ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಲ್ಲಿ ಒಗ್ಗಟ್ಟಿನ ಕೊರತೆಯಿದ್ದು ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಟಿಕೆಟ್ ಘೋಷಣೆಯಾಗಿರುವ ಶಾಸಕ ಎಂ.ಶ್ರೀನಿವಾಸ್ ಹಾಗೂ ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ.
ಟಿಕೆಟ್ ರೇಸ್‌ನಲ್ಲಿ ಶಾಸಕ ಎಂ.ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹಾಗೂ ಜಿಲ್ಲಾ ಮಾಧ್ಯಮ ವಕ್ತಾರ ಮಹಾಲಿಂಗೇಗೌಡ ಆಕಾಂಕ್ಷಿಗಳಾಗಿದ್ದರು. ಇದರಿಂದ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಉಂಟಾಗಿತ್ತು. ಇದಕ್ಕೆ ಜೆಡಿಎಸ್ ಮೊದಲ ಪಟ್ಟಿಯಲ್ಲಿಯೇ ಹಾಲಿ ಶಾಸಕ ಎಂ.ಶ್ರೀನಿವಾಸ್‌ರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿತ್ತು. ಆದರೆ ರಾಮಚಂದ್ರು ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿರುವುದರಿಂದ ಟಿಕೆಟ್ ಘೋಷಣೆಯಾದರೂ ಸಮಸ್ಯೆ ಬಗೆಹರಿದಂತೆ ಕಾಣುತ್ತಿಲ್ಲ.
ಪತಿ, ಪತ್ನಿ, ಸಹೋದರರಿಂದ ಪ್ರಚಾರ: ಜೆಡಿಎಸ್‌ನ ಪಂಚರತ್ನ ಯೋಜನೆಗಳ ಕುರಿತ ಮನೆ ಮನೆಗೆ ಕುಮಾರಣ್ಣ ಕರಪತ್ರ ಹಂಚುವ ಮೂಲಕ ಮನ್ ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ಪ್ರತ್ಯೇಕವಾಗಿ ಪ್ರಚಾರ ಆರಂಭಿಸಿದ್ದಾರೆ. ಈಗಾಗಲೇ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಪ್ರಚಾರ ಮುಂದುವರಿದಿದೆ. ರಾಮಚಂದ್ರು ಪರ ಇಡೀ ಕುಟುಂಬವೇ ಪ್ರಚಾರಕ್ಕಿಳಿದಿದೆ. ಪತ್ನಿ ಕಲ್ಪನಾರಾಮಚಂದ್ರು, ಸಹೋದರ ಬಿ.ಆರ್. ಸುರೇಶ್, ಬೆಂಬಲಿಗರು ಪ್ರಚಾರದಲ್ಲಿ ತೊಡಗಿದ್ದಾರೆ.
ಶಾಸಕರಿಂದ ಕ್ಷೇತದಲ್ಲಿ ಸಂಚಾರ: ಶಾಸಕ ಎಂ.ಶ್ರೀನಿವಾಸ್ ಅಧಿಕೃತವಾಗಿ ಪಕ್ಷದ ಅಭ್ಯರ್ಥಿಯಾಗಿ ಪಂಚರತ್ನ ಯೋಜನೆಗಳ ಜಾಗೃತಿ ಕರಪತ್ರ ಹಂಚಿಕೆ ಹಾಗೂ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಪಕ್ಷದ ನಿರ್ಧಾರದಂತೆ ಪ್ರಚಾರ ಆರಂಭಿಸಿದ್ದೇವೆ ಎಂದು ಕರ ಪತ್ರ ಹಂಚುತ್ತಿದ್ದಾರೆ. ಇವರಿಗೆ ಅಳಿಯ ಜಿಪಂ ಮಾಜಿ ಸದಸ್ಯ ಎಚ್.ಎನ್. ಯೋಗೇಶ್ ಸಾಥ್ ನೀಡುತ್ತಿದ್ದಾರೆ. ಕಾರ್ಯಕರ್ತರಲ್ಲಿ ಗೊಂದಲ: ಶಾಸಕ ಎಂ. ಶ್ರೀನಿವಾಸ್ ಹಾಗೂ ಮನ್‌ಮುಲ್ ಅಧ್ಯಕ್ಷ ಬಿ. ಆರ್.ರಾಮಚಂದ್ರು ಪ್ರತ್ಯೇಕವಾಗಿ ಪ್ರಚಾರ ನಡೆಸುತ್ತಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಈಗಾಗಲೇ ಶಾಸಕ ಎಂ.ಶ್ರೀನಿವಾಸ್‌ರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಆದರೂ ಬಿ.ಆರ್. ರಾಮಚಂದ್ರು ಅವರು ಪ್ರಚಾರ ನಡೆಸುತ್ತಾ, ನಾನು ಇನ್ನೂ ಟಿಕೆಟ್ ರೇಸ್‌ನಲ್ಲಿದ್ದೇನೆ ಎಂಬ ಸಂದೇಶ ನೀಡುತ್ತಿದ್ದಾರೆ. ಇದು ಪಕ್ಷದ ಕಾರ್ಯ ಕರ್ತರಲ್ಲಿ ಗೊಂದಲ ಸೃಷ್ಟಿಗೆ ಕಾರಣವಾಗಿದೆ.
ಕ್ಷೇತ್ರದ ಕುರಿತು ತಲೆಕೆಡಿಸಿಕೊಳ್ಳದ ವರಿಷ್ಠರು : ಇಬ್ಬರನ್ನೂ ಕರೆದು ಚರ್ಚೆ ನಡೆಸಿ ಒಗ್ಗಟ್ಟಿನಿಂದ ಹೋಗು ವಂತೆ ಸೂಚನೆ ನೀಡುವ ವರಿಷ್ಠರು ಮೌನವಾಗಿದ್ದಾರೆ. ಈಗಾಗಲೇ ಶಾಸಕ ಎಂ.ಶ್ರೀನಿವಾಸ್‌ರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ. ಹಲವು ಬಾರಿ ನಿಖೀಲ್ ಹಾಗೂ ಕುಮಾರಸ್ವಾಮಿ ಅಭ್ಯರ್ಥಿ ಬದಲಾ ವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಬಿ.ಆರ್. ರಾಮಂದ್ರು ಪ್ರತ್ಯೇಕ ಪ್ರಚಾರ ನಡೆಸುತ್ತಿರುವುದು ಕ್ಷೇತ್ರದಲ್ಲಿ ಇರಿಸುಮುರಿಸು ತಂದಂತಾಗಿದೆ. ಕ್ಷೇತ್ರದಲ್ಲಿ ಒಗ್ಗಟ್ಟಿನ ಕೊರತೆ ಕಾಣುತ್ತಿದ್ದರೂ ದಳಪತಿಗಳು ಮಾತ್ರ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅದರಲ್ಲೂ ಜೆಡಿಎಸ್‌ನಲ್ಲಿ ಘೋಷಿಸಿರುವ ಅಭ್ಯರ್ಥಿಗಳಿಗೆ ಬಿ ಫಾರಂ ಕೈಸೇರುವವರೆಗೂ ಇಂಥವರೇ ಅಭ್ಯರ್ಥಿ ಎಂದು ಹೇಳಲು ಸಾಧ್ಯವಿಲ್ಲ. ಕಳೆದ 2018ರ ಚುನಾವಣೆಯಲ್ಲಿ ಕೆ.ಆರ್.ಪೇಟೆಯಲ್ಲಿ ಬಿ ಫಾರಂ ನೀಡುವ ವಿಚಾರದಲ್ಲಿ ದಳಪತಿಗಳು ಮಾಡಿದ ಹೈಡ್ರಾಮ ಮತ್ತೆ ಮಂಡ್ಯ ಕ್ಷೇತ್ರದಲ್ಲೂ ನಡೆಯಲಿದೆಯಾ ಎಂಬ ಚರ್ಚೆ ಕೇಳಿ ಬರುತ್ತಿವೆ.
ಕ್ಷೇತ್ರದಲ್ಲಿ ವಿಜಯಾನಂದ, ಮಹಾಲಿಂಗೇಗೌಡ ಮೌನ : ಶಾಸಕ ಎಂ.ಶ್ರೀನಿವಾಸ್‌ಗೆ ಟಿಕೆಟ್ ಘೋಷಣೆಯಾಗುವವರೆಗೂ ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದ ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯಾನಂದ ಹಾಗೂ ಜಿಲ್ಲಾ ಮಾಧ್ಯಮ ವಕ್ತಾರ ಮಹಾಲಿಂಗೇಗೌಡ ಮುದ್ದನಘಟ್ಟ ಪಕ್ಷದ ಚಟುವಟಿಕೆಗಳಿಂದಲೇ ದೂರ ಉಳಿದು ಮೌನ ವಹಿಸಿದ್ದಾರೆ. ಹಾಗೆಯೇ ಶಾಸಕರಾದ ಎಂ.ಶ್ರೀನಿವಾಸ್ ಹಾಗೂ ಬಿ.ಆರ್.ರಾಮಚಂದ್ರು ಅವರ ಯಾವುದೇ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲ. ಇದೂ ಸಹ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
2ನೇ ಕ್ಷೇತ್ರ ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧೆ? : ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮಾಜಿ ಸಿಎಂ ಕುಮಾರಸ್ವಾಮಿಯೇ ಸ್ಪರ್ಧಿಸ ಬಹುದು ಎಂದು ಹೇಳ ಲಾಗುತ್ತಿದೆ. ಅತ್ತ ಶಾಸಕ ಎಂ.ಶ್ರೀನಿವಾಸ್ ಅವರ ಹೆಸರು ಘೋಷಣೆ ಮಾಡಿದ್ದರೂ, ಇತ್ತ ಬಿ.ಆರ್. ರಾಮಚಂದ್ರು ಕೂಡ ಪ್ರಚಾರ ನಡೆಸುತ್ತಿರುವುದು ಗೊಂದಲದ ಗೂಡಾಗಿದೆ. ಈ ಗೊಂದಲಕ್ಕೆ ತೆರೆ ಎಳೆಯಲು ಕೊನೇ ಘಳಿಗೆ ಯಲ್ಲಿ ಕುಮಾರಸ್ವಾಮಿಯೇ ಕ್ಷೇತ್ರಕ್ಕೆ ಬಂದರೆ ಅಚ್ಚರಿ ಯಿಲ್ಲ ಎಂಬ ಮಾತು ಕೇಳಿ ಬರುತ್ತಿವೆ. ಈಗಾಗಲೇ ಶಾಸಕ ಎಂ.ಶ್ರೀನಿವಾಸ್ ಕೂಡ ಕುಮಾರಸ್ವಾಮಿ ಬಂದರೆ ಸ್ವಾಗತ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತ ವಾಗಿದ್ದು, ಈ ಹಿನ್ನೆಲೆ ಸಿ.ಪಿ.ಯೋಗೇಶ್ವರ್ ಜತೆ ಕುಮಾರಸ್ವಾಮಿ ವಿರೋಧಿ ಬಳಗ ಕೈಜೋಡಿಸಿರುವು ದರಿಂದ ಈ ಬಾರಿ ಕ್ಷೇತ್ರ ಅಷ್ಟು ಸುಲಭವಾಗಿಲ್ಲ. ಆದ್ದರಿಂದ 2ನೇ ಕ್ಷೇತ್ರವಾಗಿ ಮಂಡ್ಯ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
– ಎಚ್.ಶಿವರಾಜು