ಮಂಡ್ಯ: ಶುಭ ಸಮಾರಂಭಗಳಲ್ಲಿ ಸಾರ್ವಜನಿಕರು, ಹಿರಿಯರು, ಸ್ನೇಹಿತರಿಗೆ ಶುಭಕೋರುವ ಸಮಯದಲ್ಲಿ ಹೂವಿನ ಕುಂಡಗಳನ್ನು ನೀಡುವ ಮೂಲಕ ಸ್ವಾಗತಿಸುವುದರೊಂದಿಗೆ ಪ್ಲಾಸ್ಟಿಕ್ ನಿರ್ಮೂಲನೆಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಮನವಿ ಮಾಡಿದರು.
ಬುಧವಾರ ತೋಟಗಾರಿಕೆ ಇಲಾಖಾ ಆವರಣದಲ್ಲಿ ನಡೆದ ತೋಟಗಾರಿಕೆ ಇಲಾಖೆಯಿಂದ ಸಿಗುವ ವಿವಿಧ ಜಾತಿಯ ಹೂವಿನ ಗಿಡಗಳ ಕುಂಡಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪುಷ್ಪಕೃಷಿ ಪ್ರೋತ್ಸಾಹಿಸಿ: ಹೂಗುಚ್ಛಗಳ ತಯಾರಿಕೆಯಲ್ಲಿ ಹೆಚ್ಚಾಗಿ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಹೂಗುತ್ಛಗಳು ಕೇವಲ 1 ರಿಂದ 2 ನಿಮಿಷ ಬಾಳಿಕೆ ಬರುವಂತಹವು. ಬಳಿಕ ಅವು ಕಸದ ಬುಟ್ಟಿ ಸೇರುತ್ತವೆ. ಅದರ ಬದಲು ಹೂವಿನ ಕುಂಡಗಳನ್ನು ನೀಡುವುದರಿಂದ ಪುಷ್ಪಕೃಷಿಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಬಿದಿರಿನ ಬುಟ್ಟಿಗಳಲ್ಲಿ ನೀಡುವುದರಿಂದ ಗುಡಿ ಕೈಗಾರಿಕೆಯನ್ನೂ ಉತ್ತೇಜಿಸಿ ದಂತಾಗುವುದು ಎಂದು ಹೇಳಿದರು.
ಸಕಾರಾತ್ಮಕ ಭಾವನೆ: ವಿವಿಧ ಬಗೆಯ ಹೂವಿನ ಕುಂಡಗಳನ್ನು ಕಚೇರಿ, ಮನೆಗಳಲ್ಲಿ ಇಡುವುದರಿಂದ ಹಸಿರಿನ ವಾತಾವರಣ, ಹೆಚ್ಚಿನ ಆಮ್ಲಜನಕ ಉತ್ಪಾದನೆಯೊಂದಿಗೆ ಸಕಾರಾತ್ಮಕ ಭಾವನೆಗಳು ಮೂಡುತ್ತವೆ. ದೀರ್ಘಕಾಲ ಬಾಳಿಕೆ ಬರುವ ಹೂವಿನ ಗಿಡಗಳು ಮನೆಯ ಸೊಬಗನ್ನು ಹೆಚ್ಚಿಸುತ್ತವೆ. ಆದ್ದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೂವಿನ ಕುಂಡಗಳನ್ನು ಶುಭ ಸಮಾರಂಭಗಳಲ್ಲಿ ಭಾಗವಹಿಸುವವರಿಗೆ ನೀಡುವಂತೆ ಕೋರಿದರು.
ಹೂವು, ಹಣ್ಣು ಗಿಡ: ಒಂದು ಹೂವಿನ ಕುಂಡಕ್ಕೆ 50 ರೂ. ಬಿದಿರಿನ ಬುಟ್ಟಿಗೆ 50 ರೂ. ಸೇರಿ 100 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಹಾಪ್ ಕಾಮ್ಸ್‌ಗಳಲ್ಲಿ ದೊರೆಯುವಂತೆಯೂ ವ್ಯವಸ್ಥೆ ಮಾಡಲಾಗಿದೆ. ಪುಷ್ಪಗಳ ಜೊತೆಗೆ ಹಣ್ಣಿನ ಗಿಡಗಳನ್ನೂ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಜು, ಹಿರಿಯ ಸಹಾಯಕ ನಿರ್ದೇಶಕಿ ರೇಖಾ, ವಾರ್ತಾಧಿಕಾರಿ ಹರೀಶ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.