ಮಂಡ್ಯ: ಕಳೆದ 2 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮಂಡ್ಯ ನಗರಸಭೆಯ ಅಧಿಕಾರದ ಚುಕ್ಕಾಣಿಯನ್ನು ಜೆಡಿಎಸ್ ತನ್ನ ವಶಕ್ಕೆ ಪಡೆದುಕೊಂಡಿದೆ. ನೂತನ ಅಧ್ಯಕ್ಷರಾಗಿ ಎಸ್.ಎಸ್.ಮಂಜು ಹಾಗೂ ಉಪಾಧ್ಯಕ್ಷರಾಗಿ ಇಶ್ರತ್ ಫಾತಿಮಾ ಅವರು ಅವಿರೋಧವಾಗಿ ಆಯ್ಕೆಯಾದರು.
ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಒಕ್ಕೊರಲ ಬೆಂಬಲದೊಂದಿಗೆ ಇದೇ ಮೊದಲ ಬಾರಿಗೆ ಅವಿರೋಧವಾಗಿ ಆಯ್ಕೆ ನಡೆಯಿತು.
ಜೆಡಿಎಸ್‌ನಿಂದ 20ನೇ ವಾರ್ಡ್ ನ ಎಚ್.ಎಸ್.ಮಂಜು ಹಾಗೂ ಕಾಂಗ್ರೆಸ್‌ನಿಂದ 10ನೇ ವಾರ್ಡ್ ನ ಶಿವಪ್ರಕಾಶ್ ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ 13ನೇ ವಾರ್ಡ್ ಇಶ್ರತ್ ಫಾತಿಮಾ ಹಾಗೂ ಕಾಂಗ್ರೆಸ್‌ನಿಂದ 5ನೇ ವಾರ್ಡ್ ನ ನಯೀಂ ಅವರು ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ನ ಇಬ್ಬರೂ ತಮ್ಮ ನಾಮಪತ್ರ ವಾಪಸ್ ಪಡೆದರು. ಈ ಹಿನ್ನೆಲೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿಯಾಗಿದ್ದ ನೇಹಾಜೈನ್ ಘೋಷಿಸಿದರು.
ನಗರಸಭೆ ಬಲಾಬಲ 35 ಸದಸ್ಯರಿದ್ದು, ಜೆಡಿಎಸ್ 18, ಕಾಂಗ್ರೆಸ್ 10, ಬಿಜೆಪಿ 2 ಹಾಗೂ ಪಕ್ಷೇತರ 5 ಮಂದಿ ಇದ್ದಾರೆ. ಜೆಡಿಎಸ್‌ಗೆ ಸ್ಪಷ್ಟ ಬಹುಮತವಿದ್ದು, ನಿರೀಕ್ಷೆಯಂತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಕಳೆದ 2 ವರ್ಷ 10 ತಿಂಗಳು ಮೀಸಲಾತಿ ಗೊಂದಲದಿಂದ ಸದಸ್ಯರು ಅಧಿಕಾರ ಪಡೆದಿರಲಿಲ್ಲ. ನಂತರ ಹೈಕೋರ್ಟ್ ನ.೨ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಸೋಮವಾರ ಚುನಾವಣೆ ನಡೆಯಿತು.