Advertisement

ಪ್ರವಾಹ ಬಂದರೂ ನಾಲೆಗಳಿಗೆ ನೀರಿಲ್ಲ!

03:47 PM Aug 15, 2019 | Team Udayavani |

ಮಂಡ್ಯ: ಕೊಡಗು ಭಾಗದ‌ಲ್ಲಿ ಸುರಿಯುತ್ತಿರುವ ಮಹಾಮಳೆಯಿಂದಾಗಿ ಕಾವೇರಿ ಉಕ್ಕಿ ಹರಿಯುತ್ತಿದ್ದಾಳೆ. ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿ 32 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

Advertisement

ಇಷ್ಟಾದರೂ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಮಾತ್ರ ನೀರು ಹರಿಯುತ್ತಿಲ್ಲ. ಕಾರಣ, ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕೇಂದ್ರದ ಕಾವೇರಿ ನೀರು ನಿರ್ವಹಣಾ ಮಂಡಳಿ ಆದೇಶ ಮಾಡಬೇಕಂತೆ.

ಅಧಿಕಾರಿಗಳೇ ಶತ್ರುಗಳು: ದುಷ್ಮನ್‌ ಕಹಾ ಹೈ.. ಎಂದರೆ ಬಗಲ್ ಮೇ ಹೈ.. ಎಂಬ ಮಾತಿನಂತೆ ರೈತರಿಗೆ ನೀರಾವರಿ ಇಲಾಖೆ ಅಧಿಕಾರಿಗಳೇ ಮೊದಲ ಶತ್ರುವಾಗಿದ್ದಾರೆ. ಅಣೆಕಟ್ಟು ಭರ್ತಿಯಾಗಿ ಪ್ರವಾಹದಂತೆ ನೀರು ಹರಿಯುವ ಸಂದರ್ಭದಲ್ಲೂ ನೀರು ಹರಿಸಲು ನಿರ್ವಹಣಾ ಮಂಡಳಿ ಆದೇಶಿಸಬೇಕು ಎನ್ನುವುದೇ ಅರ್ಥಹೀನ. ಮುಂಗಾರು ಹಂಗಾಮಿನ ಬೆಳೆಗಳಿಗೆ ನೀರು ಹರಿಸದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳೂ ಸೊಲ್ಲೆತ್ತದಿರುವುದು ಜಿಲ್ಲೆಯ ದೊಡ್ಡ ದುರಂತವಾಗಿದೆ. ಅಧಿಕಾರಿಗಳ ವರ್ತನೆಗೆ ರೈತ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ರೈತರಿಗೆ ಮಾರಕ: ಕಳೆದ ವಾರ ಸುರಿದ ಕೇರಳ-ಕೊಡಗಿನಲ್ಲಿ ಆದ ಕುಂಭದ್ರೋಣ ಮಳೆಯಿಂದ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಈಗಾಗಲೇ ಲಕ್ಷಾಂತರ ಕ್ಯೂಸೆಕ್‌ ನೀರು ತಮಿಳುನಾಡಿಗೆ ಹರಿದುಹೋಗಿದೆ. ನೀರಿಗೆ ಯಾವ ಕೊರತೆ ಇಲ್ಲದಿದ್ದರೂ ನಾಲೆಗಳಿಗೆ ನೀರು ಹರಿಸಿ ರೈತರ ಬದುಕನ್ನು ರಕ್ಷಣೆ ಮಾಡುವುದಕ್ಕೆ ನೀರಾವರಿ ಇಲಾಖೆ ಅಧಿಕಾರಿಗಳು ಒಲವು ತೋರುತ್ತಿಲ್ಲ. ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅಧಿಕಾರಿಗಳೇ ಕಿತ್ತುಕೊಳ್ಳುವ ಮೂಲಕ ರೈತರಿಗೆ ಮಾರಕವಾಗಿ ಪರಿಣಮಿಸಿದ್ದಾರೆ.

ಕೆಆರ್‌ಎಸ್‌ ಅಚ್ಚುಕಟ್ಟು ನಾಲೆಗಳಿಗೆ ಒಟ್ಟು 3,650 ಕ್ಯೂಸೆಕ್‌ ನೀರಿನ ಅಗತ್ಯವಿದೆ. ಈಗ ನೀರಾವರಿ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡುತ್ತಿರುವುದು 2,761 ಕ್ಯೂಸೆಕ್‌ ಮಾತ್ರ. ಇನ್ನೂ 1000 ಕ್ಯೂಸೆಕ್‌ ಕಡಿಮೆ ನೀರನ್ನು ಹರಿಸುತ್ತಿರುವುದರಿಂದ ಕೊನೆಯ ಭಾಗವಿರಲಿ ಮಂಡ್ಯ ನಗರ ವ್ಯಾಪ್ತಿಯ ನಾಲೆಗಳಲ್ಲೂ ನೀರು ಹರಿಯುತ್ತಿಲ್ಲ. ನದಿಗೆ 29,517 ಕ್ಯೂಸೆಕ್‌ ನೀರನ್ನು ಹರಿಸುತ್ತಿರುವ ಅಧಿಕಾರಿಗಳು ತಮಿಳುನಾಡಿಗೆ ನೀರು ವ್ಯರ್ಥವಾಗಿ ಹರಿಯುವುದಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ.

Advertisement

ಕೆರೆಗಳು ತುಂಬಿಲ್ಲ: ಮಂಡ್ಯ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ನೆರೆಯ ಕೊಡಗು ಜಿಲ್ಲೆಯಲ್ಲಿ ಸುರಿದ ರಣಮಳೆಯ ಪರಿಣಾಮ ಜಿಲ್ಲೆಯೊಳಗೆ ಪ್ರವಾಹ ಸೃಷ್ಟಿಯಾಗಿದೆ. ಮಳೆ ಕೊರತೆಯಿಂದ ಜಿಲ್ಲೆಯಲ್ಲಿರುವ ಕೆರೆ-ಕಟ್ಟೆಗಳು ಭರ್ತಿಯಾಗಿಲ್ಲ. ಅಂತರ್ಜಲ ಪಾತಾಳ ಸೇರಿಕೊಂಡಿದೆ. ನಾಲೆಗಳಿಗೆ ನೀರು ಹರಿಯದೆ ಮುಂಗಾರು ಹಂಗಾಮಿನ ಬಿತ್ತನೆ ಚಟುವಟಿಕೆಯೂ ಕುಂಠಿತವಾಗಿದೆ. ಇಂತಹ ಸನ್ನಿವೇಶದಲ್ಲಿ ನಾಲೆಗಳಿಗೆ ನೀರು ಹರಿಸದಿರುವುದನ್ನು ನೋಡಿದರೆ ರೈತರುರು ಬೆಳೆ ಬೆಳೆಯುವುದರಿಂದ ವಂಚಿತರನ್ನಾಗಿ ಮಾಡಲು ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೇ ಹುನ್ನಾರ ನಡೆಸಿದ್ದಾರೆಂಬ ಸಂಶಯಗಳು ಮೂಡಲಾರಂಭಿಸಿವೆ.

ಕೃಷಿಗೆ ನೀರು ಸಾಕಾಗುತ್ತಿಲ್ಲ: ನೀರಾವರಿ ಹಾಗೂ ಮಳೆಯಾಶ್ರಿತ ಪ್ರದೇಶದಲ್ಲಿ ಉತ್ತಮ ಮಳೆಯಾಗದಿರುವುದರಿಂದ ನಾಲೆಗಳಲ್ಲಿ ಈಗ ಹರಿಸಲಾಗುತ್ತಿರುವ 2761 ಕ್ಯೂಸೆಕ್‌ ನೀರು ಕೃಷಿ ಚಟುವಟಿಕೆಗೆ ಸಾಲುತ್ತಿಲ್ಲ. ಈಗ ಹರಿಸುತ್ತಿರುವ ನೀರು ಎಲ್ಲಿಗೆ ಹೋಗುತ್ತಿದೆ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ. ಹಾಲಿ ನಾಲೆಗಳಿಗೆ ಹರಿಸಿರುವ ನೀರು ಕೊನೆಯ ಭಾಗಕ್ಕಿರಲಿ ಮಂಡ್ಯದೊಳಗೆ ಹಾದುಹೋಗಿರುವ ನಾಲೆಗಳಲ್ಲೇ ಹರಿಯುತ್ತಿಲ್ಲ. ಇನ್ನು ಕೊನೆಯ ಭಾಗದವರಿಗೆ ನೀರು ಕೊಡುವುದು ಯಾವಾಗ? ಮುಖ್ಯವಾಗಿ ಮದ್ದೂರು ಭಾಗದ ಕೊಪ್ಪ, ಮಳವಳ್ಳಿ ತಾಲೂಕಿನ ಹಲವು ಪ್ರದೇಶಗಳಲ್ಲಿನ ರೈತರು ಕೃಷಿ ಚಟುವಟಿಕೆಗೆ ನಡೆಸೋದು ಯಾವಾಗ ಎಂಬ ಪ್ರಶ್ನೆಗಳು ಮೂಡಿವೆ.

ರೈತರ ಹಿತ ಕಾಪಾಡಿ: ಕೃಷಿ ಇಲಾಖೆ ಅಧಿಕಾರಿಗಳು ಹೇಳಿರುವ ಪ್ರಕಾರ ಭತ್ತದ ಬಿತ್ತನೆ ಅವಧಿ ಈಗಾಗಲೇ ಪೂರ್ಣಗೊಳ್ಳುವ ಹಂತದಲ್ಲಿದೆ.

ಈಗ ನೀರು ಕೊಟ್ಟರೆ ಅಲ್ಪಾವಧಿ ಭತ್ತದ ಬೆಳೆಗಳನ್ನು ಬೆಳೆಯಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಉದ್ದು, ಅವರೆ, ಹುರುಳಿ ಚೆಲ್ಲುವ ಸ್ಥಿತಿ ರೈತರಿಗೆ ಎದುರಾಗಲಿದೆ. ಈಗಲಾದರೂ ನಾಲೆಗಳಿಗೆ ನೀರು ಬಿಡುಗಡೆ ಮಾಡಿ ರೈತರ ಹಿತ ಕಾಪಾಡಬೇಕು ಎನ್ನುವುದು ರೈತರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next