ಮಂಡ್ಯ: ಹಳೇ ಮೈಸೂರು ಭಾಗದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸುವ ಟಾರ್ಗೆಟ್ ಮಾಡಿಕೊಂಡಿದ್ದ ಬಿಜೆಪಿ ನಾಯಕರ ದಂಡಯಾತ್ರೆಯಲ್ಲಿ ಸಿಕ್ಕ ಬೆಂಬಲ ಮತ ಗಳಾಗಿ ಪರಿವರ್ತನೆಯಾಗದೆ ಹೀನಾಯ ಸೋಲು ಕಾಣಬೇಕಾಯಿತು. ಹಳೇ ಮೈಸೂರು ಭಾಗದ ಮಂಡ್ಯವನ್ನೇ ಹೆಚ್ಚು ಗುರಿ ಯಾಗಿಸಿಕೊಳ್ಳ ಲಾಗಿತ್ತು. ಅದಕ್ಕಾಗಿ ಕೇಂದ್ರ ಸರ್ಕಾರದ ಪ್ರಧಾನಿ ಸೇರಿದಂತೆ ಸಚಿವರು, ರಾಜ್ಯದ ಮುಖ್ಯಮಂತ್ರಿ, ಸಚಿವರು ಜಿಲ್ಲೆಯಲ್ಲಿ ದಂಡಯಾತ್ರೆ ನಡೆಸಿದರು. ಆದರೆ, ಮತದಾರರ ಮಾತ್ರ ಸೊಪ್ಪು ಹಾಕದೆ ತಿರಸ್ಕರಿಸಿದ್ದಾನೆ.
ದಂಡಯಾತ್ರೆ ನಡೆಸಿದ ಕೇಸರಿ ಕಲಿಗಳು: ಜಿಲ್ಲೆಯಲ್ಲಿ ಮೂರ್‍ನಾಲ್ಕು ಸ್ಥಾನಗಳನ್ನು ಗೆಲ್ಲಬೇಕು ಎಂಬ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ನಾಯಕರು ಜಿಲ್ಲೆಯಲ್ಲಿ ದಂಡಯಾತ್ರೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಚಿವೆ ಸ್ಮತಿ ಇರಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ.ಅಶ್ವತ್ಥನಾರಾಯಣ್, ಆರ್. ಅಶೋಕ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರರು ಜಿಲ್ಲೆಯ ಏಳು ಕ್ಷೇತ್ರಗಳಿಗೂ ಒಬ್ಬೊಬ್ಬರಂತೆ ಪ್ರಚಾರ ನಡೆಸಿದ್ದರು.
ಪ್ರಧಾನಿಯಿಂದ ರೋಡ್ ಶೋ: ಬೆಂಗಳೂರು-ಮೈಸೂರು ಹೆದ್ದಾರಿ ಉದ್ಘಾಟನೆಗಾಗಿ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ನಗರದಲ್ಲಿ ಅದ್ಧೂರಿ ರೋಡ್ ಶೋ ನಡೆಸಿದರು. ರೋಡ್ ಶೋ ಮೂಲಕ ಒಕ್ಕಲಿಗ ಮತದಾರರ ಕೋಟೆಗೆ ಕೈಹಾಕುವ ಪ್ರಯತ್ನ ನಡೆಸಿದ್ದರು. ಅಂದು ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಅಲ್ಲದೆ, ಮದ್ದೂರಿನ ಗೆಜ್ಜಲಗೆರೆ ಬಳಿ ನಡೆದ ಸಮಾವೇಶದಲ್ಲೂ ಜನರು ಭಾಗವಹಿಸಿದ್ದರು. ಆದರೆ, ಅದು ಮತಗಳಾಗಿ ಪರಿವರ್ತನೆಯಾಗಲೇ ಇಲ್ಲ.
ಅಮುಲ್-ನಂದಿನಿ ವಿವಾದ ಸೃಷ್ಟಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮದ್ದೂರಿನ ಗೆಜ್ಜಲಗೆರೆ ಮನ್ ಮುಲ್‌ನಲ್ಲಿ ನಿರ್ಮಿಸಲಾಗಿರುವ ಮೆಗಾ ಡೇರಿ ಉದ್ಘಾಟಿಸಿದರು. ನಂತರ ನಗರದ ವಿವಿಯ ಆವರಣದಲ್ಲಿ ನಡೆದ ಬೃಹತ್ ಸಮಾವೇಶ ನಡೆಸಿ, ರಾಜಕೀಯ ರಣಕಹಳೆ ಮೊಳಗಿಸಿದರು. ಬಿಜೆಪಿ ಕಾರ್ಯಕರ್ತರಿಗೆ ಹುಮ್ಮಸ್ಸು ಹೆಚ್ಚಿಸಿದ್ದರು. ಆದರೆ, ಮೆಗಾಡೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುವಾಗ ಅಮುಲ್-ನಂದಿನಿ ವಿಲೀನದ ಬಗ್ಗೆ ಸುಳಿವು ನೀಡಿದ್ದು, ಜಿಲ್ಲೆಯ ಜನರು ಕೆರಳಿಸುವಂತೆ ಮಾಡಿತ್ತು. ಅಮಿತ್ ಶಾ ಹೋದ ನಂತರ ಅದರ ಕಿಡಿ ಜೋರಾಗಿಯೇ ಹೊತ್ತಿ ಉರಿಯಿತು. ಇದರಿಂದಲೂ ರಾಜಕೀಯ ರಣೋತ್ಸವ ಮೇಲೆ ಪರಿಣಾಮ ಬೀರಿತೇ ಎಂಬ ಚರ್ಚೆಗಳು ನಡೆಯುತ್ತಿವೆ.
ಉರಿಗೌಡ-ನಂಜೇಗೌಡ ಹೆಸರು ಬಳಕೆ: ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿದ್ದ ಬಿಜೆಪಿ ವಿವಾದಿತ ಉರಿಗೌಡ, ದೊಡ್ಡನಂಜೇಗೌಡ ಹೆಸರನ್ನು ಹೆಚ್ಚು ಬಳಕೆ ಮಾಡಿಕೊಂಡು ಮುನ್ನೆಲೆಗೆ ತಂದಿತು. ಟಿಪ್ಪು ಕೊಂದವರು ಮಳವಳ್ಳಿಯ ಒಕ್ಕಲಿಗ ಸಮುದಾಯದ ಉರಿಗೌಡ, ನಂಜೇಗೌಡ ಎಂದು ಹೆಸರನ್ನು ತೇಲಿ ಬಿಡಲಾಯಿತು. ಈ ವಿವಾದ ಜಿಲ್ಲೆಯಲ್ಲಿ ಒಕ್ಕಲಿಗರ ಆಕ್ರೋಶಕ್ಕೂ ಕಾರಣವಾಯಿತು. ಅಲ್ಲದೆ, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯೇ ಎಚ್ಚರಿಕೆ ಕೊಡುವಂತಾಯಿತು. ಇದು ಜಿಲ್ಲೆಯ ಇತಿಹಾಸಕಾರರ ಕೆಂಗೆಣ್ಣಿಗೆ ಗುರಿಯಾಗುವಂತೆ ಮಾಡಿತು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಬಂದಾಗ ಇಬ್ಬರ ಹೆಸರಿನಲ್ಲಿ ನಗರದ ಮೈಷುಗರ್ ವೃತ್ತದಲ್ಲಿ ಸ್ವಾಗತ ಬೋರ್ಡ್ ಹಾಕಲಾಗಿತ್ತು. ಇದರ ವಿರುದ್ಧ ಜಿಲ್ಲೆಯಲ್ಲಿ ಪ್ರಗತಿಪರ, ವಿವಿಧ ಸಂಘಟನೆಗಳು, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪಕ್ಷಾತೀತವಾಗಿ ವಿರೋಧಿಸಿದ್ದರಿಂದ ರಾತ್ರೋರಾತ್ರಿ ಸ್ವಾಗತ ಬೋರ್ಡ್ ಬದಲಾಯಿಸ ಲಾಗಿತ್ತು. ಇದು ಕೂಡ ಬಿಜೆಪಿ ಸೋಲಿಗೆ ಹಿನ್ನೆಡೆಯಾ ಗಿದೆ ಎಂಬ ಚರ್ಚೆಗಳು ಮುನ್ನಲೆಗೆ ಬಂದಿವೆ.
ಸ್ಥಳೀಯ ಮಟ್ಟದಲ್ಲಿ ಸಂಘಟನೆ ಇಲ್ಲ: ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗಿರುವ ಸ್ಥಳೀಯ ಮಟ್ಟದ ಪಕ್ಷ ಸಂಘಟನೆ ಬಿಜೆಪಿಗೆ ಇಲ್ಲದಿರುವುದು ಕೂಡ ಸೋಲಿಗೆ ಕಾರಣವಾಗಿದೆ. ಅಲ್ಲದೆ, ಬೆಲೆ ಏರಿಕೆ, ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ದರ ಏರಿಕೆ, ಟನ್ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡದಿರುವುದು ಗ್ರಾಮೀಣ ಮಟ್ಟದಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದೆ. ನಗರದಲ್ಲಿ ಸ್ವಲ್ಪ ಚೇತರಿಸಿಕೊಂಡಿದ್ದರೂ ನಿರೀಕ್ಷೆಯಂತೆ ಮತಗಳಿಸುವಲ್ಲಿ ವಿಫಲವಾಗಿದೆ.
ಅರಳಿದ ಕಮಲ ಪುಟಿದೇಳಲೇ ಇಲ್ಲ: ಕೆ.ಆರ್.ಪೇಟೆಯ ಉಪಚುನಾವಣೆಯಲ್ಲಿ ಖಾತೆ ತೆರೆದ ಬಿಜೆಪಿ ನಂತರ ನಡೆದ ಯಾವುದೇ ಚುನಾವಣೆಗಳಲ್ಲೂ ಪುಟಿದೇಳಲೇ ಇಲ್ಲ. ಉಪಚುನಾವಣೆ ನಂತರ ಸ್ಥಳೀಯ ಸಂಸ್ಥೆಗಳ ಹಾಗೂ ದಕ್ಷಿಣ ಪದವೀಧರ ಚುನಾವಣೆಗಳು ಎದುರಾದವು. ಅಲ್ಲಿಯೂ ಹೀನಾಯ ಸೋಲು ಅನುಭವಿಸಿತು. ನಂತರ ಇದೀಗ ವಿಧಾನ ಸಭೆಯಲ್ಲೂ ಹೀನಾಯ ಪ್ರದರ್ಶನದೊಂದಿಗೆ ಇದ್ದ ಒಂದು ಖಾತೆಯನ್ನು ಕಳೆದುಕೊಳ್ಳುವಂತಾಗಿದೆ.
ಮತಬ್ಯಾಂಕ್ ಹೆಚ್ಚಳ: ಕಳೆದ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಅಲ್ಲದೆ, ತಮ್ಮ ಮತ ಬ್ಯಾಂಕ್ ಹೆಚ್ಚಿಸಿಕೊಂಡಿದೆ. ಶ್ರೀರಂಗಪಟ್ಟಣ ದಲ್ಲಿ ತ್ರಿಕೋನ ಸ್ಪರ್ಧೆ ನೀಡಿದರೆ, ಮಂಡ್ಯ, ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳ ಪಡೆದರೆ, ಮದ್ದೂರು, ಮಳವಳ್ಳಿಯಲ್ಲಿ 25 ಸಾವಿರಕ್ಕೂ ಹೆಚ್ಚು ಮತ ಪಡೆಯುವ ಮೂಲಕ ಶೇಕಡವಾರು ಮತ ಗಳಿಸಿಕೊಂಡಿದೆ.