ಬೆಂಗಳೂರು: ಇಡೀ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿರುವ ಬೆನ್ನಲ್ಲೇ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮಂಜುಶ್ರೀ ಅವರನ್ನು ಚುನಾವಣ ಆಯೋಗ ಎತ್ತಂಗಡಿ ಮಾಡಿದೆ.
ಕೇಂದ್ರ ಚುನಾವಣ ಆಯೋಗದ ನಿರ್ದೇಶನದಂತೆ ಮಂಜುಶ್ರೀ ಅವರನ್ನು ವರ್ಗಾವಣೆಗೊಳಿಸಿರುವ ರಾಜ್ಯ ಸರಕಾರ ಆ ಜಾಗಕ್ಕೆ ಪಿ.ಸಿ. ಜಾಫರ್ ಅವರನ್ನು ವರ್ಗಾವಣೆ ಮಾಡಿದೆ. ಮಂಡ್ಯದ ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖೀಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಯಲ್ಲಿ ಲೋಪವಾಗಿದೆ ಎಂದು ಸುಮಲತಾ ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ನಿಖೀಲ್ ಕುಮಾರಸ್ವಾಮಿ ನಾಮಪತ್ರದಲ್ಲಿ ಯಾವುದೇ ಲೋಪವಿಲ್ಲ ಎಂದು ಮಂಡ್ಯ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮಂಜುಶ್ರೀ ಸಿಂಧುಗೊಳಿಸಿದ್ದರು.
ಅಲ್ಲದೆ ನಾಮಪತ್ರ ಸಲ್ಲಿಕೆಯ ಸಂಪೂರ್ಣ ವೀಡಿಯೋ ನೀಡುವಂತೆ ಕೇಳಿದ್ದರೂ ಕೆಲವು ನಿಮಿಷಗಳ ವೀಡಿಯೋ ಎಡಿಟ್ ಮಾಡಲಾಗಿದೆ ಎಂದು ಸುಮಲತಾ ಅವರು ಆರೋಪ ಮಾಡಿದ್ದರು. ಅಲ್ಲದೆ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ಚುನಾವಣ ಆಯೋಗಕ್ಕೆ ದೂರು ನೀಡಿದ್ದರು.
ಸುಮಲತಾ ಅವರ ದೂರಿನ ಅನ್ವಯ ಕೇಂದ್ರದ ವಿಶೇಷ ಚುನಾವಣ ವೆಚ್ಚ ವೀಕ್ಷಕ ಮಧು ಮಹಾಜನ್ ಅವರ ಜತೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಕೂಡ ಮಂಡ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೇಂದ್ರ ಚುನಾವಣ ಆಯೋಗಕ್ಕೆ ವರದಿ ಸಲ್ಲಿಸಿದ್ದರು.