Advertisement

ಪಂಜುರ್ಲಿ ದೈವದತ್ತ ತಿರುಗಿದ ಮಂಡ್ಯ ರಾಜಕಾರಣ!

04:20 PM Oct 18, 2022 | Team Udayavani |

ಮಂಡ್ಯ: ಮುಂದಿನ 2023ರ ವಿಧಾನಸಭಾ ಚುನಾವಣೆ ಹಿನ್ನೆಲೆ ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌, ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳು ಮತದಾರರನ್ನು ಧರ್ಮಸ್ಥಳ ಯಾತ್ರೆ ಮಾಡಿಸಿ ಪಂಜುರ್ಲಿ ದೈವಗಳ ದರ್ಶನವನ್ನೂ ಮಾಡಿಸುತ್ತಿದ್ದಾರೆ.  ಈ ಮೂಲಕ ಜಿಲ್ಲೆಯ ರಾಜಕಾರಣ ಪಂಜುರ್ಲಿ ದೈವದತ್ತ ತಿರುಗುತ್ತಿದೆಯೇ ಎಂದೇ ಎಲ್ಲೆಡೆ ಚರ್ಚೆಯಾಗುತ್ತಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಪಂಜುರ್ಲಿ ದೈವಗಳೇ ಹೆಚ್ಚು ನೆಲೆಸಿದ್ದಾರೆ. ಧರ್ಮಸ್ಥಳ ಮಂಜುನಾಥಸ್ವಾಮಿ, ಕಾವಲುಗಾರ ಅಣ್ಣಪ್ಪ ಸ್ವಾಮಿ, ಕುಕ್ಕೆಸುಬ್ರಹ್ಮಣ್ಯಸ್ವಾಮಿಯೂ ಪಂಜುರ್ಲಿ ದೈವದ ಸ್ವರೂಪಿಗಳಾಗಿದ್ದಾರೆ ಎಂಬ ಇತಿಹಾಸವೇ ಹೇಳುತ್ತದೆ. ಆ ಭಾಗಕ್ಕೆ ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರರು ಹೆಚ್ಚು ಪ್ರವಾಸ ಮಾಡುವಂತಾಗಿದೆ.

ಧರ್ಮಸ್ಥಳ, ಕುಕ್ಕೆ ದರ್ಶನ: ಜೆಡಿಎಸ್‌ -ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರು ಮಂಡ್ಯ ಕ್ಷೇತ್ರದ ಜನರನ್ನು ಧರ್ಮಸ್ಥಳ ಯಾತ್ರೆ ಮಾಡಿಸುತ್ತಿದ್ದಾರೆ. ಯಾತ್ರೆಯಲ್ಲಿ ಧರ್ಮಸ್ಥಳ ಮಂಜುನಾಥಸ್ವಾಮಿ, ಕುಕ್ಕೆಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಕಡ್ಡಾಯವಾಗಿದೆ. ಇನ್ನುಳಿದಂತೆ ಸೌತಡ್ಕ ಗಣಪತಿ ದೇವಾಲಯ ದರ್ಶನವನ್ನೂ ಮಾಡಿಸಲಾಗುತ್ತಿದೆ.

ಟಿಕೆಟ್‌ ಆಕಾಂಕ್ಷಿಗಳಿಂದ ಯಾತ್ರೆ: ಮೊದಲ ಬಾರಿಗೆ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಶ್ರೀಶಂಭು ಸೇವಾ ಟ್ರಸ್ಟ್‌ ಮೂಲಕ ಶ್ರೀಶಂಭು ಧರ್ಮಯಾತ್ರೆ ಆರಂಭಿಸಿದರು. ತಮ್ಮ ತಂದೆ- ತಾಯಿ ಹೆಸರಿನಲ್ಲಿ ಕ್ಷೇತ್ರದ ಬಡವರು ಸೇರಿ ಎಲ್ಲಾ ವರ್ಗದ ಜನರಿಗೆ ಧರ್ಮಸ್ಥಳ ಯಾತ್ರೆ ಮಾಡಿಸಲು ಪ್ರಾರಂಭಿಸಿದರು. ಇದು ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಬೀರಿತು. ನಂತರ ಜೆಡಿಎಸ್‌ ಮುಖಂಡ ಎಚ್‌.ಎನ್‌. ಯೋಗೇಶ್‌ ತಮ್ಮ ಮಾವ ಶಾಸಕ ಎಂ.ಶ್ರೀನಿವಾಸ್‌ ಹೆಸರಿನಲ್ಲಿ ಧರ್ಮಯಾತ್ರೆ ಆರಂಭಿಸಿದರು. ಒಂದೇ ಬಾರಿಗೆ ಸಾವಿರಾರು ಮಂದಿಯನ್ನು ಧರ್ಮಯಾತ್ರೆಗೆ ಕಳುಹಿಸುವ ಮೂಲಕ ಗಮನ ಸೆಳೆದರು. ಬಿ.ಆರ್‌. ರಾಮಚಂದ್ರು, ಯೋಗೇಶ್‌ ಇಬ್ಬರೂ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿತರಾಗಿದ್ದಾರೆ. ಇಬ್ಬರು ಮುಖಂಡರು ಮಾತ್ರ ರಾಜಕೀಯ ಅಥವಾ ಚುನಾವಣೆ ದೃಷ್ಟಿಯಿಂದ ನಡೆಸುತ್ತಿಲ್ಲ ಎಂದು ಸ್ಪಷ್ಟನೆ ನೀಡುತ್ತಿದ್ದಾರೆ. ಆದರೆ, ಇದು ಕ್ಷೇತ್ರದಲ್ಲಿ ಚುನಾವಣೆ ರಾಜಕೀಯ ಚರ್ಚೆಯ ವಿಷಯವಾಗಿದೆ!.

ಕೈ ಮುಖಂಡನಿಂದ ಯಾತ್ರೆ: ಜೆಡಿಎಸ್‌ ಮುಖಂ ಡರ ಧರ್ಮಯಾತ್ರೆ ಕಂಡು ವಿಚಲಿತರಾದ ಕಾಂಗ್ರೆಸ್‌ ಮುಖಂಡ ಪಿ.ರವಿಕುಮಾರ್‌ ಗಣಿಗ ಅವರೂ ಧರ್ಮಯಾತ್ರೆ ಕೈಗೊಂಡಿದ್ದಾರೆ. ರವಿ ಕುಮಾರ್‌ ಗಣಿಗ ಕಳೆದ 2018ರ ಕಾಂಗ್ರೆಸ್‌ ಅಭ್ಯ ರ್ಥಿಯಾಗಿ ಸೋಲು ಕಂಡಿದ್ದರು. ಸೋಮವಾರ ದಿಂದ ಧರ್ಮ ಸ್ಥಳ ಧರ್ಮಯಾತ್ರೆ ಆರಂಭಿಸಿರುವ ರವಿಕುಮಾರ್‌, ಬಸ್‌ಗಳಲ್ಲಿ ಮತದಾರರನ್ನು ಯಾತ್ರೆಗೆ ಕಳುಹಿಸಿ ದ್ದಾರೆ. ಸಾಂಪ್ರದಾಯಿಕ ಎದುರಾ ಳಿಗಳಾದ ಜೆಡಿ ಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಮೊದಲಿನಿಂದಲೂ ತೀವ್ರ ಪೈಪೋಟಿ ಇದೆ. ಎರಡು ಪಕ್ಷಗಳಲ್ಲಿ ಮಂಡ್ಯ ಕೇಂದ್ರ ಸ್ಥಾನದ ಕ್ಷೇತ್ರದಲ್ಲಿ ಧರ್ಮಯಾತ್ರೆ ರಾಜಕೀಯ ಆರಂಭವಾಗಿದ್ದು, ಮತ್ತಷ್ಟು ರಂಗುಪಡೆದಿದೆ. ಕೈ-ದಳದಲ್ಲಿ ಟಿಕೆಟ್‌ ರೇಸ್‌ನಲ್ಲಿ ಯಾರಿಗೆ ಧರ್ಮಯಾತ್ರೆಯ ಪಂಜುರ್ಲಿ ದೈವಗಳ ಕೃಪೆ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ. ‌

Advertisement

ಮತದಾರರಿಗೆ ಯಾತ್ರೆಯ ಗೊಂದಲ: ಈಗಾಗಲೇ ಜೆಡಿಎಸ್‌ನಿಂದ ಧರ್ಮಸ್ಥಳ ಯಾತ್ರೆ ಮಾಡಿರುವ ಮತದಾರರು ಮತ್ತೆ ಧರ್ಮಸ್ಥಳಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಒಂದೇ ಕಡೆ ಧರ್ಮಯಾತ್ರೆ ಹಮ್ಮಿಕೊಂಡಿರುವುದು ಯಾರ ಕಡೆಗೆ ಹೋಗುವುದು ಎಂಬ ಗೊಂದಲದಲ್ಲಿದ್ದಾರೆ. ಅಲ್ಲದೇ, ಬೇರೆ ಬೇರೆ ಸ್ಥಳಗಳಿಗೆ ಯಾತ್ರೆ ಮಾಡಿಸಬಹುದು ಎಂಬ ಅಭಿಪ್ರಾಯ ಮತದಾರರಿಂದ ಕೇಳಿ ಬರುತ್ತಿದೆ. ಈಗ ಮತ್ತೆ ಕಾಂಗ್ರೆಸ್‌ ಮುಖಂಡ ರವಿಕುಮಾರ್‌ ಕೂಡ ಕ್ಷೇತ್ರದ ಮತದಾರರಿಗೆ ಧರ್ಮಸ್ಥಳ ಯಾತ್ರೆ ಮಾಡಿಸುತ್ತಿರುವುದರಿಂದ ಮತದಾರರು 3ನೇ ಬಾರಿ ಧರ್ಮಸ್ಥಳ ಯಾತ್ರೆ ಮಾಡುವಂತಾಗಿದೆ.

ಬೆಂಬಲಿಗರಿಂದಲೇ ಟಿಕೆಟ್‌ ಘೋಷಣೆ: ಜೆಡಿಎಸ್‌ನಲ್ಲಿ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌. ರಾಮಚಂದ್ರು ಹಾಗೂ ಎಚ್‌.ಎನ್‌.ಯೋಗೇಶ್‌ ಬೆಂಬಲಿಗರ ನಡುವೆ ಟಿಕೆಟ್‌ ಯಾರಿಗೆ ಸಿಗಲಿದೆ ಎಂಬ ಚರ್ಚೆ ನಡೆಯುತ್ತಿವೆ. ಇಬ್ಬರ ಬೆಂಬಲಿಗರು ತಮ್ಮ ತಮ್ಮ ನಾಯಕರಿಗೆ ಸಿಗಲಿದೆ ಎಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವ್ಯಾಟ್ಸಪ್‌ಗ್ಳಲ್ಲಿ ಕರಪತ್ರದಂತೆ ರಚಿಸಿ ಹರಿಯಬಿಟ್ಟಿದ್ದಾರೆ. ಇದು ಎಲ್ಲೆಡೆ ವೈರಲ್‌ ಆಗುತ್ತಿದೆ. ಅಲ್ಲದೆ, ಹರಿದಾಡುತ್ತಿರುವ ಕರಪತ್ರದಲ್ಲಿ ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ಮನ್‌ಮುಲ್‌ ನಿರ್ದೇಶಕ ಎಚ್‌.ಟಿ.ಮಂಜು ಅವರ ಹೆಸರೂ ಸೇರಿದೆ.

ಪಕ್ಷಗಳ ಕಣ್ಣು ಮಂಡ್ಯ ಮೇಲೆ: ದಳಪತಿಗಳಿಗೆ ತಲೆನೋವು : ಮಂಡ್ಯ ಕೇಂದ್ರ ಸ್ಥಾನದ ಮೇಲೆಯೇ ಎಲ್ಲಾ ರಾಜಕೀಯ ಪಕ್ಷಗಳ ಕಣ್ಣು ಬಿದ್ದಿದೆ. ಅದರಲ್ಲೂ ಜೆಡಿಎಸ್‌ಗೆ 2023ರ ಚುನಾವಣೆಯಲ್ಲಿ ಸ್ಥಾನ ಉಳಿಸಿಕೊಳ್ಳುವುದು ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಈಗಾಗಲೇ ಪಕ್ಷದ ಟಿಕೆಟ್‌ ಆಕಾಂಕ್ಷಿಗಳು ನಾಯಕರ ಗಮನ ಸೆಳೆಯಲು ಮುಂದಾಗಿದ್ದಾರೆ. ಜೆಡಿಎಸ್‌ನಲ್ಲಿ ಬಿ.ಆರ್‌.ರಾಮ ಚಂದ್ರು, ಎಚ್‌.ಎನ್‌.ಯೋಗೇಶ್‌, ಕೆ.ಎಸ್‌.ವಿಜಯಾನಂದ ಹಾಗೂ ಮುದ್ದನಘಟ್ಟ ಮಹಾಲಿಂಗೇಗೌಡ ರೇಸ್‌ನಲ್ಲಿದ್ದಾರೆ. ನಾಲ್ವರಲ್ಲಿ ಯಾರಿಗೆ ಟಿಕೆಟ್‌ ನೀಡುವುದು ಎಂಬ ಗೊಂದಲ ಉಂಟಾಗಿದೆ. ಕೆ.ಆರ್‌.ಪೇಟೆ ಕ್ಷೇತ್ರದಲ್ಲೂ ಇದೇ ಸಮಸ್ಯೆ ತಲೆದೋರಿದೆ. ಹೀಗಾಗಿ ಇದುವರೆಗೂ ಮಂಡ್ಯ, ಕೆ.ಆರ್‌.ಪೇಟೆ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next