ಮಂಡ್ಯ: ಲೋಕಸಭಾ ಮಹಾ ಚುನಾವಣೆಗೆ ಮುಹೂರ್ತ ನಿಗದಿಯಾಗಲು ದಿನಗಣನೆ ಪ್ರಾರಂಭವಾಗಿರುವಂತೆಯೇ ರಾಜ್ಯದ ವಿವಿಧ ಹೈವೋಲ್ಟೇಜ್ ಲೋಕಸಭಾ ಕ್ಷೇತ್ರಗಳಲ್ಲಿ ಎಲ್ಲಾ ಪಕ್ಷಗಳಿಂದಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭಗೊಂಡಿವೆ. ಅದರಲ್ಲೂ
ರಂಗಿನ ರಾಜಕೀಯಕ್ಕೆ ಹೆಸರಾಗಿರುವ ಸಕ್ಕರೆ ನಾಡು ಮಂಡ್ಯದಲ್ಲಿ ಈ ಬಾರಿಯ ಸ್ಪರ್ಧೆ ಕುತೂಹಲದ ತುತ್ತತುದಿಯನ್ನು ತಲುಪಿದಂತಿದೆ.
ಒಂದೆಡೆ ದೋಸ್ತಿಗಳ ಮಾತಿಗೆ ಕಟ್ಟುಬಿದ್ದು ಆಡಳಿತ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿ(ಎಸ್) ಗೆ ಬಿಟ್ಟುಕೊಟ್ಟಿರುವ ಕಾರಣ ಸ್ವತಃ
ಮುಖ್ಯಮಂತ್ರಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಇಲ್ಲಿ ಯುವ ಅಭ್ಯರ್ಥಿಯಾಗಿ ಮೈತ್ರಿಕೂಟದ ಬೆಂಬಲದೊಂದಿಗೆ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನೊಂದೆಡೆ ಮಂಡ್ಯದ ಗಂಡು ದಿವಂಗಂತ ಅಂಬರೀಷ್ ಅವರ ಪತ್ನಿ
ಸುಮಲತಾ ಅವರು ತಮಗೆ ಕಾಂಗ್ರೆಸ್ ಪಕ್ಷ ಮಂಡ್ಯದಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸುವ ಮೂಲಕ ತಮ್ಮ ಪತಿ ಮತ್ತು ಅವರ ಬೆಂಬಲಿಗರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿ ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ ಮಾಡಿದಂತಿದೆ.
ಇವೆಲ್ಲದೆ ನಡುವೆ ಇತ್ತೀಚೆಗೆ ಪುಲ್ವಾಮ ಉಗ್ರದಾಳಿಯಲ್ಲಿ ಆತ್ಮಾಹುತಿ ಉಗ್ರನ ಅಟ್ಟಹಾಸಕ್ಕೆ ಬಲಿಯಾದ
ಸಿ.ಆರ್.ಪಿ.ಎಫ್. ಯೋಧ ಗುರು ಅವರ ಪತ್ನಿ ಕಲಾವತಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಬಹುಜನ ಸಮಾಜ ಪಕ್ಷದ ಮೂಲಕ ಕಲಾವತಿ ಅವರನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಬೇಕೆಂಬ ಪ್ರಸ್ತಾವನೆಯನ್ನು ಖ್ಯಾತ ಚಿಂತಕ ಮತ್ತು ಹಿಂದುಳಿದ ವರ್ಗಗಳ ನಾಯಕ ದ್ವಾರಕಾನಾಥ್ ಅವರು ಬಿ.ಎಸ್.ಪಿ. ರಾಜ್ಯಾಧ್ಯಕ್ಷರಿಗೆ ಪತ್ರದ ಮೂಲಕ ವಿನಂತಿ ಮಾಡಿದ್ದಾರೆಂದು ತಿಳಿದುಬಂದಿದೆ. ಕಲಾವತಿಯವರನ್ನು ಅಭ್ಯರ್ಥಿಯನ್ನಾಗಿ ಮಾಡಿದಲ್ಲಿ ಹಿಂದುಳಿದ ಮಡಿವಾಳ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಿದಂತಾಗುತ್ತದೆ ಮಾತ್ರವಲ್ಲದೇ ಇತ್ತೀಚೆಗೆ ತಾನೇ ಹುತಾತ್ಮರಾದ ಯೋಧ ಗುರು ಅವರ ಪರ ಜಿಲ್ಲೆಯಲ್ಲಿ ಇರುವ ಅನುಕಂಪದ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸಿ ಗೆಲ್ಲಬಹುದೆಂಬ ಲೆಕ್ಕಾಚಾರ ನಡೆಯುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿದೆ.
ಒಟ್ಟಿನಲ್ಲಿ ದೋಸ್ತಿ ಸರಕಾರಕ್ಕೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಮಂಡ್ಯ ಲೋಕಸಭಾ ಕ್ಷೇತ್ರವು ಮುಂಬರುವ ದಿನಗಳಲ್ಲಿ ಯಾವೆಲ್ಲಾ ರಾಜಕೀಯ ಬಣ್ಣಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಪ್ರಮುಖ ಪ್ರತಿಪಕ್ಷ ಬಿ.ಜೆ.ಪಿ.ಯ ರಾಜಕೀಯ ನಡೆ ಮಾತ್ರ ಇನ್ನೂ ನಿಗೂಢವಾಗಿಯೇ ಇದೆ.