Advertisement

ಮಂಡ್ಯ: ಡಿ ಗ್ರೂಪ್ ನೌಕರನಿಗೆ ಮೊದಲ ಲಸಿಕೆ ನೀಡಿದ ಜಿಲ್ಲಾಧಿಕಾರಿ ಡಾ. ಎಂ.ವಿ ವೆoಕಟೇಶ್

03:40 PM Jan 16, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ಕೋವಿಡ್-19 ವಿರುದ್ಧ ಹೋರಾಡುವ ಬಹುನಿರೀಕ್ಷಿತ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯ ಮೊದಲ ದಿನ ಶನಿವಾರ ಯಾವುದೇ ಆತಂಕ, ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಡೆಯಿತು.

Advertisement

ನಗರದ ಮಿ‍ಮ್ಸ್ ನಲ್ಲಿ ಮೊದಲ ಲಸಿಕೆ ಕಾರ್ಯಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಚಾಲನೆ ನೀಡಿದರು. ಮಿ‍ಮ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿ ಗ್ರೂಪ್ ನೌಕರ ನಂದೀಶ್ ಜಿಲ್ಲೆಯಲ್ಲಿಯೇ ಮೊದಲ ಲಸಿಕೆ ಪಡೆದ ಕೋವಿಡ್ ವಾರಿಯರ್ಸ್ ಆಗಿದ್ದಾರೆ. ನಂತರ 2ನೇಯವರಾಗಿ ಸಫಾಯಿ ಕರ್ಮಚಾರಿ ಪುಟ್ಟಲಿಂಗಮ್ಮ, 3ನೇಯವರಾಗಿ ಶುಶ್ರೂಷಕಿ ಸವಿತಾ ಅವರಿಗೆ ಲಸಿಕೆ ನೀಡಲಾಯಿತು.

ಲಸಿಕೆ ನೀಡಿದ ಜಿಲ್ಲಾಧಿಕಾರಿ:

ಸ್ವತಃ ವೈದ್ಯರಾಗಿರುವ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಲಸಿಕೆ ಹೇಗೆ ನೀಡಬೇಕೆಂಬ ಮಾಹಿತಿ ಪಡೆದು ನಂತರ ಬಾಟಲ್‌ನಿಂದ ಸಿರೆಂಜ್ ಮೂಲಕ 0.5 ಎಂಎಲ್ ಲಸಿಕೆ ತೆಗೆದು ಡಿ ಗ್ರೂಪ್ ನೌಕರ ನಂದೀಶ್‌ಗೆ ಚುಚ್ಚುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

ನಂತರ ಜಿಲ್ಲೆಯ 8 ಕೇಂದ್ರಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶನಿವಾರ ಪ್ರತಿ ಕೇಂದ್ರದಲ್ಲಿ ತಲಾ 100 ಜನರಂತೆ 800 ಮಂದಿಗೆ ಲಸಿಕೆ ನೀಡಲಾಗಿದ್ದು, ಎಲ್ಲರ ಮೇಲೂ 30 ನಿಮಿಷಗಳ ಕಾಲ ನಿಗಾ ಇಡಲಾಗಿತ್ತು. ಲಸಿಕೆಯಿಂದ ವಾಂತಿ, ತಲೆಸುತ್ತು, ಬಿಪಿ, ಶುಗರ್ ಏರಿಳಿತ, ಲಸಿಕೆ ಹಾಕಿದ ಜಾಗದಲ್ಲಿ ಗುಳ್ಳೆ ಬರುವುದು, ಅಲರ್ಜಿ ಆಗುವುದು ಸೇರಿದಂತೆ ವಿವಿಧ ರೀತಿಯಲ್ಲಿ ತೊಂದರೆ ಆಗಬಹುದಾ ಎಂದು ಎಚ್ಚರಿಕೆ ವಹಿಸಲಾಗಿತ್ತು. ಲಸಿಕೆ ಪಡೆದ ಪ್ರತಿಯೊಬ್ಬರೂ ಆರೋಗ್ಯವಾಗಿದ್ದರು.

Advertisement

ಸೋಮವಾರ ಲಸಿಕಾ ಕೇಂದ್ರಗಳನ್ನು 72ಕ್ಕೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೇಂದ್ರಗಳನ್ನು ಗುರುತಿಸಿದ್ದು, ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಇದನ್ನೂ ಓದಿ:  ಅಡ್ಡಪರಿಣಾಮ ಆಗಲಿಲ್ಲ, ಆರೋಗ್ಯವಾಗಿದ್ದೇವೆ: ಕೋವಿಶೀಲ್ಡ್ ಲಸಿಕೆ ಪಡೆದವರ ಅನುಭವ

ಜಿಲ್ಲೆಗೆ 8000 ಸಾವಿರ ಕೋವಿಶೀಲ್ಡ್ ಲಸಿಕೆ ಬಂದಿದ್ದು, ಒಟ್ಟು 15,316 ಜನರಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಲಾಗಿದೆ. ಮಿಮ್ಸ್, ಆರು ತಾಲೂಕು ಆಸ್ಪತ್ರೆ, ಮಂಡ್ಯ ತಾಲೂಕು ಕೊತ್ತತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ 8 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಆನ್‌ಲೈನ್ ನೋಂದಾಯಿಸಿಕೊಂಡಿರುವ ಆರೋಗ್ಯ ಕಾರ್ಯಕರ್ತರು, ಸಫಾಯಿ ಕರ್ಮಚಾರಿಗಳಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತಿದೆ. ಎರಡನೇ ಡೋಸ್ ಅನ್ನು 28ನೇ ದಿನ ನೀಡಲಾಗುವುದು.

ಮುಂದಿನ ದಿನಗಳಲ್ಲಿ ಕಂದಾಯ, ಪೊಲೀಸ್, ಸ್ಥಳೀಯ ಸಂಸ್ಥೆಗಳ ನೌಕರರು ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. ಬಳಿಕ ಸರ್ಕಾರದ ಮಾರ್ಗಸೂಚಿಯನ್ವಯ ಕ್ರಮ ವಹಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲೂ ಲಸಿಕೆ ನೀಡಲು ಮೂರು ಕೊಠಡಿ ತೆರೆಯಲಾಗಿದೆ. ಲಸಿಕೆ ಪಡೆದವರನ್ನು ಗಮನಿಸಿಕೊಳ್ಳಲು ಅರವಳಿಕೆ ತಜ್ಞ, ಫಿಜಿಷಿಯನ್ ಸೇರಿದಂತೆ ಐವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ:  ಹಿಂದೂಪರ ಮಾತನಾಡಿದ್ದಕ್ಕೆ ಪೊಲೀಸ್ ಭದ್ರತೆ ಹಿಂಪಡೆದ ಸರ್ಕಾರ :ಯತ್ನಾಳ ಆಕ್ರೋಶ

Advertisement

Udayavani is now on Telegram. Click here to join our channel and stay updated with the latest news.

Next