ಮಂಡ್ಯ: ತಾಲೂಕಿನ ದುದ್ದ ಹೋಬಳಿಯ ಹುಳ್ಳೇನಹಳ್ಳಿ ಗ್ರಾಮದ ಬಳಿ ಹಾಡ್ಯದ ಆಲೆಮನೆಯಲ್ಲಿ ಭ್ರೂಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ, ಆರೋಪಿಗಳು ಹೊರ ಜಿಲ್ಲೆಯ ಗರ್ಭಿಣಿಯರನ್ನೇ ಹೆಚ್ಚು ಟಾರ್ಗೆಟ್ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ.
ಹೊರ ಜಿಲ್ಲೆಯ ಗರ್ಭಿಣಿಯರನ್ನು ಕರೆತಂದು ಭ್ರೂಣಪತ್ತೆ ಮಾಡಲಾಗುತ್ತಿತ್ತು. ಐದಾರು ಗರ್ಭಿಣಿಯರನ್ನು ಒಂದೇ ಬಾರಿಗೆ ಆಲೆಮನೆಯ ಶೆಡ್‌ಗೆ ಕರೆತರುತ್ತಿದ್ದರು. ಯಾರಿಗೂ ಅನುಮಾನ ಬಾರದಂತೆ ಹೊರ ಜಿಲ್ಲೆಯ ಸ್ತ್ರೀಶಕ್ತಿ ಸಂಘದ ಸದಸ್ಯರು ಎಂದು ಹೇಳಿಕೊಂಡು ಕೃತ್ಯ ನಡೆಸಲಾಗುತ್ತಿತ್ತು.
ಹುಳ್ಳೇನಹಳ್ಳಿ ಗ್ರಾಮದ ನಯನ್‌ಕುಮಾರ್ ಹಾಗೂ ಪಾಂಡವಪುರ ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ನವೀನ್ ಭ್ರೂಣಪತ್ತೆಯಲ್ಲಿ ತೊಡಗಿದ್ದರು. ನಯನ್‌ಕುಮಾರ್ ಅಕ್ಕನನ್ನೇ ನವೀನ್ ಮದುವೆಯಾಗಿದ್ದ. ನಯನ್ ಗ್ರಾಮದಲ್ಲಿ ಕಿರಾಣಿ ಅಂಗಡಿ, ವ್ಯವಸಾಯ, ಹಸು ಸಾಕಾಣಿಕೆ ಮಾಡುತ್ತಿದ್ದರೆ, ನವೀನ್ ಗ್ರಾಮದಲ್ಲಿ ಕೇಬಲ್ ಆಪರೇಟರ್ ಆಗಿದ್ದ. ಹೆಚ್ಚು ಹಣ ಸಂಪಾದಿ ಸಲು ಹೇಯ ಕೃತ್ಯಕ್ಕೆ ಕೈಹಾಕಿದ್ದರು ಎಂದು ತಿಳಿದು ಬಂದಿದೆ.
ನವೀನ್ ಸಂಬಂ ಧಿಕರ ಆಲೆಮನೆಯನ್ನೇ ಬಾಡಿಗೆ ಪಡೆದಿದ್ದರು. ಆಲೆಮನೆಯ ಹೆಸರಲ್ಲಿ ಕರಾಳ ದಂಧೆ ನಡೆಸುತ್ತಿದ್ದರು. ವಾರಕ್ಕೆ ಎರಡು ಮೂರು ಬಾರಿ ಕಾರಿನಲ್ಲಿ ಸಂಜೆ ವೇಳೆ ಕರೆದುಕೊಂಡು ಬಂದು ಕೆಲವೇ ಗಂಟೆಗಳಲ್ಲಿ ಸ್ಕ್ಯಾನಿಂಗ್ ಮಾಡಿ ಕಳುಹಿಸುತ್ತಿದ್ದರು.
ಈ ದಂಧೆಯಿಂದ ನಯನ್‌ಕುಮಾರ್ ಲಕ್ಷ ಲಕ್ಷ ಹಣ ಸಂಪಾದಿಸಿದ್ದ. ಬಳಿಕ ಹಸು ನೋಡಿಕೊಳ್ಳಲು, ಮೇವು ತರಲು ಆಳುಗಳನ್ನು ಇಟ್ಟುಕೊಂಡಿದ್ದ. ನೋಡ ನೋಡುತ್ತಿದ್ದಂತೆಯೇ ದಿಢೀರ್ ಹಣ ಸಂಪಾದಿಸಿದ್ದನ್ನು ಕಂಡು ಗ್ರಾಮಸ್ಥರೇ ಆಶ್ಚರ್ಯ ವ್ಯಕ್ತಪಡಿಸಿದ್ದರು. ಈಗ ಹಾಡ್ಯ ಗ್ರಾಮಕ್ಕೆ ಯಾರೇ ಹೊಸಬರು ಬಂದರೂ ಅನುಮಾನದಿಂದ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಆಲೆಮನೆ ಬಗ್ಗೆ ಗ್ರಾಮದ ಎಷ್ಟೋa ಮಂದಿಗೆ ಗೊತ್ತೇ ಇಲ್ಲ. ಅಲ್ಲಿ ಭ್ರೂಣಪತ್ತೆ ನಡೆಯುತ್ತಿದ್ದುದರ ಬಗ್ಗೆಯೂ ಗ್ರಾಮಸ್ಥರಿಗೆ ಸುಳಿವೇ ಇಲ್ಲದಂತೆ ಆರೋಪಿಗಳು ಕೃತ್ಯ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಇಷ್ಟೆಲ್ಲ ಆದರೂ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.