂದ ಧ್ವಜಾರೋಹಣ: ಮಂಗಳವಾರ ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌ ಮಾತನಾಡಿ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಗುರುವಾರ ಬೆಳಗ್ಗೆ 8.58ಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೈದಾನಕ್ಕೆ ಆಗಮಿಸಲಿದ್ದಾರೆ. ಬಳಿಕ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ವಾಯುಪಡೆಯು ಹೆಲಿಕಾಪ್ಟರ್‌ ಮೂಲಕ ಪುಪ್ಪವೃಷ್ಟಿ ಮಾಡಲಿದೆ.

ಬಳಿಕ ಪರೇಡ್‌ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಸಿಎಂ ಭಾಷಣ ಮಾಡಲಿದ್ದಾರೆ ಎಂದರು. ಸಾರ್ವಜನಿಕರಿಗಾಗಿ 7,000 ಆಸನಗಳು, ಅತಿಗಣ್ಯರಿಗೆ 1,200 ಆಸನಗಳು, ಸ್ವಾತಂತ್ರ್ಯ ಹೋರಾಟಗಾರರು, ಗಣ್ಯರು, ರಕ್ಷಣಾ ಇಲಾಖೆ ಅಧಿಕಾರಿಗಳಿಗೆ 750 ಆಸನಗಳು, ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳಿಗಾಗಿ 2,500 ಆಸನಗಳು ಸೇರಿದಂತೆ ಒಟ್ಟು 11,450 ಆಸನ ವ್ಯವಸ್ಥೆ ಮಾಡಲಾಗಿದೆ ಎಂದರು.

Advertisement

ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಮಾತನಾಡಿ, ಮಾಣೆಕ್‌ ಷಾ ಪರೇಡ್‌ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಲಾಗಿದೆ. ಮೈದಾನದ ಸಮೀಪದಲ್ಲಿರುವ ಎತ್ತರದ ಕಟ್ಟಡಗಳು, ಕಾಮಗಾರಿ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಜತೆಗೆ ನಗರದ 108 ಪೊಲೀಸ್‌ ಠಾಣೆಗಳ ಮೂಲಕ ಆಯಾ ವ್ಯಾಪ್ತಿಯಲ್ಲಿನ ರೈಲ್ವೆ ನಿಲ್ದಾಣ, ಹೋಟೆಲ್‌ಗ‌ಳು ಸೇರಿದಂತೆ ಎಲ್ಲೆಡೆಯೂ ಪರಿಶೀಲನೆ ನಡೆಸಲಾಗಿದೆ.

ಮೈದಾನದ ನಾಲ್ಕೂ ದ್ವಾರಗಳಲ್ಲೂ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಲಿದ್ದು, ಮೈದಾನದ ಒಳಗೆ ಅಥವಾ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು, ವ್ಯಕ್ತಿ ಕಂಡು ಬಂದರೆ ಹತ್ತಿರದ ಪೊಲೀಸ್‌ ಸಿಬ್ಬಂದಿಗೆ ತಿಳಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು. ಸಂಚಾರ ವಿಭಾಗದ ಪೊಲೀಸ್‌ ಜಂಟಿ ಆಯುಕ್ತ ಡಾ.ಬಿ.ಆರ್‌.ರವಿಕಾಂತೇಗೌಡ ಮಾತನಾಡಿ,

ವಾಹನ ನಿಲುಗಡೆಗೆ ನಾಲ್ಕು ಬಣ್ಣದ ಪಾಸ್‌ಗಳನ್ನು ಮಾಡಲಾಗಿದ್ದು, ಅವುಗಳಲ್ಲಿ ಯಾವ ದ್ವಾರದಿಂದ ಮೈದಾನಕ್ಕೆ ಬರಬೇಕು, ವಾಹನಗಳನ್ನು ಎಲ್ಲಿ ನಿಲುಗಡೆ ಮಾಡಬೇಕು ಎಂದು ತಿಳಿಸಲಾಗಿದೆ. ಮೈದಾನ ಸುತ್ತಮುತ್ತ ಯಾವುದೇ ವಾಹನಗಳಿಗೆ ನಿಲ್ಲಿಸುವಂತಿಲ್ಲ, ಬೆಳಗ್ಗೆ 8 ರಿಂದ 11 ಗಂಟೆವರೆಗೂ ಕಬ್ಬನ್‌ ರಸ್ತೆಯ ಬಿಆರ್‌ವಿ ಜಂನಕ್ಷನ್‌ನಿಂದ ಕಾಮರಾಜ ರಸ್ತೆಯ ಜಂಕ್ಷನ್‌ವರೆಗೂ ವಾಹನ ಸಂಚಾರ ನಿಷೇಧವಿರುತ್ತದೆ. ಪೊಲೀಸ್‌ ಸಿಬ್ಬಂದಿಗಳು ಮಾಹಿತಿ ನೀಡಿ ಮಾರ್ಗದರ್ಶನ ಮಾಡುತ್ತಾರೆ ಎಂದು ಹೇಳಿದರು.

ಮೈದಾನದಲ್ಲಿ ಹೆಚ್ಚಿನ ಭದ್ರತೆ: ಮೇಲಧಿಕಾರಿಗಳಿಂದ ಈ ಬಾರಿ ಹೆಚ್ಚಿನ ಭದ್ರತೆ ಒದಗಿಸಲು ಸೂಚನೆ ಬಂದಿತ್ತು. ಅಹಿತಕರ ಘಟನೆ ನಡೆಯಂತೆ ಎಚ್ಚರ ವಹಿಸಲು ಮೈದಾನದಲ್ಲಿ 1,906 ಮಂದಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದ್ದು, 50ಕ್ಕೂ ಹೆಚ್ಚು ಸಿಸಿ ಟಿವಿಗಳು, ನಾಲ್ಕು ಬ್ಯಾಗೇಜ್‌ ಸ್ಕ್ಯಾನರ್‌ ಅಳವಡಿಸಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್‌ ಆಯುಕ್ತರು, 11 ಡಿಸಿಪಿ, 23 ಎಸಿಪಿ, 78 ಪಿಐ, 175 ಪಿಎಸ್‌ಐ, 221 ಎಎಸ್‌ಐ, 1108 ಪೇದೆಗಳು, 77 ಮಹಿಳಾ ಪೊಲೀಸ್‌ ಸಿಬ್ಬಂದಿಗಳು ಹಾಗೂ 150 ಕ್ಕೂ ಹೆಚ್ಚು ಮಫ್ತಿ ಪೊಲೀಸರನ್ನು ನಿಯೋಜಿಸಲಾಗಿದೆ. ಮೈದಾನದ ಬಂದೋಬಸ್ತ್ಗೆ 10 ಕೆಎಸ್‌ಆರ್‌ಪಿ ಹಾಗೂ ಸಿಎಆರ್‌ ತುಕಡಿಗಳು ಕಾರ್ಯಚರಣೆ ನಡೆಸಲಿವೆ. ಇನ್ನು ತುರ್ತು ಸೇವೆಗೆ ಅಗ್ನಿ ಶಾಮಕ ವಾಹನ, ಆಂಬುಲೆನ್ಸ್‌, ಗರುಡ ಫೋರ್ಸ್‌ ಹಾಗೂ ವೈದ್ಯಕೀಯ ಸಿಬ್ಬಂದಿ ಇರಲಿದ್ದಾರೆ’ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಹೊಸರಾಜ್ಯ ಪೊಲೀಸ್‌ ಮೀಸಲು ಪಡೆ ಭಾಗಿ: ರಾಜ್ಯಗಳ ನಡುವೆ ಸೌಹಾರ್ದತೆ ಮೂಡಿಸಲು ಪ್ರಧಾನ ಮಂತ್ರಿಗಳ ಸೂಚನೆ ಮೇರೆಗೆ ಕಳೆದ ಮೂರು ವರ್ಷಗಳಿಂದ ಪೊಲೀಸ್‌ ಮೀಸಲು ಪಡೆ ತಂಡಗಳು ಇತರೆ ರಾಜ್ಯಗಳ ಪರೇಡ್‌ಗಳಲ್ಲಿ ಭಾಗವಹಿಸುತ್ತಿವೆ. ಕರ್ನಾಟಕ ಮೀಸಲು ಪಡೆಯ ತಂಡಗಳು ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ನಡೆಯುವ ಪರೇಡ್‌ನ‌ಲ್ಲಿ ಭಾಗವಹಿಸಲಿದ್ದು, ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗೋವಾ ಪೊಲೀಸ್‌ ಮಿಸಲು ಪಡೆಯು ಭಾಗವಹಿಸುತ್ತಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದರು.

ಸೆಲ್ಫಿಗೀಳಿಗೆ ಕಡಿವಾಣ: ಪಥಸಂಚಲನ ನಡೆಯುವಾಗ, ಸೇನಾ ಸಿಬ್ಬಂದಿಯೊಂದಿಗೆ ಅಥವಾ ಗಣ್ಯ ವ್ಯಕ್ತಿಗಳೊಂದಿಗೆ ಸೆಲ್ಫಿ ತೆಗೆದಿಕೊಳ್ಳಲು ಯುವಕ-ಯುವತಿಯರು ಮುಗಿಬೀಳುತ್ತಾರೆ. ಇದರಿಂದ ಸಮಯ ನಷ್ಟ, ಕಾರ್ಯಕ್ರಮಕ್ಕೆ ಅಡಚಣೆ ಜತೆಗೆ ಭದ್ರತೆಗೆ ತೊಡಕಾಗುತ್ತದೆ. ಹೀಗಾಗಿ, ನಾಗರಿಕರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗದೇ ಸ್ವಯಂ ಶಿಸ್ತಿನಿಂದ ವರ್ತಿಸಬೇಕು’ ಎಂದು ನಗರ ಪೊಲೀಸ್‌ ಆಯುಕ್ತರು ಮನವಿ ಮಾಡಿದ್ದಾರೆ.

ಮೈದಾನದೊಳಗೆ ನಿಷೇಧಿಸಿರುವ ವಸ್ತುಗಳು: ಹೆಲ್ಮೆಟ್‌, ಕರಪತ್ರಗಳು, ಎಲ್ಲಾ ವಿಧದ ಕ್ಯಾಮರಾಗಳು, ನೀರಿನ ಬಾಟಲ್‌, ಸಿಗರೇಟ್‌, ಬೆಂಕಿಪೊಟ್ಟಣ, ಶಸ್ತ್ರಾಸ್ತ್ರಗಳು, ಹರಿತವಾದ ವಸ್ತುಗಳು, ಕಪ್ಪು ಕರವಸ್ತ್ರ, ತಿಂಡಿ ತಿನಿಸು, ಮಧ್ಯದ ಬಾಟಲ್‌, ಬಾವುಟಗಳು, ಪಟಾಕಿ ಮತ್ತು ನ್ಪೋಟಕ ವಸ್ತುಗಳು.

ಪ್ರವೇಶ ದ್ವಾರ – ಆಗಮಿಸುವವರು – ಆಸನಗಳ ಸಂಖ್ಯೆ – ವಾಹನ ನಿಲುಗಡೆ
ಜಿ 1 (ಹಳದಿ ಬಣ್ಣದ ಪಾಸ್‌) – ಸ್ವಾತಂತ್ರ್ಯ ಹೋರಾಟಗಾರರು, ಗಣ್ಯ ವ್ಯಕ್ತಿಗಳು, ರಕ್ಷಣಾ ಇಲಾಖೆ ಅಧಿಕಾರಿಗಳು. – 750.- ಕಬ್ಬನ್‌ ರಸ್ತೆಯ ಮೂಲಕ ಮೈದಾನ ಒಳಪ್ರವೇಶಿಸಿ ಮೈದಾನದ ಪಶ್ಚಿಮ ಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಜಿ 2 (ಬಿಳಿ ಬಣ್ಣದ ಪಾಸ್‌)- ಅತಿಗಣ್ಯ ವ್ಯಕ್ತಿಗಳು.- 1,200. ಕಬ್ಬನ್‌ ರಸ್ತೆಯ ಮೂಲಕ ಮೈದಾನ ಒಳಪ್ರವೇಶಿಸಿ ಮೈದಾನದ ಪಶ್ಚಿಮ ಭಾಗದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಜಿ 3 (ಗುಲಾಬಿ ಬಣ್ಣದ ಪಾಸ್‌)- ಇತರೆ ಇಲಾಖೆ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಬಿಎಸ್‌ಎಫ್ ಯೋಧರು. – 2,500. ಮೈನ್‌ಗಾರ್ಡ್‌ ಕ್ರಾಸ್‌ ರಸ್ತೆ, ಅಫೀನಾ ಪ್ಲಾಜಾ ಮುಂಭಾಗ, ಕಾಮರಾಜ ರಸ್ತೆಯ ಆರ್ಮಿ ಪಬ್ಲಿಕ್‌ ಶಾಲೆ ಮುಂಭಾಗ.

ಜಿ 4 – ಸಾರ್ವಜನಿಕರು.- 7,000. ಹಸಿರು ಪಾಸ್‌ ಹೊಂದಿದವರು ಹಾಗೂ ಪಾಸ್‌ ಇಲ್ಲದ ಎಲ್ಲಾ ಸಾರ್ವಜನಿಕರು ಕಾರುಗಳು ಹಾಗೂ ದ್ವಿಚಕ್ರವಾಹನಗಳನ್ನು ಶಿವಾಜಿ ನಗರ ಬಸ್‌ ನಿಲ್ದಾಣದ 1ನೇ ಮಹಡಿ.

-ಶಾಲಾ ಮಕ್ಕಳನ್ನು ಹಾಗೂ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರನ್ನು ಕರೆತರುವ ಎಲ್ಲಾ ಬಸ್‌ಗಳು ಕಬ್ಬನ್‌ ರಸ್ತೆಯ ಪ್ರವೇಶ ದ್ವಾರ-1 ರಲ್ಲಿ ಅವರನ್ನು ಇಳಿಸಿ ಆನಂತರ ಅನಿಲ್‌ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದವರೆಗೂ ಎಂ.ಜಿ ರಸ್ತೆಯ ಎಡ ಭಾಗದಲ್ಲಿ ನಿಲ್ಲಿಸಬೇಕು.

ಸಂಚಾರ ನಿರ್ಬಂಧ: ಬದಲಿ ಮಾರ್ಗಗಳು
* ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ ಆ.15ರಂದು ಬೆಳಗ್ಗೆ 8.30 ರಿಂದ 10.30ರ ವರೆಗೆ ಕಬ್ಬನ್‌ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೂ ಎರಡೂ ದಿಕ್ಕುಗಳಲ್ಲಿ ಸಂಚಾರ ನಿರ್ಬಂಧಿಸಿದ್ದು, ಪರ್ಯಾಯ ಮಾರ್ಗ ಸೂಚಿಸಲಾಗಿದೆ.

* ಕಬ್ಬನ್‌ ಪಾರ್ಕ್‌, ಬಿವಿಆರ್‌ ಜಂಕ್ಷನ್‌ ಕಡೆಯಿಂದ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ಇನ್‌ಫೆಂಟ್ರಿ ರಸ್ತೆಗೆ ಬಂದು ಸಫೀನಾ ಪ್ಲಾಜಾದ ಬಳಿ ಎಡ ತಿರುವು ಪಡೆದು ಮೈನ್‌ಗಾರ್ಡ್‌ ರಸ್ತೆ – ಆಲೀಸ್‌ ಸರ್ಕಲ್‌- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡೆಕನ್‌ಸನ್‌ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ ಜಂಕ್ಷನ ಬಳಿ ಎಡಕ್ಕೆ ತಿರುವು ಪಡೆದು ಮನಿಪಾಲ್‌ ಸೆಂಟರ್‌ಗೆ ಹೋಗಬಹುದು.

* ಮಣಿಪಾಲ್‌ ಸೆಂಟರ್‌ ಕಡೆಯಿಂದ ಬಿಆರ್‌ವಿ ಜಂಕ್ಷನ್‌ ಕಡೆ ಹೋಗುವ ವಾಹನಗಳು ಎಂ.ಜಿ.ರಸ್ತೆಗೆ ತೆರಳಿ ಅನಿಲ್‌ಕುಂಬ್ಳೆ ವೃತ್ತದಲ್ಲಿ ಎಡಕ್ಕೆ ತಿರುವು ಪಡೆಯುವ ಮೂಲಕ ಸಾಗಬಹುದು.

ವಾಹನ ನಿಲುಗಡೆ ನಿಷೇಧಿತ ರಸ್ತೆಗಳು:
* ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿ ನಗರ ಬಸ್‌ ನಿಲ್ದಾಣವರೆಗೆ.

* ಕಬ್ಬನ್‌ ರಸ್ತೆ, ಸಿಟಿಒ ವೃತ್ತ, ಕೆ.ಆರ್‌.ರಸ್ತೆ.

* ಎಂ.ಜಿ.ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ರಸ್ತೆವರೆಗೆ.

ಸಾಂಸ್ಕೃತಿಕ ಕಾರ್ಯಕ್ರಮ
* ಮೃತ್ಯುಂಜಯ ದೊಡ್ಡವಾಡ ತಂಡದಿಂದ ನಾಡಗೀತೆ ಹಾಗೂ ರೈತಗೀತೆ.

* ಉತ್ತರಹಳ್ಳಿ ಸರ್ಕಾರಿ ಪ್ರೌಢಶಾಲೆಯ 650 ಮಕ್ಕಳಿಂದ “ಭಾರತಾಂಬೆಯ ಮಡಿಲಿನ ಮಕ್ಕಳು’ ಗೀತೆಗೆ ನೃತ್ಯ.

* ಹೇರೋಹಳ್ಳಿ ಬಿಬಿಎಂಪಿ ಪ್ರೌಢಶಾಲೆ ಮಕ್ಕಳಿಂದ “ಜಲಿಯನ್‌ ವಾಲಾಬಾಗ್‌ ಹತ್ಯಾಕಾಂಡ-1919” ರೂಪಕ ಪ್ರದರ್ಶನ.

* ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌, ಬೆಂಗಳೂರಿನ 26 ಸದಸ್ಯರಿಂದ ಜಿಮ್ನಾಸ್ಟಿಕ್ಸ್‌.

* ತಮಿಳುನಾಡಿನ ಮದ್ರಾಸ್‌ ರೆಜಿಮೆಂಟಲ್‌ ಸೆಂಟರ್‌ 29 ಸದಸ್ಯರಿಂದ ಕಲಾರಿಪಯಟ್ಟು (ಮಾರ್ಷಲ್‌ ಆರ್ಟ್‌) ಪ್ರದರ್ಶನ.

Advertisement

Udayavani is now on Telegram. Click here to join our channel and stay updated with the latest news.

Next