ಮಂಡ್ಯ: ಕೊರೊನೊ ವೈರಸ್ ಬೆಳಕಿಗೆ ಬಂದ ನಂತರದಲ್ಲಿ ನಿತ್ಯವೂ ಒಂದಲ್ಲ ಒಂದು ರೀತಿ ಮಾಹಿತಿಗಳು ಬರುತ್ತಿದೆ. ಸೋಂಕಿತ ವ್ಯಕ್ತಿಯನ್ನು ಚಿಕಿತ್ಸೆ ಮಾಡುವಂತಹ ವೈದ್ಯರಿಗೆ ಮತ್ತು ವೈದ್ಯರ ಜೊತೆ ಸಹಕಾರ ನೀಡುವವರು ಮುಂಜಾಗ್ರತೆ ವಹಿಸಬೇಕು ಎಂದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಪಿ.ಮಂಚೇಗೌಡ ಹೇಳಿದರು.
ನಗರದ ಮಿಮ್ಸ್‌ನಲ್ಲಿ ಕೋವಿಡ್-19 ಕುರಿತಂತೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಡೆದ ಜಾಗೃತಿ ಸಭೆಯಲ್ಲಿ ಮಾತನಾಡಿ, ವೈದ್ಯರು ಸೋಂಕಿತ ವ್ಯಕ್ತಿಗಳನ್ನು ಚಿಕಿತ್ಸೆ ಮಾಡುವಾಗ, ತಮಗೂ ವೈರಸ್ ಹರಡಬಹುದು ಎಂಬುದನ್ನು ಕೂಡ ಮರೆತು ಚಿಕಿತ್ಸೆ ನೀಡುತ್ತಾರೆ. ಹೀಗಾಗಿ ವೈದ್ಯರು ರೋಗಿಗಳ ಆರೋಗ್ಯವನ್ನು ನೋಡಿಕೊಳ್ಳುವುದರ ಜತೆಗೆ ತಮ್ಮ ಆರೋಗ್ಯದ ಕಡೆ ಗಮನಹರಿಸುವುದು ಅತ್ಯವಶ್ಯಕ ಎಂದರು.
ಸೋಂಕಿನ ತಿಳಿವಳಿಕೆ ಅಗತ್ಯ: ಗುಲ್ಬರ್ಗ ಸೇರಿದಂತೆ ಅನೇಕ ಕಡೆ ಚಿಕಿತ್ಸೆ ನೀಡುವಂತಹ ವೈದ್ಯರಿಗೂ ಸೋಂಕು ತಗುಲಿದೆ. ಇತ್ತೀಚೆಗೆ ಗುಲ್ಬರ್ಗದಲ್ಲಿ ಮೃತಪಟ್ಟ ವ್ಯಕ್ತಿಯ ಮಗಳಿಗೆ ಮತ್ತು ಚಿಕಿತ್ಸೆ ನೀಡಿದ ವೈದ್ಯರಿಗೆ ಈ ಸೋಂಕು ತಗುಲಿದೆಯೇ ಹೊರತು ಬೇರೆ ಯಾವುದೇ ವ್ಯಕ್ತಿಯಲ್ಲಿಯೂ ವೈರಸ್ ಕಂಡುಬಂದಿಲ್ಲ. ಇಂತಹ ವಿಚಾರದಲ್ಲಿ ನಮ್ಮೆಲ್ಲರಿಗೂ ಹೆಚ್ಚಿನ ತಿಳಿವಳಿಕೆ ಬೇಕಾಗಿರುತ್ತದೆ. ವೈರಸ್ ಹೇಗೆ ಕೆಲಸ ಮಾಡುತ್ತದೆ. ಅದರಿಂದ ಸೋಂಕಿಗೆ ಹೇಗೆ ಒಳಗಾಗುತ್ತೇವೆ, ಅದನ್ನು ತಡೆಯುವುದು ಹೇಗೆ ಮತ್ತು ಅದಕ್ಕೆ ಚಿಕಿತ್ಸೆ ಇದೆಯೇ ಎಂಬ ಮಾಹಿತಿಯನ್ನು ಸಾರ್ವಜನಿಕರು ಹಾಗೂ ವೈದ್ಯರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕೆಮ್ಮು, ನೆಗಡಿ ಬಂದಿದೆ ಎಂಬ ಮಾತ್ರಕ್ಕೆ ಅವರಲ್ಲಿ ಸೋಂಕು ತಗುಲಿದೆ ಎಂದು ಭಯ ಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರು ಯಾವುದೇ ರೋಗ-ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ಅವರಿಗೆ ಮುನ್ನೆಚ್ಚರಿಕೆಯಾಗಿ ಕೊರೋನೊ ವೈರಸ್ ಬಗ್ಗೆ ಜಾಗೃತಿಯನ್ನು ಮೂಡಿಸಿಬೇಕು. ಮನೆಯಲ್ಲಿ ಯಾವ ರೀತಿಯಲ್ಲಿ ರೋಗ-ಲಕ್ಷಣಗಳನ್ನು ತಡೆಗಟ್ಟಬಹುದು ಎಂಬುದನ್ನು ಕೂಡ ತಿಳಿಸಬೇಕು ಎಂದು ಡಾ.ಸುಭಾಷ್ ಬಾಬು ಹೇಳಿದರು. ಡಾ.ಸುಮಂಗಲ. ಡಾ.ಅನಿಕೇತನ್, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ ಇತರರಿದ್ದರು.