ಮಂಡ್ಯ: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ರೂ. ಹಣವನ್ನು ಲಪಟಾಯಿಸಿ ವಂಚಿಸಿದ್ದ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ದೋಷಿಗಳೆಂದು ತೀರ್ಪು ನೀಡಿ ಆದೇಶ ಹೊರಡಿಸಿದೆ.
ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್, ಸಹಚರರಾದ ಎಚ್. ಎಸ್.ನಾಗಲಿಂಗಸ್ವಾಮಿ, ಚಂದ್ರಶೇಖರ್, ಮೂಡಾ ಕಚೇರಿಯ ಎಫ್‌ಡಿಎ ಎಚ್.ಕೆ.ನಾಗರಾಜು ಹಾಗೂ ಕೆ.ಬಿ.ಹರ್ಷನ್ ಅಪರಾಧಿಗಳಾಗಿದ್ದು, ಐದು ಮಂದಿಗೂ 7 ವರ್ಷ ಕಠಿಣ ಸಜೆ ಹಾಗೂ ತಲಾ ಒಂದು ಕೋಟಿ ರೂ. ದಂಡ ವಿಧಿಸಿದೆ.
2013ರಲ್ಲಿ ಬೆಳಕಿಗೆ ಬಂದ ಪ್ರಕರಣ: ಸಮಾಜ ಸೇವಕರಾಗಿ ಮಂಡ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದ ಕೆಬ್ಬಳ್ಳಿ ಆನಂದ್ ಹಾಗೂ ಇತರರು 2013ರಲ್ಲಿ ಮಂಡ್ಯ ನಗರಾಭಿವೃದ್ಧಿ ಪ್ರಾ ಧಿಕಾರಕ್ಕೆ ಸೇರಿದ ಐದು ಕೋಟಿ ರೂ. ಹಣವನ್ನು ನಗರದ ಅಲಹಾಬಾದ್ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿತ್ತು. ಅದನ್ನು ಮೂಡಾ ಸಿಬ್ಬಂದಿಗಳಿಂದ ಪಡೆದು ವಂಚಿಸಿದ್ದರು. ಅಲ್ಲದೆ, ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲೂ ಹಣವನ್ನು ಪಡೆದಿದ್ದರು.
11 ಮಂದಿ ವಿರುದ್ಧ ದೂರು: ಬ್ಯಾಂಕಿನಲ್ಲಿದ್ದ ಹಣ ದುರುಪ ಯೋಗವಾಗಿರುವ ಬಗ್ಗೆ ಮಾಹಿತಿ ಪಡೆದ ಆಗಿನ ಆಯುಕ್ತರು 2013ರ ಜುಲೈ 5ರಂದು ಕಾಂಗ್ರೆಸ್ ಮುಖಂಡ ಕೆಬ್ಬಳ್ಳಿ ಆನಂದ್ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಪೊಲೀಸರು 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಐವರ ವಿರುದ್ಧ ಚಾರ್ಜ್‌ಶೀಟ್: ಹಣ ವಂಚನೆ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ವಿಧಾನಸಭೆಯಲ್ಲೂ ಪ್ರತಿಧ್ವನಿ ಸಿತ್ತು. ಆ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ನಂತರ ವಿಚಾರಣೆಗಿಳಿದ ಸಿಬಿಐ ಡಿವೈಎಸ್ಪಿ ಕೆ.ವೈ.ಗುರುಪ್ರಸಾದ್ ನೇತೃತ್ವದ ತಂಡ 11 ಮಂದಿ ಪೈಕಿ 6 ಜನರನ್ನು ಕೈಬಿಟ್ಟು 5 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು.
9 ವರ್ಷ ಸುದೀರ್ಘ ವಿಚಾರಣೆ: ಸುದೀರ್ಘ 9 ವರ್ಷ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ ಸಂಜೆ ಐವರು ಅಪರಾಧಿಗಳೆಂದು ಘೋಷಿಸಿ ತೀರ್ಪು ಪ್ರಕಟಿಸಿದೆ. ಆರೋಪಿಗಳು ವಂಚಿಸಿದ್ದ ಹಣವನ್ನು ಇಂಡಿಯನ್ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇವೆ ಎಂದು ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು ಎನ್ನಲಾಗಿದೆ. ಆದರೆ, ವಿಚಾರಣೆ ವೇಳೆಯಲ್ಲಿ ಹಣ ಬ್ಯಾಂಕಿನಲ್ಲಿ ಠೇವಣಿ ಇರಲಿಲ್ಲ ಎಂಬುದು ತಿಳಿದು ಬಂದಿದೆ.
ಜಾಮೀನು ಪಡೆದಿದ್ದ ಆರೋಪಿಗಳು: ವಿಚಾರಣೆ ಸಂದರ್ಭದಲ್ಲಿ ಐವರು ಆರೋಪಿಗಳನ್ನು ಬಂ ಧಿಸಲಾಗಿತ್ತು. ಕೆಲವು ದಿನಗಳ ಬಳಿಕ ಷರತ್ತಿನ ಮೇಲೆ ಆರೋಪಿಗಳಿಗೆ ಜಾಮೀನು ನೀಡಲಾಗಿತ್ತು. ಅಲ್ಲಿಂದ ಸುದೀರ್ಘವಾಗಿ ನ್ಯಾಯಾಲಯದಲ್ಲಿ ವಾದ-ವಿವಾದ ನಡೆದಿತ್ತು. ಏಳು ವರ್ಷ ಕಠಿಣ ಸಜೆ ಹಾಗೂ ತಲಾ ಒಂದು ಕೋಟಿ ರೂ. ದಂಡ ವಿಧಿಸಿ ತೀರ್ಪು ನೀಡಿದೆ.