ಮಂಡ್ಯ: ಮಂಡ್ಯ ಉಪವಿಭಾಗದ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಎಚ್.ಎಸ್.ಕೀರ್ತನಾ ಅವರು 4ನೇ ವಯಸ್ಸಿ ನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟು ಸಿನಿಮಾ ಹಾಗೂ ಕಿರುತೆರೆಯ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಚಿತ್ರರಂಗದ ದಿಗ್ಗಜರೊಂದಿಗೆ ಬಾಲನಟಿಯಾಗಿ ಅಭಿನಯಿಸಿ ಸ್ಟಾರ್ ಬಾಲನಟಿಯಾಗಿ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿಗಳನ್ನು ಪಡೆದಿದ್ದಾರೆ. ಸುಮಾರು 32 ಸಿನಿಮಾ, 48 ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಹಲವು ಚಿತ್ರಗಳು: ಕರ್ಪೂರದ ಗೊಂಬೆ, ಗಂಗ- ಯಮುನಾ, ಮುದ್ದಿನ ಅಳಿಯ, ಉಪೇಂದ್ರ, ಎ, ಕಾನೂರು ಹೆಗ್ಗಡತಿ, ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮೀಷನರ್, ಹಬ್ಬ, ದೊರೆ ಸೇರಿದಂತೆ 32ಕ್ಕೂ ಹೆಚ್ಚು ಸಿನಿಮಾ ಹಾಗೂ ಜನನಿ, ಚಿಗುರು, ಪುಟಾಣಿ ಏಜೆಂಟ್ ಸೇರಿದಂತೆ ಇತರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ನಟರಾದ ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರಮೇಶ್, ಶಶಿಕುಮಾರ್, ದೇವರಾಜ್, ಮಾಲಾಶ್ರೀ, ಶಿಲ್ಪಾ, ಶ್ರುತಿ, ಶ್ವೇತಾ, ಸಿತಾರಾ ಮೊದಲಾದವರೊಂದಿಗೆ ಬಾಲ ನಟಿಯಾಗಿ ಕನ್ನಡ ಚಲನಚಿತ್ರರಂಗದಲ್ಲಿ ನಟಿಸಿದ್ದಾರೆ.
ಕೆಎಎಸ್ ಅಧಿಕಾರಿ ಆಗಿದ್ದರು: ನಂತರ ತಂದೆಯ ಸಲಹೆಯಂತೆ ಎಚ್.ಎಸ್.ಕೀರ್ತನಾ ಓದಿನತ್ತ ಗಮನಹರಿಸಿ 2011ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದು ಕೆಎಎಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಯುಪಿಎಸ್ಸಿ ಪರೀಕ್ಷೆ ಬರೆದು 6ನೇ ಪ್ರಯತ್ನದಲ್ಲಿ 167ನೇ ರ್‍ಯಾಂಕ್ ಗಳಿಸುವ ಮೂಲಕ ಐಎಎಸ್ ಅಧಿಕಾರಿಯಾಗಿದ್ದಾರೆ. 2020ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಎಚ್.ಎಸ್.ಕೀರ್ತನಾ ಅವರು, ಬಹಳ ಶ್ರಮ ಪಟ್ಟು ಓದಿ ತಂದೆ, ತಾಯಿಯ ಆಶೀರ್ವಾದ ಮತ್ತು ಪ್ರೋತ್ಸಾಹದಿಂದ ಐಎಎಸ್ ಅಧಿಕಾರಿಯಾಗಿದ್ದಾರೆ. ಪ್ರಸ್ತುತ ಪೂರ್ಣ ಪ್ರಮಾಣದ ಐಎಎಸ್ ಅಧಿಕಾರಿಯಾಗಿ ಮಂಡ್ಯ ಉಪವಿಭಾಗಾಧಿ ಕಾರಿಯಾಗಿ ನೇಮಕಗೊಂಡಿದ್ದಾರೆ.
ಸಹಕಾರಕ್ಕೆ ಮನವಿ: ಮೊದಲು ನಾನು ಬೀದರ್‌ನಲ್ಲಿ ತರಬೇತಿ ಮುಗಿಸಿ ನೇರವಾಗಿ ಮಂಡ್ಯ ಉಪವಿಭಾಗಾಧಿಕಾರಿಯಾಗಿ ನಿಯೋಜನೆಗೊಂಡಿದ್ದೇನೆ. ಇಲ್ಲಿ ಸೇವೆ ಸಲ್ಲಿಸಲು ಜಿಲ್ಲೆಯ ಜನರ ಸಹಕಾರ ಅಗತ್ಯ. ಆದ್ದರಿಂದ ನೀವೆಲ್ಲರೂ ಸಹಕಾರ ನೀಡಬೇಕು ಎಂದು ಮಂಡ್ಯ ಉಪವಿಭಾಗಾಧಿಕಾರಿ ಕೀರ್ತನಾ ಮನವಿ ಮಾಡಿದ್ದಾರೆ.