Advertisement

ಗೌಪ್ಯವಾಗಿ ಇರಬೇಕಾದ ಮತವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ಮತದಾರ.!

08:49 PM Dec 29, 2020 | Team Udayavani |

ಮಂಡ್ಯ: ತಮ್ಮ ಇಷ್ಟದ ಅಭ್ಯರ್ಥಿಗೆ ಮತ ಹಾಕುವ ವೇಳೆಯಲ್ಲಿ ಮತದಾರರೊಬ್ಬರು ಮೊಬೈಲ್ ನಲ್ಲಿ ಹಕ್ಕು ಚಲಾಯಿಸುವ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತ ಕೇಂದ್ರವೊಂದರಲ್ಲಿ ಜರುಗಿದೆ.

Advertisement

ಮತದಾನ ಮಾಡುತ್ತಿರುವ ಈ ವಿಡಿಯೋ ಪಾಂಡವಪುರ ತಾಲ್ಲೂಕಿನ ಬಿಂಡಹಳ್ಳಿ ಗ್ರಾಮದ್ದು ಎಂದು ತಿಳಿದು ಬಂದಿದೆ. ಮತದಾನ ಗುಪ್ತವಾಗಿರಬೇಕು ಎಂಬುದಾಗಿ ಚುನಾವಣಾ ಆಯೋಗ ಸ್ಪಷ್ಟ ಸಂದೇಶ ನೀಡಿದ್ದು, ಮತ ಕೇಂದ್ರದೊಳಗೆ ಮತದಾರರಿಗೆ ಮೊಬೈಲ್ ನಿಷೇಧಿಸಲಾಗಿತ್ತು. ಆದರೂ ಮತದಾರರೊಬ್ಬರು ಮತ ಕೇಂದ್ರಕ್ಕೆ ಮೊಬೈಲ್ ತೆಗೆದುಕೊಂಡು ಹೋಗಿದ್ದಲ್ಲದೆ ಬ್ಯಾಲೆಟ್ ಪೇಪರ್‌ನಲ್ಲಿ ತಾವು ಅಭ್ಯರ್ಥಿಯ ಗುರುತಿಗೆ ಮತ ಹಾಕುತ್ತಿರುವ ವಿಡಿಯೋವನ್ನು ಸಹ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವ ಮೂಲಕ ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.

ಬ್ಯಾಲೆಟ್ ಪೇಪರ್‌ನಲ್ಲಿರುವ ಆಶಾ ಎಂಬುವರ ಹೆಸರಿನ ಮುಂದೆ ಇರುವ ಜೋಡಿ ತೆಂಗಿನ ಮರಕ್ಕೆ ಹಾಗೂ ಬಿ.ಎನ್.ರವಿ ಎಂಬುವರ ಹೆಸರಿನ ಮುಂದೆ ಇರುವ ಆಟೋ ಗುರುತಿಗೆ ಮತ ಹಾಕುತ್ತಿರುವ ವಿಡಿಯೋ ವೈರಲ್ ಮಾಡಲಾಗಿದೆ.

ವಿಡಿಯೋದಲ್ಲಿ ಬ್ಯಾಲೆಟ್ ಪೇಪರ್‌ನಲ್ಲಿ ಇರುವ ನಂಬರ್ ಸ್ಪಷ್ಟವಾಗಿ ಕಾಣುವುದರಿಂದ ಇದು ಬಿಂಡಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ನಡೆದಿರುವ ವಿಡಿಯೋ ಆಗಿದೆ ಎಂದು ತಿಳಿದು ಬಂದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಉಳಿದ ಅಭ್ಯರ್ಥಿಗಳು ಈ ವಿಚಾರವಾಗಿ ಪಾಂಡವಪುರ ತಹಶಿಲ್ದಾರ್ ಅವರಿಗೆ ದೂರು ನೀಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಸ್ಪಷ್ಟವಾಗಿ ಉಲ್ಲಂಘನೆಯಾಗಿರುವುದರಿಂದ ಕೂಡಲೇ ಈ ಮತವನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next