ಮಂಡ್ಯ: ಸ್ವಾತಂತ್ರ್ಯ ಕಹಳೆಗೆ ವೇದಿಕೆಯಾಗಿದ್ದ ಹಾಗೂ ಘಟಾನುಘಟಿ ನಾಯಕರು ಬೆಳೆದಂತಹ ಮದ್ದೂರು ವಿಧಾನಸಭಾ ಕ್ಷೇತ್ರ ಈ ಬಾರಿ ರಂಗೇರುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ಎರಡು ಚುನಾವಣೆಗಳಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಎದುರಾಳಿಯೇ ಇರಲಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್, ಬಿಜೆಪಿ ಜತೆಗೆ ಸಮಾಜ ಸೇವಕ ಕದಲೂರು ಉದಯ್ ಸ್ಪರ್ಧಿಸುವ ಸಾಧ್ಯತೆ ಇದೆ.
ಹಾಲಿ ಶಾಸಕ ಡಿ.ಸಿ.ತಮ್ಮಣ್ಣ ಜೆಡಿಎಸ್‌ನಿಂದ ಅಭ್ಯರ್ಥಿ ಆಗುವುದು ಖಚಿತವಾಗಿದ್ದು, ಮತ್ತೂಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದರೆ, ಬಿಜೆಪಿಯಿಂದ ಎಸ್.ಪಿ. ಸ್ವಾಮಿ ಅಥವಾ ಬೇರೆಯವರು ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ನಿಂದ ಮೂವರು ಅರ್ಜಿ ಸಲ್ಲಿಸಿದ್ದು, ಈಗಾಗಲೇ ಮಾಜಿ ಸಿಎಂ ಎಸ್. ಎಂ.ಕೃಷ್ಣ ಸಂಬಂ ಗುರುಚರಣ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಸಮಾಜ ಸೇವಕ ಕದಲೂರು ಉದಯ್ ಚುನಾವಣೆ ಸಿದ್ಧತೆಯಲ್ಲಿಯೇ ಕ್ಷೇತ್ರದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಆದರೆ, ಯಾವ ಪಕ್ಷದಿಂದ ಎಂಬುದು ಇನ್ನೂ ಅಂತಿಮವಾಗಿಲ್ಲ ಹ್ಯಾಟ್ರಿಕ್‌ಗೆ ತಮ್ಮಣ್ಣ ಸಿದ್ಧತೆ: ಶಾಸಕ ಡಿ.ಸಿ.ತಮ್ಮಣ್ಣ ಸತತ ಮೂರನೇ ಗೆಲುವಿನ ಸಿದ್ಧತೆಯಲ್ಲಿದ್ದಾರೆ. ಇದೇ ನನ್ನ ಕೊನೇ ಚುನಾವಣೆ ಎಂದು ಹೇಳಿಕೆ ನೀಡಿರುವ ಅವರು ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಪ್ರದಕ್ಷಿಣೆ ಹಾಕುತ್ತಿ ದ್ದಾರೆ. ಗ್ರಾಪಂ, ಹೋಬಳಿ, ತಾಲೂಕು ಮಟ್ಟದ ಕಾರ್ಯ ಕರ್ತರ ಸಭೆ ನಡೆಸುತ್ತಿರುವ ತಮ್ಮಣ್ಣ, ಈ ಬಾರಿಯೂ ಗೆಲುವು ಸಾಧಿ ಸಲೇಬೇಕು ಎಂಬ ಹಠ ತೊಟ್ಟಿದ್ದಾರೆ. ಕ್ಷೇತ್ರದಲ್ಲಿ ಪಕ್ಷದಲ್ಲಿ ತನ್ನದೇ ಆದ ಹಿಡಿತ ಹೊಂದಿದ್ದಾರೆ. ಡಿ.ಸಿ.ತಮ್ಮಣ್ಣಗೆ ಎಲ್ಲಾ ರೀತಿಯ ಪ್ರಬಲ ಪೈಪೋಟಿ ನೀಡುವಂತಹ ಅಭ್ಯರ್ಥಿಗಳು ಇಲ್ಲ ಎಂಬ ಚರ್ಚೆಗಳು ಕೂಡ ಕೇಳಿ ಬರುತ್ತಿವೆ.
ಅಭ್ಯರ್ಥಿ ಘೋಷಿಸಿದ್ರೂ ಇಬ್ಬರಿಂದ ಅರ್ಜಿ: ಈಗಾಗಲೇ ಮದ್ದೂರಿಗೆ ಜಿಪಂ ಮಾಜಿ ಸದಸ್ಯ ಹಾಗೂ ಎಸ್.ಎಂ.ಕೃಷ್ಣ ಸಹೋದರ ಎಸ್. ಎಂ.ಶಂಕರ್ ಅವರ ಪುತ್ರ ಎಸ್.ಗುರುಚರಣ್ ಅಭ್ಯರ್ಥಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕು ಮಾರ್ ಹಿಂದೆಯೇ ಘೋಷಣೆ ಮಾಡಿದ್ದಾರೆ. ಇದರ ನಡುವೆಯೂ ಕೆಪಿಸಿಸಿಗೆ ವಿಧಾನ ಪರಿ ಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ, ಕಾಂಗ್ರೆಸ್ ಮುಖಂಡ ಶಂಕರೇಗೌಡ ಅರ್ಜಿ ಸಲ್ಲಿಸುವ ಮೂಲಕ ನಾವೂ ಕೂಡ ಆಕಾಂಕ್ಷಿತರಿದ್ದೇವೆ ಎಂದು ಸಂದೇಶ ರವಾನಿಸಿದ್ದಾರೆ. ಈಗ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಬಿಜೆಪಿಯಿಂದ ಎಸ್.ಪಿ.ಸ್ವಾಮಿ ಸ್ಪರ್ಧೆ?: ಈ ಬಾರಿ ಬಿಜೆಪಿಯಿಂದ ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ಸ್ಪರ್ಧಿಸ ಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತನ್ನ ಪತ್ನಿ ನಾಗರತ್ನಸ್ವಾಮಿ ಅವ ರನ್ನು ಜಿಪಂನ ಗದ್ದುಗೆ ಉಳಿಸಲು ಜೆಡಿಎಸ್‌ಗೆ ಟಕ್ಕರ್ ನೀಡಿ ಕಮಲ ಹಿಡಿದ ಎಸ್.ಪಿ.ಸ್ವಾಮಿ ಅಂದಿನಿಂದಲೂ ಮದ್ದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದೇ ಬಿಂಬಿಸಿಕೊಂಡಿದ್ದಾರೆ. ಅಲ್ಲದೆ, ವಿವಿಧ ಸಾಮಾಜಿಕ ಕಾರ್ಯಕ್ರಮ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಬಿಜೆಪಿ ಕೊನೇ ಕ್ಷಣದಲ್ಲಿ ಅಭ್ಯರ್ಥಿ ಬದಲಾಯಿಸಿದರೂ ಅಚ್ಚರಿ ಇಲ್ಲ
ಸಂಚಲನ ಮೂಡಿಸಿರುವ ಉದಯ್ :
ಕಳೆದ ಒಂದು ವರ್ಷದಿಂದ ಮದ್ದೂರು ಕ್ಷೇತ್ರದಲ್ಲಿ ಸಮಾಜ ಸೇವಕ ಕದಲೂರು ಉದಯ್ ಎಂಬ ಹೆಸರು ಸದ್ದು ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಶಾಸಕ ಡಿ.ಸಿ.ತಮ್ಮಣ್ಣಗೆ ಪ್ರಬಲ ಅಭ್ಯರ್ಥಿ ಯಾಗಲಿದ್ದಾರೆ ಎಂಬ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಕ್ಷೇತ್ರದ ಜನರಿಗೆ ವಿವಿಧ ಸಾಮಾಜಿಕ ಕಾರ್ಯಕ್ರಮ ಹಾಗೂ ವಿವಿಧ ಉಡುಗೊರೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ, ಯಾವ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಆಗಾಗ್ಗೆ ಕಾಂಗ್ರೆಸ್ ಅಥವಾ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಉದಯ್ ಮಾತ್ರ ಯಾವ ಪಕ್ಷ ಸೇರುತ್ತೇನೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ
-ಎಚ್.ಶಿವರಾಜು