Advertisement
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್‌ಕುಮಾರಸ್ವಾಮಿ ಸಾಂಕೇತಿಕವಾಗಿ ಗುರುವಾರ (ಮಾ.21) ನಾಮಪತ್ರ ಸಲ್ಲಿಸಬೇಕಿತ್ತು. ಆದರೆ, ಯಾವುದೇ ಕಾರಣವಿಲ್ಲದೆ ದಿಢೀರನೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮವನ್ನು ಮುಂದೂಡಲಾಯಿತು. ಯಾವುದೇ ಪೂರ್ವಸಿದ್ಧತೆ ಇಲ್ಲದೆ ನಾಮಪತ್ರ ಸಲ್ಲಿಸಿ ಅಪಹಾಸ್ಯಕ್ಕೆ ಗುರಿಯಾಗುವುದು ಬೇಡ. ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಜಿಲ್ಲಾ ಕೇಂದ್ರಕ್ಕೆ ಕರೆತಂದು ಜನಸಾಗರದ ಮಧ್ಯೆ ಪುತ್ರನ ಉಮೇದುವಾರಿಕೆ ಸಲ್ಲಿಸುವ ಮಹತ್ವಾಕಾಂಕ್ಷೆ ಸಿಎಂ ಕುಮಾರಸ್ವಾಮಿ ಅವರದ್ದಾಗಿದೆ. ಈ ಸಂಬಂಧ ಈಗಾಗಲೇ ಜೆಡಿಎಸ್ ಸಚಿವರು, ಶಾಸಕರು ಹಾಗೂ ಮುಖಂಡರೊಂದಿಗೆ ಕಾರ್ಯತಂತ್ರ ರೂಪಿಸಿದ್ದಾರೆ.
Related Articles
Advertisement
ಜೆಡಿಎಸ್‌ಗೆ ಸಂಕಷ್ಟ: ಅಂಬರೀಶ್ ಕುಟುಂಬವನ್ನು ರಾಜಕೀಯವಾಗಿ ದೂರವಿಡಲು ಜೆಡಿಎಸ್ ನಾಯಕರು ಆಡಿದ ದುಡುಕಿನ ಮಾತುಗಳ ಪರಿಣಾಮ ಈಗ ಎದುರಿಸುವಂತಹ ಸಂಕಷ್ಟ ಸ್ಥಿತಿ ಜೆಡಿಎಸ್‌ನವರದ್ದಾಗಿದೆ. ಸುಮಲತಾ ಹಾಗೂ ಅಂಬರೀಶ್ ಪರವಾಗಿ ಮಾತನಾಡಿದರೂ ಅಪಾಯ. ಇಲ್ಲವೇ, ಸುಮಲತಾ ಬೆಂಬಲಕ್ಕೆ ನಿಂತಿರುವ ನಟರ ವಿರುದ್ಧ ಮಾತನಾಡಿದರೂ ವಿವಾದವನ್ನು ಮೈಮೇಲೆ ಎಳೆದುಕೊಂಡಂತಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಅಖಾಡದಲ್ಲಿ ಯಾವ ಮಾತುಗಳನ್ನಾಡಬೇಕೆಂಬುದೇ ಜೆಡಿಎಸ್‌ನವರಿಗೆ ಗೊತ್ತಾಗುತ್ತಿಲ್ಲ. ಜಿಲ್ಲೆ ಅಭಿವೃದ್ಧಿ ಮಾಡುವ ಮಾತುಗಳು ಅವರ ನೆರವಿಗೆ ಬರುತ್ತಿಲ್ಲ.
ಜನಾಕ್ರೋಶ: ಇಷ್ಟಲ್ಲದೆ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಅವರನ್ನು ಸಮರ್ಥಿಸಿಕೊಳ್ಳುವುದಕ್ಕೆ ಬಲವಾದ ಕಾರಣಗಳೂ ಇಲ್ಲ. ದೇವೇಗೌಡರ ಕುಟುಂಬ ರಾಜಕಾರಣಕ್ಕೆ ಸಿಎಂ ಕುಮಾರಸ್ವಾಮಿ ಆದಿಯಾಗಿ ಸ್ಥಳೀಯ ನಾಯಕರು ಹಲವು ಕಾರಣಗಳನ್ನು ಕೊಡುತ್ತಿದ್ದರೂ ಜನಾಕ್ರೋಶ ಕಡಿಮೆಯಾಗುತ್ತಿಲ್ಲ. ನಿಖಿಲ್ ಅವರನ್ನು ಕರೆತಂದಿದ್ದು ನಾವೇ ಎಂದು ಸಂಸದರು, ಶಾಸಕರು ಬೊಬ್ಬಿಡುತ್ತಿದ್ದರೂ ಜನರು ಅದನ್ನು ಒಪ್ಪುತ್ತಿಲ್ಲ. ನಿಖಿಲ್ ಅವರನ್ನು ಒಬ್ಬ ರಾಜಕಾರಣಿಯಾಗಿ ಸ್ವೀಕರಿಸುವುದಕ್ಕೆ ಜಿಲ್ಲೆಯ ಜನರು ಇನ್ನೂ ಮಾನಸಿಕವಾಗಿ ಸಿದ್ಧರಾಗಿಲ್ಲದಂತೆ ಕಂಡುಬರುತ್ತಿದೆ.
ಹಿಂದೆಂದೂ ಕಾಣದ ಸಂದಿಗ್ಧ ಪರಿಸ್ಥಿತಿ: ಸಾಮಾಜಿಕ ಜಾಲ ತಾಣಗಳಲ್ಲಿ ನಿಖಿಲ್ ಅವರನ್ನು ತಮಾಷೆಯ ವಸ್ತು (ಕಾಮಿಡಿ ಪೀಸ್)ವಾಗಿ ಕಾಣುತ್ತಿದ್ದಾರೆ. ನಿಖಿಲ್ ಎಲ್ಲಿದ್ದೀಯಪ್ಪ.. ಎಂಬ ಎರಡಕ್ಷರದ ಮಾತನ್ನೇ ಹಾಸ್ಯ ದಾಟಿಯಲ್ಲಿ ನೂರಾರು ಮಾದರಿಯಲ್ಲಿ ಚಿತ್ರಿಸಿ ಟ್ರೋಲ್ ಮಾಡಲಾಗುತ್ತಿದೆ. ಇದು ನಿಖಿಲ್ ರಾಜಕೀಯ ಭವಿಷ್ಯಕ್ಕೆ ಪ್ರಮುಖ ಅಡ್ಡಗಾಲಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಸಂಖ್ಯೆಯ ಜನರು ಇರದಿದ್ದರೂ ಮಾತಿನ ಮೂಲಕ ನಡೆಯುತ್ತಿರುವ ಪ್ರಚಾರ ಅತಿ ವೇಗದಲ್ಲಿ ಎಲ್ಲೆಡೆ ಹರಡುತ್ತಿದೆ. ಇದಕ್ಕೆ ಜೆಡಿಎಸ್‌ನವರು ಕಡಿವಾಣ ಹಾಕುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಭ್ಯರ್ಥಿ ವಿಷಯದಲ್ಲಿ ಎದುರಾಗಿರುವ ರಾಜಕೀಯ ಸಂದಿಗ್ಧ ಪರಿಸ್ಥಿತಿಯನ್ನು ಜೆಡಿಎಸ್‌ನ ಸ್ಥಳೀಯ ನಾಯಕರು ಹಿಂದಿನ ಯಾವುದೇ ಚುನಾವಣೆಯಲ್ಲೂ ಎದುರಿಸಿರಲಿಲ್ಲ ಎಂದು ಹೇಳಲಾಗುತ್ತಿದೆ.
ಜೆಡಿಎಸ್‌ಗೆ ಅಗ್ನಿಪರೀಕ್ಷೆ: ಸುಮಲತಾ ನಾಮಪತ್ರ ಸಲ್ಲಿಸಿ ಬಹಿರಂಗ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ನಡೆಸುವುದರೊಂದಿಗೆ ಜೆಡಿಎಸ್‌ನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಿದ್ದಾರೆ. ಇದನ್ನು ದೊಡ್ಡ ಸವಾಲಾಗಿ ಸ್ವೀಕರಿಸಿರುವ ಜೆಡಿಎಸ್ ಕೂಡ ಮಾ.25ರಂದು ನಿಖಿಲ್ ನಾಮಪತ್ರ ಸಲ್ಲಿಕೆ ದಿನ ನಡೆಯುವ ಜೆಡಿಎಸ್ ಬಹಿರಂಗ ಸಮಾವೇಶಕ್ಕೆ 1 ಲಕ್ಷಕ್ಕೂ ಹೆಚ್ಚು ಜನರನ್ನು ಕರೆತರುವ ಶಪಥ ಮಾಡಿದ್ದಾರೆ. ಒಟ್ಟಾರೆ ರಣಕಣವಾಗಿ ಮಂಡ್ಯ ಲೋಕಸಭಾ ಕ್ಷೇತ್ರ ರೂಪಾಂತರಗೊಂಡಿದೆ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಅಂಬರೀಶ್ ಅಭಿಮಾನದ ಹೋರಾಟದಲ್ಲಿ ಯಾವುದಕ್ಕೆ ಅಂತಿಮ ಗೆಲುವು ಸಿಗಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.
ಸುಮಳಿಗೆ ಯಾರಿಂದ ರಾಜಕೀಯ ಪಾಠ?: ಪಕ್ಷೇತರ ಅಭ್ಯರ್ಥಿ ಸುಮಲತಾ ಬೆನ್ನ ಹಿಂದೆ ನಿಂತು ಚುನಾವಣಾ ಮಾರ್ಗದರ್ಶನ ಮಾಡುತ್ತಿರುವವರು ಯಾರು, ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲದ ಮಹಿಳೆ ರಾಜಕಾರಣದ ಪಾಠ ಯಾರಿಂದ ಕಲಿಯುತ್ತಿದ್ದಾರೆ. ಚುನಾವಣಾ ಅಖಾಡದಲ್ಲಿ ಏಕಾಂಗಿಯಾಗಿ ಜನರನ್ನು ಆಕರ್ಷಿಸುವ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದು ಹೇಗೆ, ಮಾತಿನಲ್ಲಿ ಸ್ಪಷ್ಟತೆ, ದಿಟ್ಟತನದಿಂದ ಉತ್ತರ ನೀಡುವ ಸಾಮರ್ಥ್ಯ ಎಲ್ಲಿಂದ ಬಂತು, ಅಂಬರೀಶ್ ಬದುಕಿದ್ದಾಗ ರಾಜಕಾರಣದಿಂದ ಬಹಳ ಅಂತರ ಕಾಯ್ದುಕೊಂಡಿದ್ದ ಸುಮಲತಾ, ಕೇವಲ ಮೂರೇ ತಿಂಗಳಲ್ಲಿ ರಾಜಕೀಯ ಧೀಮಂತ ಶಕ್ತಿಯನ್ನು ರೂಢಿಸಿಕೊಂಡಿರುವ ಬಗ್ಗೆ ಜೆಡಿಎಸ್‌ನವರು ತಲೆಕೆಡಿಸಿಕೊಂಡಿದ್ದಾರೆ. ಸುಮಲತಾ ಚುನಾವಣಾ ರಣನೀತಿಯನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದೆ ತಿಣುಕಾಡುತ್ತಿದ್ದಾರೆ.
ಅಂಬರೀಶ್ ಹೆಸರೇ ಬ್ರಹ್ಮಾಸ್ತ್ರ: ಚುನಾವಣಾ ಸಂಗ್ರಾಮದಲ್ಲಿ ಪ್ರಭಾವಿ ನಾಯಕರ ನೆರವಿಲ್ಲದೆ, ಯಾವುದೇ ಪಕ್ಷದ ಬೆಂಬಲವಿಲ್ಲದೆ ಅಂಬರೀಶ್ ಹೆಸರನ್ನೇ ಬ್ರಹ್ಮಾಸ್ತ್ರವಾಗಿ ಬಳಸಿಕೊಂಡು ಸುಮಲತಾ ಮುನ್ನಡೆಯುತ್ತಿದ್ದಾರೆ. ಈ ಅಸ್ತ್ರ ಸುಮಲತಾಗೆ ದೊಡ್ಡ ಶಕ್ತಿಯಾಗಿ ನಿಂತಿರುವಂತೆ ಕಂಡುಬರುತ್ತಿದೆ. ಅಂಬರೀಶ್ ನಾಮಸ್ಮರಣೆಗೆ ಜಿಲ್ಲೆಯ ಜನರು ತಲೆದೂಗುತ್ತಿದ್ದಾರೆಂಬ ಭಾವನೆ ಎಲ್ಲೆಡೆ ಮೂಡಲಾರಂಭಿಸಿದೆ. ಈ ಅನುಕಂಪದ ಅಲೆಯೇ ಸುಮಲತಾ ನಾಮಪತ್ರ ಸಲ್ಲಿಕೆಯ ದಿನ ಮೇಲೆದ್ದು ಬಂದಂತಿತ್ತು. ಈ ಅಲೆಯನ್ನು ತಗ್ಗಿಸುವುದು ದಳಪತಿಗಳಿಗೆ ದೊಡ್ಡ ಸವಾಲಾಗಿದೆ.
ಜೆಡಿಎಸ್ ಶಕ್ತಿಕೇಂದ್ರದೊಳಗೆ ಸ್ತ್ರೀಶಕ್ತಿ: ಸುಮಲತಾ ಪರ ಮಹಿಳೆಯರ ಒಲವು ಹೆಚ್ಚಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಏಕೆಂದರೆ, ಬುಧವಾರ ಸುಮಲತಾ ನಡೆಸಿದ ಬಹಿರಂಗ ಸಮಾವೇಶಕ್ಕೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿದ್ದರು. ಸುಮಲತಾ ಡ್ರೆಸ್‌ಕೋಡ್, ಶಿಸ್ತುಬದ್ಧ ನಡೆಗೆ ಗ್ರಾಮೀಣ ಮಹಿಳೆಯರು ಆಕರ್ಷಿತರಾಗಿದ್ದಾರೆ ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದೆ.
ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ, ಅವಮಾನದ ಮಾತುಗಳಿಂದ ಆತ್ಮವಿಶ್ವಾಸ ಕಳೆದುಕೊಳ್ಳದೆ, ಮಂಡ್ಯದ ಜನರು ನನ್ನ ಕೈ ಬಿಡುವುದಿಲ್ಲವೆಂಬ ಅಚಲ ನಂಬಿಕೆಯೊಂದಿಗೆ ಚುನಾವಣಾ ಅಖಾಡದಲ್ಲಿ ಅಂಬಿ ಮಾದರಿಯಲ್ಲೇ ಒಂಟಿ ಸಲಗನಂತೆ ಮುನ್ನಡೆಯುತ್ತಿದ್ದಾರೆ. ಜೆಡಿಎಸ್ ಶಕ್ತಿಕೇಂದ್ರದೊಳಗೆ ನವಶಕ್ತಿಯೊಂದಿಗೆ ಮುನ್ನುಗ್ಗುತ್ತಿರುವ ಸುಮಲತಾ ಎಂಬ ಅಶ್ವವನ್ನು ಕಟ್ಟಿಹಾಕಲಾಗದೆ ಜೆಡಿಎಸ್ ನಾಯಕರು ಚಡಪಡಿಸುತ್ತಿದ್ದಾರೆ.
* ಮಂಡ್ಯ ಮಂಜುನಾಥ್