ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಸಮಾಜ ಸಂಪರ್ಕ ವೇದಿಕೆ ಮತ್ತು ರಾಜ್ಯ ಚುಂಚಾದ್ರಿ ಮಹಿಳಾ ಒಕ್ಕೂಟದ ಸಹಯೋಗದಲ್ಲಿ ಭಾನುವಾರ ನಡೆದ ಒಕ್ಕಲಿಗ ವಧು-ವರ ಸಮಾವೇಶಕ್ಕೆ ಮಂಡ್ಯ ಜಿಲ್ಲೆ ಸೇರಿ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಧು-ವರರು ಆಯ್ಕೆಗೆ ಬಂದಿದ್ದರು. ಸುಮಾರು 12 ಸಾವಿರ ಮಂದಿ ಸಮಾವೇಶದಲ್ಲಿ ನೋಂದಣಿಯಾಗಿದ್ದು, ಈ ಪೈಕಿ 250 ಹುಡುಗಿಯರಷ್ಟೇ ವರನಿಗಾಗಿ ನೋಂದಣಿ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಸುಮಾರು 12 ಸಾವಿರ ಹುಡುಗರು ಮತ್ತು ಅವರ ಸಂಗಡ ಬಂದಿದ್ದ ಪೋಷಕರು ಸೇರಿ 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಮಠವು ಜನರಿಂದ ತುಂಬಿ ತುಳುಕುತ್ತಿತ್ತು.
ಶ್ರೀ ಮಠದ ಬಿಜಿಎಸ್ ಸಭಾಭವನದಲ್ಲಿ ಬೆಳಗ್ಗೆ 9.30ಕ್ಕೆ ಆರಂಭವಾದ ಸಮಾವೇಶ ಮಧ್ಯಾಹ್ನ 2ಗಂಟೆ ವರೆಗೂ ನಡೆಯಿತು. ಸಭಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ವರರು ವೇದಿಕೆ ಮೇಲೆ ನಿಂತು ತಮ್ಮ ಸ್ವ ವಿವರಗಳ ಮಾಹಿತಿ ನೀಡಿದರು.
ಮಠದ ಆವರಣ ಸಂಪೂರ್ಣವಾಗಿ ಜನರಿಂದ ಭರ್ತಿಯಾಗಿ ಕಾಲಿಡಲು ಜಾಗವಿಲ್ಲದಂತಾಗಿತ್ತು. ವರರ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ವಧುಗಳ ಪೋಷಕರು ಸಮಾವೇಶದ ವೇದಿಕೆ ಹತ್ತಲು ಹಿಂದೇಟು ಹಾಕಿದರು. ಸಮಾವೇಶದಲ್ಲಿ ರೈತ ಸಮೂಹಕ್ಕೆ ಸೇರಿದ ಹಳ್ಳಿಗಾಡಿನ ಹುಡುಗರೇ ಹೆಚ್ಚಾಗಿದ್ದರು.