Advertisement

ಬಾಲಮಂದಿರದಲ್ಲಿ ಬಾಲಕಿಗೆ ಕಿರುಕುಳ?

11:58 AM Feb 17, 2020 | Naveen |

ಮಂಡ್ಯ:ಪ್ರಾಪ್ತ ವಯಸ್ಸಿಗೆ ಮುನ್ನವೇ ನಿಶ್ಚಿತಾರ್ಥ ಮಾಡುತ್ತಿದ್ದ ಬಾಲಕಿಯನ್ನು ರಕ್ಷಣೆ ನೀಡಲು ಕರೆತಂದು ನಿಯಮಬಾಹಿರವಾಗಿ ಹಲವು ದಿನ ವಶದಲ್ಲಿಟ್ಟುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.

Advertisement

ಬಾಲಮಂದಿರದಲ್ಲಿ ಕಿರುಕುಳ ನೀಡುತ್ತಿರುವ ಬಗ್ಗೆ ಬಾಲಕಿ ಪೋಷಕರಿಗೆ ಪತ್ರವೊಂದನ್ನು ಬರೆದು ಕಳುಹಿಸಿದ್ದು ಅದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾಳೆ. ಬಾಲಕಿಯನ್ನು ಬಾಲಮಂದಿರಕ್ಕೆ ಕರೆತಂದು ಠಾಣೆಯಲ್ಲಿ ಪ್ರಕರಣ ದಾಖಲಾದ ಬಳಿಕವೂ ಬಾಲಕಿ ಇಚ್ಛೆಯಂತೆ ಪೋಷಕರ ವಶಕ್ಕೆ ಒಪ್ಪಿಸದಿರುವ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ನಡೆದಿದ್ದೇನು?: ಪಾಂಡವಪುರ ತಾಲೂಕಿನ ಗ್ರಾಮವೊಂದರ ಬಾಲಕಿ ಕುಸುಮಾ (ಹೆಸರು ಬದಲಿಸಲಾಗಿದೆ) ಪ್ರಾಪ್ತ ವಯಸ್ಸು ತುಂಬುವ ಮೊದಲೇ ಅದೇ ಗ್ರಾಮದ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥ ಏರ್ಪಡಿಸಲಾಗಿತ್ತು. ಈ ಮಾಹಿತಿ ಮಕ್ಕಳ ಸಹಾಯವಾಣಿಗೆ ಬಂದ ಮೇರೆಗೆ ಫೆ.6ರಂದು ಸಹಾಯವಾಣಿ ತಂಡದ ಸದಸ್ಯರಾದ ಸುಜಾತ ಅವರು ಪಾಂಡವಪುರ ಠಾಣೆ ಪಿಎಸ್‌ಐ ಸುಮಾರಾಣಿ ಅವರೊಂದಿಗೆ ಬಾಲಕಿ ಮನೆಗೆ ಮಧ್ಯಾಹ್ನ 2 ಗಂಟೆಗೆ ತೆರಳಿದಾಗ ಬಾಲಕಿ ಕುಸುಮಾಳ ಪೋಷಕರು, ಚಿಕ್ಕಪ್ಪ- ಚಿಕ್ಕಮ್ಮ ಹುಡುಗಿ ನಿಶ್ಚಿತಾರ್ಥ ಕಾರ್ಯ ನಡೆಸುತ್ತಿ ರುವುದು ಗೊತ್ತಾಗಿದೆ.

ಬಾಲಕಿಗೆ ಹೆಚ್ಚಿನ ರಕ್ಷಣೆ ನೀಡುವಂತೆ ಮಕ್ಕಳ ಸಹಾಯವಾಣಿ ಮತ್ತು ಮಕ್ಕಳ ರಕ್ಷಣಾಧಿಕಾರಿ ಸೂಚನೆಯಂತೆ ವಶಕ್ಕೆ ಪಡೆದು ತಾತ್ಕಾಲಿಕ ಆಶ್ರಯಕ್ಕಾಗಿ ಬಾಲಕಿಯನ್ನು ಬಾಲಮಂದಿರಕ್ಕೆ ದಾಖಲಿಸಲಾಗಿತ್ತು. ಬಾಲಕಿಯನ್ನು ಫೆ.6ರಂದೇ ಬಾಲಮಂದಿರಕ್ಕೆ ಕರೆದುಕೊಂಡು ಬಂದರೂ ಫೆ.13ರಂದು ಈ ಬಗ್ಗೆ ಪಾಂಡವಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಅಂಗನವಾಡಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಎಂ.ಭಾಗ್ಯ ನೀಡಿದ ದೂರಿನ ಮೇರೆಗೆ ನಿಶ್ಚಿತಾರ್ಥ ಮಾಡುತ್ತಿದ್ದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ-2016
(ಕೇಂದ್ರಿಯ) ಸೆಕ್ಷನ್‌ 2(ಬಿ) ಹಾಗೂ (ಸಿ) ಇದರಂತೆ ಮತ್ತು ಕರ್ನಾಟಕ ತಿದ್ದುಪಡಿ ಬಾಲ್ಯವಿವಾಹ ನಿಷೇಧ ಕಾಯ್ದೆ-2016ರ ಸೆಕ್ಷನ್‌ 11ರಂತೆ ಪಾಂಡವಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಶ್ನೆಪತ್ರಿಕೆಯಲ್ಲಿ ಆತ್ಮಹತ್ಯೆ ಬಗ್ಗೆಬಾಲಕಿ ಪತ್ರ
ಬಾಲಕಿ ಮೊದಲ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಪರೀಕ್ಷೆ ಆರಂಭಗೊಂಡಿದೆ. ಬಾಲಮಂದಿರದ ಅಧಿಕಾರಿಗಳು ಬಾಲಕಿಗೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಪ್ರಶ್ನೆ ಪತ್ರಿಕೆಯಲ್ಲಿ “ನನ್ನನ್ನು ಬಂದು ಕರೆದುಕೊಂಡು ಹೋಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ಪೋಷಕರಿಗೆ ಪತ್ರ ಬರೆದು ಸ್ನೇಹಿತರ ಮೂಲಕ ಮನೆಗೆ ತಲುಪಿಸಿದ್ದಾಳೆ. ಬಾಲಮಂದಿರದಲ್ಲಿ ತನಗೆ ಕೆಲಸ ಮಾಡು ಅಂತ ಬೈಯ್ತಿದ್ದಾರೆ. ಕಿರುಕುಳ ಕೊಡುತ್ತಾರೆ. ಕರೆದುಕೊಂಡು ಹೋಗಲಿಲ್ಲ ಅಂದರೆ ನಾನು ಸತ್ತುಹೋಗುತ್ತೇನೆ. ಪ್ಲೀಸ್‌.. ನನ್ನನ್ನು ಬಂದು ಕರೆದುಕೊಂಡು ಹೋಗು. ನನಗೆ ಇಲ್ಲಿರಲು ಆಗುತ್ತಿಲ್ಲ. ನಾಳೆ ಕಮಿಟಿ ಮೀಟಿಂಗ್‌ ಇದೆ. ನನಗೆ 18 ವರ್ಷ ಆಗುವವರೆಗೆ ಮದುವೆ ಮಾಡುವುದಿಲ್ಲ ಎಂದು ಲೆಟರ್‌ ಬರೆದುಕೊಡು. ನನ್ನನ್ನು ಕರೆದುಕೊಂಡು ಹೋಗು. ಏನಾದರೂ ಕರೆದುಕೊಂಡು ಹೋಗಲಿಲ್ಲ ಎಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪದೇ ಪದೇ ಬರೆದಿರುವುದು ಕಂಡುಬಂದಿದೆ.

Advertisement

ಬಾಲ ನ್ಯಾಯ ಕಾಯಿದೆ ಹೇಳುವುದೇನು?
ಬಾಲ ನ್ಯಾಯ ಕಾಯಿದೆ ಪ್ರಕಾರ ಬಾಲಕಿಯನ್ನು ಬಾಲಮಂದಿರಕ್ಕೆ ಕರೆತಂದ ಬಳಿಕ ಪೋಷಕರು ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಲು ನಿರಾಕರಿಸಿದರೆ ಅಥವಾ ಪೋಷಕರ ಜೊತೆ ಹೋಗುವುದಕ್ಕೆ ಬಾಲಕಿ ಸಮ್ಮತಿ ಸೂಚಿಸದಿದ್ದಾಗ ಮಾತ್ರ ಸುರಕ್ಷತೆ ದೃಷ್ಟಿಯಿಂದ ಬಾಲಮಂದಿರದಲ್ಲಿ ಇಟ್ಟುಕೊಳ್ಳುವುದಕ್ಕೆ ಅವಕಾಶವಿದೆ. ಈ ಪ್ರಕರಣದಲ್ಲಿ ಪೊಲೀಸ್‌ ಎಫ್ಐಆರ್‌ ಆದ ಬಳಿಕ ಬಾಲಕಿಯನ್ನು ಪೋಷಕರು ಕರೆದುಕೊಂಡು ಹೋಗಲು ಬಯಸಿದರೂ ಹಾಗೂ ಬಾಲಕಿಗೆ ಪೋಷಕರ ಜೊತೆ ಹೋಗುವುದಕ್ಕೆ ಇಷ್ಟವಿದ್ದರೂ ಕಳುಹಿಸಿಕೊಡದಿರುವುದು ನಿಯಮಬಾಹಿರ ಎಂದು ಕಾನೂನು ತಜ್ಞರು ಹೇಳುವ ಮಾತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next