Advertisement
ನಗರದ ಆದಾಯ ತೆರಿಗೆ ಇಲಾಖೆ ಮುಂದೆ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆದಾಯ ತೆರಿಗೆ ಇಲಾಖೆಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಡೆದರು. ನಂತರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ದೇಶದಲ್ಲಿ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಗಿದ ಅಧ್ಯಾಯವಾಗಿತ್ತು. ಅದನ್ನು ಮತ್ತೆ ಮರು ತನಿಖೆಗೆ ಆದೇಶ ಮಾಡಿ, ದ್ವೇಷ ಸಾಧಿಸುವ ಕೆಲಸ ಮಾಡಲಾಗುತ್ತಿದೆ. ಎಂಟು ವರ್ಷಗಳಿಂದ ಸುಮ್ಮನಿದ್ದು, ಮುಂದಿನ ಬಾರಿ ಚುನಾವಣೆಯ ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೇಲೆ ಅಪನಂಬಿಕೆ ಬರುವಂತೆ ಮಾಡುವ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.
Related Articles
Advertisement
ಜನರ ದಿಕ್ಕು ತಪ್ಪಿಸುವ ಕೆಲಸ: ರಾಜ್ಯ ಸರ್ಕಾರದ ಮೇಲೂ ಆರ್‌ಎಸ್‌ಎಸ್ ಪ್ರಭಾವ ಬೀರಿದ್ದು, ಹಿಜಾಬ್, ಹಲಾಲ್ ಕಟ್, ಮಸೀದಿ, ಪಠ್ಯ ಪರಿಷ್ಕರಣೆ ಸೇರಿ ಅನೇಕ ವಿವಾದಗಳನ್ನು ಹುಟ್ಟುಹಾಕಿ, ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನರ ಸಮಸ್ಯೆ ನಿವಾರಿಸುವ ಬದಲು ಕೇವಲ ವಿವಾದ, ಗಲಭೆ ಎಬ್ಬಿಸುವ ಕೆಲಸ ಮಾಡಲಾಗುತ್ತಿದೆ. ಕುವೆಂಪು ನಾಡಗೀತೆಗೆ ಅವಮಾನ ಮಾಡುವ ಮೂಲಕ ಮಕ್ಕಳಿಗೆ ಆರ್‌ಎಸ್‌ಎಸ್ ಸಿದ್ಧಾಂತ ತುಂಬುವ ಕೆಲಸಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ದ್ವೇಷ ರಾಜಕಾರಣ ಬಿಡಬೇಕು: ಬಿಜೆಪಿ ಸರ್ಕಾರದ ಇಂತಹ ದ್ವೇಷ ರಾಜಕಾರಣ ಬಿಡಬೇಕು. ಅಲ್ಲದೆ, ನಮ್ಮ ಪಕ್ಷದ ಹಿರಿಯ ನಾಯಕರು, ಸಂಸದರು, ಶಾಸಕರು, ಕಾರ್ಯಕರ್ತರ ಮೇಲಿನ ಹಿಂಸಾಚಾರಕ್ಕೆ ದೇಶದ ಜನರ ಕ್ಷಮೆಯಾಚಿಸಬೇಕು. ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನೀತಿಗಳನ್ನು ನಿಲ್ಲಿಸಿ ಪ್ರಜಾಪ್ರಭುತ್ವದ ಗೌರವ ಕಾಪಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಎನ್. ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಎಂ. ಎಸ್.ಆತ್ಮಾನಂದ, ವಿಧಾನ ಪರಿ ಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಡಾ.ಕೃಷ್ಣ, ರವಿ ಕುಮಾರ್ ಗಣಿಗ, ನಟ ಸಚಿನ್, ಮಹಿಳಾಧ್ಯಕ್ಷೆ ಅಂಜನಾಶ್ರೀಕಾಂತ್, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.