Advertisement

Mandya; ಹನುಮಧ್ವಜ ತೆರವು: ಕೇಸರಿ ರಣಕಹಳೆ: ಪ್ರತಿಭಟನಕಾರರಿಂದ ಕಲ್ಲುತೂರಾಟ; ಲಾಠಿಚಾರ್ಜ್‌

12:54 AM Jan 30, 2024 | Team Udayavani |

ಮಂಡ್ಯ/ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಸೋಮವಾರ ಬಿಜೆಪಿ, ಜೆಡಿಎಸ್‌, ಬಜರಂಗದಳ, ವಿಶ್ವ ಹಿಂದೂ ಪರಿಷತ್‌ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ರಾಜ್ಯಾದ್ಯಂತ ರಣಕಹಳೆ ಮೊಳಗಿಸಿದ್ದಾರೆ.

Advertisement

ಹಲವೆಡೆ ಪ್ರತಿಭಟನೆ, ರಸ್ತೆ ತಡೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆರೆಗೋಡು ಗ್ರಾಮದ ಪ್ರತೀ ಮನೆಯಲ್ಲೂ ಹನುಮ ಧ್ವಜ ಹಾರಿಸುವ ಮುಖಾಂತರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಿಂದೂ ವಿರೋಧಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ. ಈ ಪ್ರಕರಣ ದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಪಕ್ಷ ಅಂತ್ಯ ಕಾಣಲಿದೆ ಎಂದು ಘೋಷಿಸುತ್ತ ಪ್ರತಿಭಟನನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆಯೇ ಕೆರಗೋಡು ಗ್ರಾಮದಲ್ಲಿ ಜಮಾಯಿ ಸಿದ ಪ್ರತಿಭಟನಕಾರರು ಜೈ ಶ್ರೀ ರಾಮ್‌, ಜೈ ಹನುಮಾನ್‌ ಘೋಷಣೆಯೊಂದಿಗೆ ಬೈಕ್‌ ರ್‍ಯಾಲಿ ಹಾಗೂ ಪಾದಯಾತ್ರೆ ಮೂಲಕ ಸುಮಾರು 12 ಕಿ.ಮೀ. ದೂರ ಕ್ರಮಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು. ಕೇಸರಿ ಶಾಲು ಹೊದ್ದ ಬಿಜೆಪಿ- ಜೆಡಿಎಸ್‌ ಪಕ್ಷದ ಮುಖಂಡರು ಕೂಡ ಪ್ರತಿಭಟನಕಾರರಿಗೆ ಸಾಥ್‌ ನೀಡಿದರು.

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಬಿಜೆಪಿ ನಾಯಕ ಸಿ.ಟಿ. ರವಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ಶಾಸಕ ಪ್ರೀತಮ್‌ ಗೌಡ ಸಹಿತ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾದರು.

ಮೈಸೂರು, ಕೊಪ್ಪಳ, ಹೊಸಪೇಟೆ, ಗದಗ, ಹಾವೇರಿ, ಬೆಳಗಾವಿ, ಧಾರವಾಡ, ಬಳ್ಳಾರಿ, ಮಂಗಳೂರು, ಉಡುಪಿ ಸಹಿತ ರಾಜ್ಯದ ಹಲವೆಡೆ ಗಳಲ್ಲೂ ಪ್ರತಿಭಟನೆ ನಡೆಸಲಾಗಿದೆ.

Advertisement

ಫ್ಲೆಕ್ಸ್‌ ಹರಿದು ಆಕ್ರೋಶ, ಲಾಠಿಚಾರ್ಜ್‌
ಮಂಡ್ಯದ ಹಲವೆಡೆ ಹಾಕಲಾಗಿದ್ದ ಶಾಸಕ ಪಿ. ರವಿಕುಮಾರ್‌ ಗೌಡ ಗಣಿಗ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎನ್‌. ಚಲುವರಾಯಸ್ವಾಮಿ ಭಾವಚಿತ್ರಗಳಿದ್ದ ಫ್ಲೆಕ್ಸ್‌ಗಳನ್ನು ಪ್ರತಿಭಟನಕಾರರು ಹರಿದು ಹಾಕಿ, ಬೆಂಕಿ ಹಚ್ಚಿದರು. ಪ್ರತಿಭಟನಕಾರರನ್ನು ಚದುರಿಸಲು ಕೆಲವೆಡೆ ಪೊಲೀಸರು ಲಾಠಿಪ್ರಹಾರ ನಡೆಸಿದರು.

ಕಲ್ಲೇಟಿನಿಂದ ವ್ಯಕ್ತಿಗೆ ಗಾಯ
ಪಾದಯಾತ್ರೆ ನಗರದ ನಂದ ವೃತ್ತಕ್ಕೆ ಬರುತ್ತಿದ್ದಂತೆ ಅಲ್ಲಿ ಅಳವಡಿಸಲಾಗಿದ್ದ ಶಾಸಕ ಪಿ. ರವಿಕುಮಾರ್‌ ಗೌಡ ಗಣಿಗ ಅವರ ಫ್ಲೆಕ್ಸ್‌ಗೆ ಪ್ರತಿಭಟನಕಾರನೊಬ್ಬ ಕಲ್ಲು ಎಸೆದನು. ಕಲ್ಲು ಆ ಫ್ಲೆಕ್ಸ್‌ಗೆ ತಾಗಿ ಮತ್ತೆ ವಾಪಸ್‌ ಬಂದು ಬೈಕ್‌ನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬನ ತಲೆಗೆ ಬಡಿಯಿತು. ಇದರಿಂದ ಆತ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಕಾರ್ಯಕರ್ತರು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದರು.

ನಾವು ಮನೆ ಮನೆಯಲ್ಲೂ ಹನುಮಧ್ವಜ ಹಾರಿಸು ತ್ತೇವೆ. ಸರಕಾರಕ್ಕೆ ತಾಕತ್ತು ಇದ್ದರೆ ತೆಗೆದು ನೋಡಲಿ. ನೀವು ಉಳಿಯುತ್ತೀರೋ ಹನುಮ ಭಕ್ತರು ಉಳಿಯು ತ್ತಾರೋ ನೋಡೋಣ.
-ಸಿ.ಟಿ. ರವಿ, ಮಾಜಿ ಸಚಿವ

ಧ್ವಜ ಸಂಬಂಧ ಗ್ರಾ.ಪಂ.ನಿಂದ ಪಡೆದಿರುವ ಅನುಮತಿ, ಮುಚ್ಚಳಿಕೆ ಪತ್ರ ಸುಳ್ಳಿನಿಂದ ಕೂಡಿದೆ. ಈ ಸುಳ್ಳು ದಾಖಲೆಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು.
– ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ಚುನಾವಣೆಗಾಗಿ ಪ್ರಚೋದನೆ: ಸಿಎಂ
ಬೆಂಗಳೂರು: ವಿಪಕ್ಷ ನಾಯಕ ಆರ್‌. ಅಶೋಕ್‌ ಹಾಗೂ ಜೆಡಿಎಸ್‌ ಮುಖಂಡ ಎಚ್‌.ಡಿ. ಕುಮಾರಸ್ವಾಮಿಯವರು ಮಂಡ್ಯಕ್ಕೆ ಭೇಟಿ ನೀಡಿ ಪ್ರಚೋದನೆ ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಈ ರೀತಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಜತೆಗೆ ನಾನೂ ಒಬ್ಬ ಹಿಂದೂ, ಎಲ್ಲ ಧರ್ಮಗಳ ಜನರನ್ನೂ ಪ್ರೀತಿಸುತ್ತೇನೆ. ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯತೀತ ಎಂದರೆ ಸಹಬಾಳ್ವೆ, ಸಹಿಷ್ಣುತೆ. ನಮಗೆ ಅದರಲ್ಲಿ ನಂಬಿಕೆ ಇದೆ ಎಂದು ಹೇಳಿದ್ದಾರೆ. ಬಿಜೆಪಿಯವರು ಅನಗತ್ಯವಾಗಿ ಸಮಸ್ಯೆ ಸೃಷ್ಟಿಸುತ್ತಿದ್ದಾರೆ. ಭಗವಾಧ್ವಜ ಹಾರಿಸಲು ನಮ್ಮ ವಿರೋಧವಿಲ್ಲ. ರಾಷ್ಟ್ರ ಧ್ವಜ ಹಾರಿಸಲು ಅವರು ಅನುಮತಿ ಪಡೆದಿದ್ದು, ಅದನ್ನೇ ಹಾರಿಸಬೇಕು. ಪಂಚಾಯತ್‌ನವರು ನೀಡಿದ್ದ ಅನುಮತಿಯಂತೆ ನಡೆದುಕೊಂಡಿದ್ದರೆ ಜಿಲ್ಲಾ ಡಳಿತ ಮಧ್ಯಪ್ರವೇಶ ಮಾಡುತ್ತಿರಲಿಲ್ಲ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next