Advertisement

ಮಂಡ್ಯ ಜಿಲ್ಲೆಯಲ್ಲಿಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು –  ಸಚಿವ ಡಾ. ನಾರಾಯಣಗೌಡ

06:14 PM Apr 20, 2021 | Team Udayavani |

ಬೆಂಗಳೂರು :ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣ ಹೆಚ್ಚಾಗಬೇಕು. ಕೋವಿಡ್  ಸಂಪೂರ್ಣ ನಿಯಂತ್ರಣಕ್ಕೆ ಬರಬೇಕು. ಪ್ರತಿ ತಾಲೂಕಿನಲ್ಲೂ ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಿ. ಎಲ್ಲ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿ ಇರಬೇಕು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಂಗಳವಾರ ವಿಕಾಸ ಸೌಧದಿಂದ ಜಿಲ್ಲೆಯ ಮತ್ತು ತಾಲೂಕು ಅಧಿಕಾರಿಗಳ ಜೊತೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ಮಂಡ್ಯ ಜಿಲ್ಲೆಯಲ್ಲಿನ ಕೋವಿಡ್ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳ ಜೊತೆ ಸಭೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು. ಅಲ್ಲದೆ ಯಾವುದೆ ಪರಿಸ್ಥಿತಿಯಲ್ಲೂ  ಜಿಲ್ಲೆಯಲ್ಲಿ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿರುವ ವೈದ್ಯಕೀಯ ವ್ಯವಸ್ಥೆ ಹಾಗೂ ಕೋವಿಡ್ ಟೆಸ್ಟಿಂಗ್ ಬಗ್ಗೆ ಜಿಲ್ಲಾಧಿಕಾರಿ ಡಾ. ಅಶ್ವಥಿ ವಿವರಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಸರಾಸರಿ ಪ್ರತಿನಿತ್ಯ 4 ಸಾವಿರ ಜನರಿಗೆ ಕೋವಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ. ಆ ಪೈಕಿ ಶೇ.6 ರಷ್ಟು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದೆ. ಇದುವರೆಗೆ 26300 ಟೆಸ್ಟಿಂಗ್ ಮಾಡಲಾಗಿದ್ದು 1661 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಮಳವಳ್ಳಿ ತಾಲೂಕಿನಲ್ಲಿ 28 ಪಾಸಿಟಿವ್ ಕೇಸ್ ಇದೆ. ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶ್ರೀರಂಗಪಟ್ಟಣದಲ್ಲಿ 74 ಪಾಸಿಟಿವ್ ಕೇಸ್ ಇದ್ದು, 5 ಐಸಿಯು ಬೆಡ್, 50 ಆಕ್ಸಿಜನ್ ಬೆಡ್, 5 ವೆಂಟಿಲೇಟರ್ ವ್ಯವಸ್ಥೆ ಇದೆ. ವ್ಯದ್ಯಾಧಿಕಾರಿಗಳಿಗೆ ವಸತಿ ವ್ಯವಸ್ಥೆ ಕೂಡ ಮಾಡಲಾಗಿದೆ. ಪಾಂಡವಪುರದಲ್ಲಿ 151 ಪಾಸಿಟಿವ್ ಕೇಸ್ ಇದೆ. ಐಸಿಯು 6 ಬೆಡ್ ಇದೆ. 50 ಆಕ್ಸಿಜನ್ ಬೆಡ್ ಹಾಗೂ 3 ವೆಂಟಿಲೇರ್ ಬೆಡ್ ವ್ಯವಸ್ಥೆ ಇದೆ. ಕೆ.ಆರ್ ಪೇಟೆಯಲ್ಲಿ 122 ಪಾಸಿಟಿವ್ ಕೇಸ್ ಇದೆ. 3 ಐಸಿಯು ಬೆಡ್ ಇದ್ದು ಇನ್ನೂ ಮೂರು ಐಸಿಯು ವಾರದೊಳಗೆ ಸಿದ್ದವಾಗಲಿದೆ.  ನಾಗಮಂಗಲದಲ್ಲಿ 63 ಪಾಸಿಟಿವ್ ಕೇಸ್ ಇದೆ. ನಿತ್ಯ 500 ಕ್ಕೂ ಹೆಚ್ಚು ಟೆಸ್ಟಿಂಗ್ ಮಾಡಲಾಗುತ್ತಿದೆ. ಮದ್ದೂರಿನಲ್ಲಿ 187 ಕೋವಿಡ್ ಪಾಸಿಟಿವ್ ಪ್ರಕರಣ ಇದೆ. 3 ಐಸಿಯು ,3 ವೆಂಟಿಲೇಟರ್ ಬೆಡ್ ಇದೆ. 30 ಆಕ್ಸಿಜನ್ ಬೆಡ್ ವ್ಯವಸ್ಥೆ ಇದೆ. ಮಂಡ್ಯದಲ್ಲಿ 495 ಕೊವಿಡ್ ಪಾಸಿಟಿವ್ ಕೇಸ್ ಇದೆ. ಒಂದು ವಾರದಲ್ಲಿ 4500 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. 52 ಐಸಿಯು ಬೆಡ್ ವ್ಯವಸ್ಥೆ ಇದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಪ್ರತಿ ತಾಲೂಕಿನಲ್ಲಿ ಸ್ಟೆಪ್ ಅಪ್ ಆಸ್ಪತ್ರೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, 200-500 ಬೆಡ್ ಹಾಕುವಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಹಾಗೂ ಹಾಸ್ಟೆಲ್ ಗಳಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಮಾಸ್ಕ್ ಧರಿಸದವರಿಗೆ ಧಂಡ ಹಾಕುವುದರ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದ್ದು, ಸುಮಾರು 4 ಲಕ್ಷ ರೂ. ನಷ್ಟು ದಂಡವನ್ನು ವಸೂಲಿ ಮಾಡಲಾಗಿದೆ.

Advertisement

ಜಿಲ್ಲೆಯಲ್ಲಿ ಮದುವೆ, ಸಭೆ, ಸಮಾರಂಭಗಳು ನಡೆಯುವ ಸ್ಥಳಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು. ಸಂಪೂರ್ಣವಾಗಿ ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ ಪಿಪಿಇ ಕಿಟ್, ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ಯಾವುದು ಕೂಡ ಕೊರತೆ ಆಗಬಾರದು. ಸಿಬ್ಬಂದಿ ಕೊರತೆ, ಆಂಬ್ಯುಲೆನ್ಸ್ ಅಗತ್ಯತೆ ಇದ್ದಲ್ಲಿ ತಕ್ಷಣವೆ ಮಾಹಿತಿ ನೀಡುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಕೊವಿಡ್ ಟೆಸ್ಟಿಂಗ್ ಪ್ರಮಾಣ ವಾರದೊಳಗೆ ದ್ವಿಗುಣವಾಗುವಂತೆ ಕ್ರಮ ವಹಿಸಿ. ಎಲ್ಲ ತಾಲೂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುತ್ತೇನೆ.  ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೆ ಸಮಸ್ಯೆ ಕಂಡುಬರಬಾರದು. ಆ ದಿಶೆಯಲ್ಲಿ ಈಗಲೆ ಕ್ರಮ ತೆಗೆದುಕೊಳ್ಳಿ ಎಂದು ಅಧಿಕಾರಿಗಳಿಗೆ ಸಚಿವರು ಖಡಕ್ಕಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಡಾ. ಅಶ್ವಥಿ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ, ಉಪವಿಭಾಗಾಧಿಕಾರಿಗಳಾದ ಶಿವಾನಂದ ಮೂರ್ತಿ ಮತ್ತು ಐಶ್ವರ್ಯ, ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲ ತಹಶೀಲ್ದಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next