Advertisement

ಮಂಡ್ಯ ಲೋಕಸಭೆ: 16,90 ಲಕ್ಷ ಮತದಾರರು 

07:43 AM Mar 12, 2019 | Team Udayavani |

ಮಂಡ್ಯ: ಭಾರತ ಚುನಾವಣಾ ಆಯೋಗ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಅಧಿಸೂಚನೆ ಹೊರಡಿಸಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ತಿಳಿಸಿದರು.

Advertisement

ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 16.90 ಲಕ್ಷ ಮತದಾರರಿದ್ದಾರೆ. ಇದರಲ್ಲಿ 8.45 ಲಕ್ಷ ಪುರುಷ ಮತದಾರರು, 8.44  ಮಹಿಳಾ ಮತದಾರರು ಹಾಗೂ 112 ಇತರೆ ಮತದಾರರು ಇದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚುನಾವಣಾಧಿಕಾರಿಗಳ ನೇಮಕ: ಲೋಕಸಭಾ ಚುನಾವಣೆಯ ಎಂಟು ಕ್ಷೇತ್ರಗಳಿಗೆ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಚುನಾವಣಾಧಿಕಾರಿಯಾಗಿದ್ದು, ಸಹಾಯಕ ಚುನಾವಣಾಧಿಕಾರಿಯಾಗಿ ಮಳವಳ್ಳಿ ಕ್ಷೇತ್ರಕ್ಕೆ ವಿಶೇಷ ಭೂಸ್ವಾಧೀನಾಧಿಕಾರಿ ಡಾ.ರಾಜೇಂದ್ರ ಪ್ರಸಾದ್‌, ಮದ್ದೂರು ಕ್ಷೇತ್ರಕ್ಕೆ ಮುಡಾ ಆಯುಕ್ತ ಆರ್‌.ಚಂದ್ರಯ್ಯ, ಮೇಲುಕೋಟೆ ಕ್ಷೇತ್ರಕ್ಕೆ ಪಾಂಡವಪುರ ಉಪವಿಭಾಗಾಧಿಕಾರಿ ವಿ.ಆರ್‌.ಶೈಲಜಾ,

ಮಂಡ್ಯ ಕ್ಷೇತ್ರಕ್ಕೆ ಉಪವಿಭಾಗಾಧಿಕಾರಿ ಎಂ.ಆರ್‌.ರಾಜೇಶ್‌, ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ)ಡಾ.ಎಂ.ಕೃಷ್ಣಂರಾಜು, ನಾಗಮಂಗಲ ಕ್ಷೇತ್ರಕ್ಕೆ ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಎನ್‌.ಡಿ.ಪ್ರಕಾಶ್‌, ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ಸಹಕಾರ ಸಂಘಗಳ ಉಪನಿಬಂಧಕ ಎನ್‌.ವೆಂಕಟೇಶ್‌ ಹಾಗೂ ಕೆ.ಆರ್‌.ನಗರ ಕ್ಷೇತ್ರಕ್ಕೆ ಮೈಸೂರು ಜಿಲ್ಲೆ ಕಬಿನಿ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಗೀತಾ ಹುಡೇದ್‌ ನಿಯೋಜಿಸಿರುವುದಾಗಿ ಹೇಳಿದರು.

ಮಾದರಿ ಸಂಹಿತೆ ತಂಡಗಳು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಚುನಾವಣಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಡಲ್‌ ಅಧಿಕಾರಿಯಾಗಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಸಂಬಂಧಿಸಿದ ನಗರಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ ಎಂದರು.

Advertisement

ಸರ್ಕಾರಿ ಕಟ್ಟಡಗಳ ಮೇಲಿರುವ ಎಲ್ಲಾ ರೀತಿಯ ಬಂಟಿಂಗ್ಸ್‌, ಬ್ಯಾನರ್, ಬಾವುಟ, ಬರಹಗಳನ್ನು ಚುನಾವಣೆ ಘೋಷಣೆಯಾದ 24 ಗಂಟೆಯೊಳಗೆ ತೆಗೆಯಲು ಕ್ರಮ ವಹಿಸಲಾಗಿದೆ. ಗ್ರಾಪಂ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನಧಿಕೃತವಾಗಿ ಹಾಕಿರುವ ರಾಜಕೀಯ ಜಾಹೀರಾತುಗಳು ಅಂದರೆ, ಗೋಡೆ ಬರಹ, ಪೋಸ್ಟರ್‌ ಪೇಪರ್‌, ಕಟೌಟ್‌, ಬ್ಯಾನರ್‌, ಬಾವುಟ ಇತ್ಯಾದಿಗಳನ್ನು ಹಾಗೂ ಸಾರ್ವಜನಿಕ ಸ್ಥಳಗಳಾದ ರೈಲು, ಬಸ್‌ ನಿಲ್ದಾಣ, ಮೇಲ್ಸೆತುವೆ, ಹೆದ್ದಾರಿ, ಸರ್ಕಾರಿ ಬಸ್‌ಗಳು, ಎಲೆಕ್ಟ್ರಿಕ್‌ ಟೆಲಿಫೋನ್‌ ಕಂಬಗಳ ಮೇಲೆ ಹಕಿರುವ ಬರಹ, ಪೋಸ್ಟರ್‌, ಪೇಪರ್‌, ಕಟೌಟ್‌, ಬ್ಯಾನರ್‌, ಬಾವುಟ ಇತ್ಯಾದಿಗಳನ್ನು 48 ಗಂಟೆಯೊಳಗೆ ತೆರವುಗೊಳಿಸಲು ಸೂಚಿಸಲಾಗಿದೆ.

ಖಾಸಗಿ ಕಟ್ಟಡಗಳು, ಕಟ್ಟಡಗಳ ಆವರಣದಲ್ಲಿರುವ ಎಲ್ಲಾ ಅನಧಿಕೃತ ರಾಜಕೀಯ ಜಾಹೀರಾತುಗಳನ್ನು ಚುನಾವಣೆ ಘೋಷಣೆಯಾದ 72 ಗಂಟೆಯೊಳಗೆ ತೆರವುಗೊಳಿಸಲು ಕ್ರಮ ವಹಿಸಿದೆ ಎಂದು ಹೇಳಿದರು. ಅಲ್ಲದೆ, ಮಾದರಿ ನೀತಿ ಸಂಹಿತೆಯನ್ನು ಯಥಾವತ್ತಾಗಿ ಜಾರಿಗೊಳಿಸಲು ವಿಧಾನಸಭಾ ಕ್ಷೇತ್ರವಾರು ಸಂಚಾರಿ ತಪಾಸಣಾ ದಳ, ಸ್ಥಿರ ಜಾಗೃತ ದಳ, ಸೆಕ್ಟರ್‌ ಅಧಿಕಾರಿಗಳು ಮತ್ತು ವಿಡಿಯೋ ಸರ್ವೇಕ್ಷಣಾ ತಂಡಗಳನ್ನು ರಚಿಸಿ ತರಬೇತಿಯನ್ನೂ ನೀಡಲಾಗಿದೆ ಎಂದರು.

ಉಚಿತ ಸಹಾಯವಾಣಿ ಕೇಂದ್ರ: ಮತದಾರರ ನೋಂದಣಿ, ಅರ್ಜಿಯ ಸ್ಥಿತಿ ತಿಳಿಯಲು ಚುನಾವಣೆಗೆ ಸಂಬಂಧಿಸಿದ ಕುಂದುಕೊರತೆಗಳ ನಿವಾರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಉಚಿತ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗಿದೆ. ಸಾರ್ವಜನಿಕರು 1950 ಸಂಖ್ಯೆಗೆ ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆಯಬಹುದಾಗಿದೆ.

ಸಿ-ವಿಜಿಲ್‌ ಮೊಬೈಲ್‌ ಆ್ಯಪ್‌ ಬಳಕೆ: ಭಾರತ ಚುನಾವಣಾ ಆಯೋಗವು ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ತಡೆಯಲು ಸಿ-ವಿಜಿಲ್‌ ಮೊಬೈಲ್‌ ಆ್ಯಪ್‌ನ್ನು ಅಭಿವೃದ್ಧಿಪಡಿಸಿ ಇದೇ ಮೊದಲಬಾರಿಗೆ ಪ್ರಸಕ್ತ ಚುನಾವಣೆಯಲ್ಲಿ ಬಳಸಲಾಗುತ್ತಿದೆ. ಇಲ್ಲಿಗೆ ದೂರು ನೀಡಿದ 100 ಗಂಟೆಯೊಳಗೆ ಪ್ರತಿಕ್ರಿಯೆ ನೀಡಲಾಗುವುದು.

ಮತದಾನದ ದಿನದಂದು ಮತದಾನ ಮಾಡಲು ಚುನಾವಣಾ ಗುರುತಿನ ಚೀಟಿ ಇಲ್ಲದವರು ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸೆನ್ಸ್‌, ಸರ್ಕಾರಿ, ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾವಚಿತ್ರವುಳ್ಳ ಗುರುತಿನ ಚೀಟಿ, ಬ್ಯಾಂಕ್‌ ಅಥವಾ ಅಂಚೆ ಕಚೇರಿ ಪಾಸ್‌ಬುಕ್‌, ಪಾನ್‌ಕಾರ್ಡ್‌, ಆಧಾರ್‌ ಕಾರ್ಡ್‌, ನರೇಗಾ ಜಾಬ್‌ಕಾರ್ಡ್‌ ಸೇರಿದಂತೆ 11 ವಿವಿಧ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು.

ಸುವಿಧ ಅನುಮತಿ: ಚುನಾವಣೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಬಳಸುವ ವಾಹನ ಪರವಾನಗಿ, ಚುನಾವಣಾ ಪ್ರಚಾರ, ಸಭೆ, ರ್ಯಾಲಿ, ಸಮಾರಂಭಗಳಿಗೆ ಸುವಿಧ ಮೂಲಕ ಅನುಮತಿ ನೀಡಲಾಗುವುದು. ಕೆಲಸದ ನಿರ್ವಹಣೆಗಾಗಿ ಜಿಲ್ಲಾಮಟ್ಟದಲ್ಲಿ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರವಾರು ತಂಡಗಳನ್ನು ರಚಿಸಲಾಗಿದ್ದು, ಅನುಮತಿ ಪಡೆಯುವಂತೆ ತಿಳಿಸಲಾಗಿದೆ.

ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ವ್ಯಕ್ತಿಯು ಶಸ್ತ್ರಾಸ್ತ್ರ ಹಾಗೂ ಆಯುಧಗಳನ್ನು ಸಾಗಾಣಿಕೆ ಮಾಡುವುದನ್ನು ಅಥವಾ ಕೊಂಡೊಯ್ಯುವುದನ್ನು ನಿಷೇಧ ಮಾಡಿ ಆದೇಶ ಹೊರಡಿಸಲಾಗಿದೆ. ಬ್ಯಾಂಕ್‌ ಅಥವಾ ಯಾರೇ ಒಬ್ಬ ವ್ಯಕ್ತಿಯು ಅಗತ್ಯಕ್ಕಿಂತ ಹೆಚ್ಚು ಹಣವನ್ನು ಕೊಂಡೊಯ್ಯಬೇಕಾದಲ್ಲಿ ಅದಕ್ಕೆ ಅಗತ್ಯ ಅಥವಾ ಪೂರಕ ದಾಖಲಾತಿಗಳನ್ನು ತನ್ನ ಬಳಿ ಇರಿಸಿಕೊಳ್ಳತಕ್ಕದ್ದು. 20 ಸಾವಿರ ರೂ.ನಿಂದ ಬ್ಯಾಂಕ್‌ನಿಂದ ಡ್ರಾ ಮಾಡಲಾದ ರಸೀದಿ ಎಟಿಎಂ ಸ್ಲಿಪ್‌ ಇಟ್ಟುಕೊಳ್ಳುವುದು ಎಂದು ಹೇಳಿದರು.

ಅಬಕಾರಿ ಇಲಾಖೆಯಿಂದ ವಿವಿಧ ಮದ್ಯ ಸಾಗಣೆಗೆ ಮಿತಿ ಏರಿದೆ. ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 26 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಸಾಮಾಜಿಕ ಜಾಲ ತಾಣಗಳ ಬಗ್ಗೆ ನಿಗಾ ವಹಿಸಲು ವಿಶೇಷ ಘಟಕ ಸ್ಥಾಪಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಲಾಗುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಜಿಪಂ ಸಿಇಒ ಕೆ.ಯಾಲಕ್ಕೀಗೌಡ, ಅಪರ ಜಿಲ್ಲಾಧಿಕಾರಿ ಎ.ಜೆ.ರೂಪಾ, ಎಎಸ್ಪಿ ಬಲರಾಮೇಗೌಡ ಇತರರಿದ್ದರು.
 
ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್‌ ಬಳಕೆ: ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ವರ್ಧಿಸುವ ಸಲುವಾಗಿ ಪ್ರಸಕ್ತ ಚುನಾವಣೆಯಲ್ಲಿ ಇವಿಎಂ ಜೊತೆಗೆ ವಿವಿ ಪ್ಯಾಟ್‌ಗಳನ್ನು ಬಳಸಲಾಗುವುದು. ಮತದಾರರು ಅಭ್ಯರ್ಥಿಗಳನ್ನು ಗುರುತಿಸಲು ಅನುಕೂಲವಾಗುವಂತೆ ಬ್ಯಾಲೆಟ್‌ ಯೂನಿಟ್‌ಗಳಲ್ಲಿ ಅಳವಡಿಸುವ ಮತಪತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಮುದ್ರಿಸಲು ಕ್ರಮ ವಹಿಸಲಾಗುವುದು. ಎಲ್ಲಾ ಅಭ್ಯರ್ಥಿಗಳ ಹೆಸರು ಬಳಿಕ ನೋಟಾ ಮುದ್ರಿತವಾಗಿರುತ್ತದೆ. ನೋಟಾ ಚಿಹ್ನೆ ಕೂಡ ನಮೂದಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮಂಜುಶ್ರೀ ತಿಳಿಸಿದರು.

ಎಲ್ಲಾ ಮತಯಂತ್ರಗಳನ್ನು ಮತದಾನಕ್ಕೆ ಬಳಸಲು ಯೋಗ್ಯವಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಬೆಂಗಳೂರಿನ ಭಾರತ್‌ ಎಲೆಕ್ಟ್ರಾನಿಕ್‌ ಲಿಮಿಟೆಡ್‌ರಿಂದ ನಿಯೋಜಿತರಾಗಿದ್ದ ಇಂಜಿನಿಯರ್‌ಗಳ ಮೂಲಕ ಪ್ರಥಮ ಹಂತದ ಪರಿಶೀಲನೆಗೆ ಒಳಪಡಿಸಲಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರಗಳ ಎಂಟು ವಿಧಾನಸಭೆಗಳಿಗೆ 2539 ಬ್ಯಾಲೆಟ್‌ ಯೂನಿಟ್‌ ಹಾಗೂ 2275 ಕಂಟ್ರೋಲ್‌ ಯೂನಿಟ್‌ ಹಾಗೂ 2581 ವಿವಿ ಪ್ಯಾಟ್‌ಗಳನ್ನು ನೀಡಲಾಗಿದೆ ಎಂದು ವಿವರಿಸಿದರು.

ಚುನಾವಣಾ ವೇಳಾಪಟ್ಟಿ
-ಚುನಾವಣೆ ಅಧಿಸೂಚನೆ ಹೊರಡಿಸುವ ದಿನಾಂಕ: 19.3.2019 (ಮಂಗಳವಾರ)
-ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 26.03.2019 (ಮಂಗಳವಾರ)
-ನಾಮಪತ್ರ ಪರಿಶೀಲನೆ ದಿನಾಂಕ: 27.03.2019 (ಬುಧವಾರ)
-ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: 29.03.2019 (ಶುಕ್ರವಾರ)
-ಮತದಾನದ ದಿನಾಂಕ: 18.04.2019 (ಗುರುವಾರ)
-ಮತ ಎಣಿಕೆ ದಿನಾಂಕ: 24.05.2019 (ಗುರುವಾರ)
-ಚುನಾವಣೆ ಯಾವ ದಿನಾಂಕಕ್ಕೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ: 27.05.2019 (ಸೋಮವಾರ) 
   
ಮತದಾರರು ಹಾಗೂ ಮತಗಟ್ಟೆ ವಿವರ
ವಿಧಾನಸಭಾ ಕ್ಷೇತ್ರ    ಮತಗಟ್ಟೆ    ಪುರುಷರು     ಮಹಿಳೆಯರು    ಇತರೆ    ಸೇವಾ ಮತದಾರರು     ಒಟ್ಟು

-ಮಳವಳ್ಳಿ                 268       1,20,961         1,18,770          18                 82               2,39,831
-ಮದ್ದೂರು               253        1,01,662         1,04,579          20               142              2,06,403
-ಮೇಲುಕೋಟೆ          251          97,607           97,240          06                53               1,94,906
-ಮಂಡ್ಯ                   258        1,10,030          1,13,073          41              131               2,23,275
-ಶ್ರೀರಂಗಪಟ್ಟಣ          249        1,03,661          1,05,484          11               48                2,09,204
-ನಾಗಮಂಗಲ            257        1,04,423          1,02,374          07               55                2,06,859
-ಕೃಷ್ಣರಾಜಪೇಟೆ          258         1,04,456          1,00,744          00                85               2,05,285
-ಕೃಷ್ಣರಾಜನಗರ          252         1,02,679          1,01,830          09                202             2,04,720
-ಒಟ್ಟು                    2,046        8,45,479           8,44,094        112               798             16,90,483

Advertisement

Udayavani is now on Telegram. Click here to join our channel and stay updated with the latest news.

Next