Advertisement

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

12:37 PM Dec 21, 2024 | Team Udayavani |

ಉದಯವಾಣಿ ಸಮಾಚಾರ
ಮಂಡ್ಯ: ಸಾಹಿತ್ಯ ಸಮ್ಮೇಳನದ ಅಕ್ಷರ ಜಾತ್ರೆಯ ಊಟದ ಕೌಂಟರ್‌ನಲ್ಲಿ ಜನವೋ ಜನ. ಬಗೆ ಬಗೆಯ ಭೋಜನ ಸವಿಯಲು ಕಿರಿಯರಿಂದ ಹಿಡಿದು ಹಿರಿಯತನಕ ಸಾಲುಗಟ್ಟಿ ನಿಂತಿದ್ದರು. ಶಾಲಾ-ಕಾಲೇಜಿಗೆ ರಜೆ ನೀಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಮಂಡ್ಯದ ಸುತ್ತಮುತ್ತಲಿನ ಹಳ್ಳಿಗಳಿಂದ ಸಾಹಿತ್ಯಾಸಕ್ತರು ಸಮ್ಮೇಳನದತ್ತ ಹರಿದು ಬಂದರು.

Advertisement

ಇದರಿಂದಾಗಿ ಕೆಲವು ಕೌಂಟರ್‌ಗಳಲ್ಲಿ ಜನ ಕಿಕ್ಕಿರಿದು ನೂಕುನೂಗ್ಗಲು ಉಂಟಾಯಿತು. ಸಾರ್ವಜನಿಕರ ಸುಖ ಭೋಜನಕ್ಕಾಗಿ ಸುಮಾರು 100 ಕೌಂಟರ್‌ ತೆರೆಯಲಾಗಿತ್ತು. ಎಲ್ಲ ಊಟದ ಕೌಂಟರ್ಗಳು ಜನರಿಂದ ತುಂಬಿ ಗಿಜಿಗುಡುತ್ತಿದ್ದವು. ಸಂಜೆಯವರೆಗೂ ಹರಿದು ಬರುತ್ತಿದ್ದ ದೊಡ್ಡ ಸಂಖ್ಯೆಯ ಸಾಲನ್ನು ನಿಯಂತ್ರಣಕ್ಕೆ ತರಲು ಪೊಲೀಸರು, ಸ್ವಯಂ ಸೇವಕರು ಹರಸಾಹಸಪಟ್ಟರು. ಮೀಡಿಯಾ ಸೆಂಟರ್‌ನಲ್ಲಿಯೂ ಭೋಜನ ಸವಿಯಲು ಹಲವು ಸಂಖ್ಯೆಯಲ್ಲಿ ಕಿಕ್ಕಿರಿದಿದ್ದರು.

ಅಕ್ಷರ ಜಾತ್ರೆಯ ಮೊದಲ ದಿನವೇ ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಸವಿಯಲು ಸರಿ ಸುಮಾರು 2 ಲಕ್ಷದಷ್ಟು ಮಂದಿ ಆಗಮಿಸಿ ಕನ್ನಡ ನುಡಿಹಬ್ಬದ ಔತಣ ಸವಿದರು. ಬೆಳಗ್ಗೆ ವಿಶೇಷವಾಗಿ ತಟ್ಟೆ ಇಡ್ಲಿ, ವಡೆ, ಟೀ, ಸಾಂಬಾರ್‌, ಉಪ್ಕ್ಮ, ಮೈಸೂರ್‌ಪಾಕ್‌ ಸಿದ್ಧಪಡಿಸಲಾಗಿತ್ತು. 40 ಸಾವಿರದಷ್ಟು ಮಂದಿ ಉಪಹಾರ ಸೇವಿಸಿದರು. ಇನ್ನು ಮಧ್ಯಾಹ್ನ ಕಾಯಿ ಹೋಳಿಗೆ, ತುಪ್ಪ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಚಟ್ನಿ ಪುಡಿ, ಮೆಂತ್ಯ ಬಾತ್‌, ರಾಯಿತ, ಮೊಸರನ್ನ, ಮೊಳಕೆ ಕಾಳು ಸಾಂರ್ಬಾ, ಮೊಸರು, ಬಾಳೆಹಣ್ಣು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಸಲಾಡ್‌ ಇತ್ತು ಸರಿ ಸುಮಾರು 1 ಲಕ್ಷದಷ್ಟು ಜನರು ಆಗಮಿಸಿ ಸಂಜೆಯವರೆಗೂ ಸಮ್ಮೇಳನದ ಆತಿಥ್ಯ ಸ್ವೀಕರಿಸಿದರು. ರಾತ್ರಿ ಊಟದ ಸವಿಭೋಜನವಾಗಿ ಪೂರಿ, ಸಾಗು, ಮೈಸೂರು ಪಾಕ್‌, ಅವರೆಕಾಳು ಬಾತು, ರಾಯಿತ, ಮೊಸರು, ಬಾಳೆಹಣ್ಣು, ಕೋಸಂಬರಿ, ಉಪ್ಪಿನಕಾಯಿ, ಹಪ್ಪಳ, ಪಲ್ಯ, ಸಲಾಡ್‌ ವ್ಯವಸ್ಥೆ ಇತ್ತು.

ಊಟಕ್ಕೆ ಕೊರತೆಯಾಗದಂತೆ ನಿಗಾ:
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವವರಿಗೆ ಶುಚಿ-ರುಚಿಯಾದ ಊಟೋಪಹಾರದ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು ಎಂಬ ಕಾರಣದಿಂದ ಯಾರಿಗೂ ಕೊರತೆ ಆಗದಂತೆ ಮತ್ತು ಎಷ್ಟೇ ಜನರು ಬಂದರೂ ಅವರನ್ನು ನಿಭಾಯಿಸಲು ಊಟದ ಕೌಂಟರ್ ಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

Advertisement

ವಿಶೇಷ ಕೌಂಟರ್‌: 70 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ, ವಿಶೇಷಚೇತನರಿಗಾಗಿ 4 ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಮ್ಮೇಳನ ನಡೆಯುವ ಜಾಗದಲ್ಲಿ ಸುಮಾರು 30 ಕ್ಕೂ ಹೆಚ್ಚು ನೀರಿನ ಕೇಂದ್ರಗಳಲ್ಲಿ ಕೈ ತೊಳೆಯಲು ಮತ್ತು ಕುಡಿಯುವ ನೀರಿನ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಗಣ್ಯರು ಹಾಗೂ ಗಣ್ಯಾತಿಗಣ್ಯರಿಗಾಗಿ 40 ವಿಶೇಷ ಕೌಂಟರ್‌ ಮೂಲಕ ಆತಿಥ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು.

400 ಬಾಣಸಿಗರಿಂದ ಸಿದ್ಧತೆ
ಸಾಹಿತ್ಯ ಸಮ್ಮೇಳನಕ್ಕೆ ಬರುವ ಸಾಹಿತ್ಯಾಸಕ್ತರು, ಸಾರ್ವಜನಿಕರು ಹಾಗೂ ಅತಿಥಿಗಳಿಗೆ ಅಡುಗೆ ತಯಾರಿಸಲು 400 ಬಾಣಸಿಗರಿದ್ದು ಬಗೆ ಸಹಿ ಹಾಗೂ ಖಾರದ ಖಾದ್ಯಗಳ ವಿಶೇಷ ಭೋಜನ ತಯಾರಿಸಿದರು. ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರು, ಮಂಡ್ಯ ಭಾಗದಿಂದಲೂ ನೂರಾರು ಸಂಖ್ಯೆಯಲ್ಲಿ ಬಾಣಸಿಗರು ಆಗಮಿಸಿ ತಮ್ಮ ಕೈರುಚಿ ತೋರಿಸಿದರು.

ದೊಡ್ಡ ಸವಾಲು
ಸಾಹಿತ್ಯ ಸಮ್ಮೇಳನದಲ್ಲಿ ಲಕ್ಷಾಂತರ ಅಡುಗೆ ತಯಾರಿಸುವುದು ದೊಡ್ಡ ಸವಾಲು, ಆದರೂ ಎಲ್ಲರೂ ಒಗ್ಗೂಡಿ ಕನ್ನಡದ ಹಬ್ಬಕ್ಕೆ ವಿಶೇಷ ಖಾದ್ಯಗಳನ್ನು ತಯಾರಿಸಲಾಗಿದೆ. ನಿತ್ಯ ಮೆನು ಪ್ರಕಾರ ವಿಧ ವಿಧದ ಖಾದ್ಯಗಳು ಸಿದ್ಧವಾಗಲಿವೆ.
●ಸಂಜೀವಪ್ಪ ಬಾಣಸಿಗ, ಕುಂದಾಪುರ

*ರಘ ಕೆ.ಜಿ

Advertisement

Udayavani is now on Telegram. Click here to join our channel and stay updated with the latest news.

Next