Advertisement

ಊಟದ ವಿಚಾರಕ್ಕೆ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆ : ಪೊಲೀಸರಿಂದ 6 ಮಂದಿ ಬಂಧನ

08:07 PM Jul 19, 2021 | Team Udayavani |

ಮಂಡ್ಯ : ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಜು.14ರಂದು ರಾತ್ರಿ 8.30ರ ಸಮಯದಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಹಲಗೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಮಳವಳ್ಳಿ ಪಟ್ಟಣದ ಎನ್‌ಇಎಸ್ ಬಡಾವಣೆಯ ಸಿದ್ದರಾಜೇಗೌಡ ಪುತ್ರ ಸಿ.ಎಸ್.ರಾಜು(34)ಕೊಲೆಯಾದ ವ್ಯಕ್ತಿ. ಮಳವಳ್ಳಿ ತಾಲೂಕಿನ ಪುರದದೊಡ್ಡಿ ಗ್ರಾಮದ ರವಿಚಂದ್ರ(29), ಹಲಗೂರಿನ ಎಚ್.ಎನ್.ಪ್ರಶಾಂತ್(26), ಕಿರಣ್(26), ಮಡಳ್ಳಿಗ್ರಾಮದ ಬಿಕಾಂ ವಿದ್ಯಾರ್ಥಿ ಜಿ.ಎಸ್.ಅಭಿಲಾಷ(21), ಕೊನ್ನಾಪುರ ಗ್ರಾಮದ ಹೇಮಂತ್‌ಗೌಡ(22), ಓ.ಬಿ.ದೊಡ್ಡಿ ಗ್ರಾಮದ ಮುದ್ದೇಗೌಡ(25) ಬಂಧಿತ ಆರೋಪಿಗಳು.

ಘಟನೆ ವಿವರ:
ಜು.13ರಂದು ತಲಕಾಡು ಬಳಿ ಇರುವ ಶಿಂಷಾ ಮಾರಮ್ಮ ದೇವಾಲಯದ ಬಳಿ ಊಟದ ವಿಚಾರಕ್ಕೆ ಆರೋಪಿ ರವಿಚಂದ್ರ ಹಾಗೂ ಮೃತ ರಾಜು ನಡುವೆ ಗಲಾಟೆ ನಡೆದಿತ್ತು. ಈ ದ್ವೇಷದ ಹಿನ್ನೆಲೆಯಲ್ಲಿ ಜು.14ರಂದು ರಾಜು ಗಾರ್ಮೆಂಟ್ಸ್ ನೌಕರರನ್ನು  ಆಟೋದಲ್ಲಿ ಬಿಟ್ಟು ಹಲಗೂರಿನ ಮಾಸ್ತಮ್ಮ ದೇವಾಲಯದ ಬಳಿ ಟೀ ಕುಡಿಯುತ್ತಿದ್ದಾಗ ಆರೋಪಿ ರವಿಚಂದ್ರ ಹಾಗೂ ಸ್ನೇಹಿತರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು.

ಇದನ್ನೂ ಓದಿ : ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವ ಆತಂಕ : ಮನನೊಂದ ವಿದ್ಯಾರ್ಥಿನಿಯಿಂದ ಆತ್ಮಹತ್ಯೆಗೆ ಯತ್ನ

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಒಂದು ಆಫೆ ಆಟೋ, ಒಂದು ಲಾಂಗು, ಒಂದು ಬಟನ್ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳ ಪತ್ತೆ ತಂಡದಲ್ಲಿದ್ದ ಸಿಪಿಐ ಡಿ.ಪಿ.ಧನರಾಜ್ ನೇತೃತ್ವದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ಶ್ಲಾಘಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.