Advertisement
ಮಂಡ್ಯ: ಜಿಲ್ಲೆಯ ರಾಜಕಾರಣ ದಿಲ್ಲಿಯಲ್ಲೂ ಸದ್ದು ಮಾಡುತ್ತದೆ. ಮಂಡ್ಯ ಎಂದರೆ ಇಂಡಿಯಾ ಎಂಬಂತೆ ಬಿಂಬಿತವಾಗಿದೆ. ಕಾವೇರಿ ನದಿಯ ಸೊಬಗು, ಸಕ್ಕರೆ ನಾಡು, ಭತ್ತದ ಕಣಜ ಎಂದೂ ಕರೆಯುವ ಜಿಲ್ಲೆ. ಇಲ್ಲಿನ ರಾಜಕೀಯ, ಸಿನೆಮಾ, ರಂಗಭೂಮಿ, ಕಲೆ, ಸಾಹಿತ್ಯ, ಚಳವಳಿ, ಹೋರಾಟಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ನಾಯಕರು ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟಕ್ಕೂ ಕೊಂಡೊಯ್ದಿದ್ದಾರೆ.
Related Articles
Advertisement
ಮಂಡ್ಯಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರು ಗೆಲುವು ಸಾಧಿಸಿದ್ದಾರೆ. 1952ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರದಲ್ಲಿ ಇದುವರೆಗೂ 17 ವಿಧಾನಸಭಾ ಚುನಾವಣೆಗಳು ನಡೆದಿವೆ. ಮೊದಲ ಚುನಾವಣೆಯಲ್ಲಿ ಕೆ.ವಿ.ಶಂಕರಗೌಡರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 1954 ಉಪಚುನಾವಣೆ ಹಾಗೂ 1957ರಲ್ಲಿ ಜಿ.ಎಸ್.ಬೊಮ್ಮೇಗೌಡರು ಎರಡು ಬಾರಿ ಕಾಂಗ್ರೆಸ್‌ನಿಂದ ಜಯಭೇರಿ ಬಾರಿಸಿದ್ದರು. ಅನಂತರ 1962ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಜೆ.ದೇವಯ್ಯ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿದ್ದರು. 1983ರ ವರೆಗೂ ಕಾಂಗ್ರೆಸ್ ಗೆಲುವು ಸಾಧಿಸುತ್ತಾ ಬಂದಿತ್ತು. ಅನಂತರ 1985ರ ಚುನಾವಣೆಯಲ್ಲಿ ಕ್ಷೇತ್ರ ಜನತಾ ಪಕ್ಷದ ಹಿಡಿತಕ್ಕೆ ಸಿಕ್ಕಿತ್ತು. ಆಗ ಜನತಾಪಕ್ಷದಿಂದ ರೈತಸಂಘದ ಹೋರಾಟಗಾರ ಎಸ್.ಡಿ.ಜಯರಾಂ ಗೆಲುವು ಸಾಧಿಸಿದ್ದರು. ಅನಂತರ 1994ರಲ್ಲಿ ಮತ್ತೆ ಗೆಲುವು ಸಾಧಿಸಿ ಸಚಿವರಾಗಿದ್ದರು. ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಹಾಗೂ ಹಾಲಿ ಶಾಸಕ ಎಂ.ಶ್ರೀನಿವಾಸ್ ಮೂರು ಬಾರಿ ಶಾಸಕರಾಗಿದ್ದಾರೆ. 2013ರ ಚುನಾವಣೆಯಲ್ಲಿ ಅಂಬರೀಷ್ ಗೆಲುವು ಸಾಧಿಸಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನದ್ದೇ ಪ್ರಾಬಲ್ಯವಾಗಿದೆ. ಇಲ್ಲಿ ಬಿಜೆಪಿ ಒಂದು ಬಾರಿಯೂ ಖಾತೆ ತೆರೆದಿಲ್ಲ. ಆದರೆ ಈ ಬಾರಿ 2023ರ ಚುನಾವಣೆಯಲ್ಲಿ ಮೂರು ಪಕ್ಷಗಳು ಕೇಂದ್ರ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಪ್ರತಿಷ್ಠೆಯಾಗಿದೆ. ಮಳವಳ್ಳಿ
ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿರುವ ಮಳವಳ್ಳಿ ವಿಧಾನಸಭಾ ಕ್ಷೇತ್ರ ಮೊದಲು ಎರಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ಹೊಂದಿತ್ತು. 1962ರಲ್ಲಿ ಕಿರುಗಾವಲು ಪ್ರತ್ಯೇಕ ಸಾಮಾನ್ಯ ಕ್ಷೇತ್ರವಾದರೆ, ಮಳವಳ್ಳಿ ಮೀಸಲು ಕ್ಷೇತ್ರವಾಗಿತ್ತು. 1952ರ ಮೊದಲ ಚುನಾವಣೆಯಲ್ಲಿ ಕಿರುಗಾವಲು ಕ್ಷೇತ್ರದಿಂದ ಕಿಸಾನ್ ಮಜ್ದೂರ್ ಪಕ್ಷದಿಂದ ಬಿ.ಪಿ.ನಾಗರಾಜಮೂರ್ತಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಇನ್ನೂ ಮಳವಳ್ಳಿ ಮೀಸಲು ಕ್ಷೇತ್ರದಿಂದ ಶೆಡ್ನೂಲ್ ಕಾಸ್ಟ್ ಫೆಡರೇಶನ್‌ನಿಂದ ಸ್ಪರ್ಧಿಸಿದ್ದ ಎನ್.ಚಿಕ್ಕಲಿಂಗಯ್ಯ ವಿಧಾನಸಭೆ ಪ್ರವೇಶಿಸಿದ್ದರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾಗಿ ಮಳವಳ್ಳಿ ಮೀಸಲು ಕ್ಷೇತ್ರವಾಗಿತ್ತು. ಕಿರುಗಾವಲು ಕ್ಷೇತ್ರದಲ್ಲಿ 6 ಬಾರಿ ಜಿ.ಮಾದೇಗೌಡರು ಶಾಸಕರಾದರೆ, ಒಂದು ಬಾರಿ ಕೆ.ಎನ್.ನಾಗೇಗೌಡ, ಡಿ.ಸಿ.ತಮ್ಮಣ್ಣ ಶಾಸಕರಾಗಿದ್ದಾರೆ. 1978ರ ಮೊದಲ ಬಾರಿಗೆ ಜನತಾ ಪಕ್ಷದ ಅಭ್ಯರ್ಥಿ ಮರಿಸ್ವಾಮಿ ಗೆಲುವು ಸಾಧಿಸಿದ್ದರು. 1957ರಿಂದ 1972ರ ವರೆಗೆ ಎಂ.ಮಲ್ಲಿಕಾರ್ಜುನಸ್ವಾಮಿ ನಾಲ್ಕು ಬಾರಿ ಗೆಲುವು ಸಾಸಿದರೆ, ಬಿ.ಸೋಮಶೇಖರ್ ಜನತಾ ಪಕ್ಷ ಹಾಗೂ ಜೆಡಿಯುನಿಂದ ನಾಲ್ಕು ಬಾರಿ ಗೆಲುವು ಸಾಧಿಸಿ ಸಚಿವರಾಗಿದ್ದರು. ಅನಂತರ ಹಾಲಿ ಶಾಸಕ ಎರಡು ಬಾರಿ, ಮಾಜಿ ಸಚಿವ ನರೇಂದ್ರಸ್ವಾಮಿ ಎರಡು ಬಾರಿ ಶಾಸಕರಾಗಿ, ಸಚಿವರಾಗಿದ್ದಾರೆ. ಈ ಕ್ಷೇತ್ರದಲ್ಲೂ ಸಹ ಬಿಜೆಪಿ ಒಂದು ಬಾರಿಯೂ ಗೆದ್ದಿಲ್ಲ. ಇಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆಯೇ ಪೈಪೋಟಿ ಎದುರಾಗಿದ್ದು, ಬಿಜೆಪಿ ಸ್ಪರ್ಧೆ ಅನಿವಾರ್ಯವಾಗಿದೆ. ಶ್ರೀರಂಗಪಟ್ಟಣ
ಕೋಟೆ ನಾಡು, ಶ್ರೀರಂಗನ ನೆಲೆ ಬೀಡಿನಲ್ಲಿ 16 ಬಾರಿ ಚುನಾವಣೆಗಳು ನಡೆದಿವೆ. ಅದರಲ್ಲಿ ಒಂದು ಬಾರಿ ಅಂದರೆ 1967ರಲ್ಲಿ ಮಂಡ್ಯ ತಾಲೂಕಿನ ಯತ್ತಗದಹಳ್ಳಿಯ ಬಿ.ದೊಡ್ಡಬೋರೇಗೌಡರು ಗೆದ್ದಿದ್ದು ಬಿಟ್ಟರೆ ಉಳಿದ 15 ಚುನಾವಣೆಗಳಲ್ಲೂ ಶ್ರೀರಂಗಪಟ್ಟಣದ ಅರಕೆರೆ ಗ್ರಾಮದವರೇ ಕ್ಷೇತ್ರ ಆಳಿದ್ದಾರೆ. ಅರಕೆರೆ ಗ್ರಾಮದ 7 ಮಂದಿ ಶಾಸಕರಾಗಿದ್ದಾರೆ. ಬಂಡಿಸಿದ್ದೇಗೌಡ ಕುಟುಂಬದವರು 32 ವರ್ಷಗಳ ಕಾಲ ಶಾಸಕರಾಗಿದ್ದರೆ, ಶ್ರೀಕಂಠಯ್ಯ ಅವರ ಕುಟುಂಬದವರು 10 ವರ್ಷ ಶಾಸಕರಾಗಿದ್ದರು. 1952ರ ಮೊದಲ ಚುನಾವಣೆಯಲ್ಲಿ ವಕೀಲ ಕೆ.ಪುಟ್ಟಸ್ವಾಮಿ ಕಾಂಗ್ರೆಸ್‌ನಿಂದ ಸ್ಪಧಿìಸಿ ಗೆಲುವು ಸಾಧಿಸಿದ್ದರು. ವಕೀಲ ಎಂ.ಶ್ರೀನಿವಾಸ್ 1978ರಲ್ಲಿ ಜನತಾ ಪಕ್ಷದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಎ.ಎಸ್.ಬಂಡಿಸಿದ್ದೇಗೌಡ ಎರಡು ಬಾರಿ, ಪತ್ನಿ ವಿಜಯಲಕ್ಷಿ¾à ಬಂಡಿಸಿದ್ದೇಗೌಡ ಎರಡು ಬಾರಿ, ರಮೇಶ್‌ಬಾಬು ಬಂಡಿಸಿದ್ದೇಗೌಡ ಎರಡು ಬಾರಿ ಹಾಗೂ ದಮಯಂತಿ ಬೋರೇಗೌಡ ಕೂಡ ಎರಡು ಬಾರಿ ಗೆಲುವು ಸಾಧಿಸಿದ್ದಾರೆ. 2018ರ ಚುನಾವಣೆಯಲ್ಲಿ ರಮೇಶ್‌ಬಾಬು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರೆ, ಕಾಂಗ್ರೆಸ್ ತೊರೆದ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಸೇರ್ಪಡೆಗೊಂಡು ಗೆಲುವು ಸಾಧಿಸಿದ್ದರು. ರೈತಸಂಘದಿಂದ 6 ಬಾರಿ ಹಾಗೂ ಬಿಜೆಪಿಯಿಂದ 1 ಬಾರಿ ಸ್ಪರ್ಧಿಸಿದ್ದ ಕೆ.ಎಸ್.ನಂಜುಂಡೇಗೌಡರು ಸತತ 7 ಬಾರಿಯೂ ಸೋಲು ಅನುಭವಿಸಿದ್ದಾರೆ. ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬಂದ ನಟ ಅಂಬರೀಷ್ ಕೂಡ 2008ರ ಚುನಾವಣೆಯಲ್ಲಿ ಸೋತಿದ್ದರು. ಮದ್ದೂರು
ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿಸಿದ ಮದ್ದೂರು ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮುಖ್ಯಮಂತ್ರಿ ನೀಡಿದ ಕ್ಷೇತ್ರವಾಗಿದೆ. ಎಸ್.ಎಂ.ಕೃಷ್ಣ ಅವರು ಮೂರು ಬಾರಿ ಈ ಕ್ಷೇತ್ರದಿಂದ ಸ್ಪರ್ಧಿಸಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಾತಂತ್ರÂ ಹೋರಾಟಗಾರ ಎಚ್.ಕೆ.ವೀರಣ್ಣಗೌಡ ಪಕ್ಷೇತರರಾಗಿ ಗೆಲುವು ಸಾಧಿಸಿದ್ದರು. ಅನಂತರ 1957ರಲ್ಲೂ ಎರಡನೇ ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಬಳಿಕ 1962ರಲ್ಲಿ ಎಸ್.ಎಂ.ಕೃಷ್ಣ ಪಿಎಸ್‌ಪಿಯಿಂದ ಸ್ಪರ್ಧಿಸಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದರಿಂದ ಸಿಎಂ ರೇಸ್‌ನಲ್ಲಿದ್ದ ಎಚ್.ಕೆ.ವೀರಣ್ಣಗೌಡರ ಹ್ಯಾಟ್ರಿಕ್ ಕನಸು ಭಗ್ನವಾಗಿತ್ತು. ಅನಂತರ 1978ರ ಚುನಾವಣೆಯಲ್ಲಿ ಕಾಂಗ್ರೆಸ್ ವಿಭಜನೆ ಲಾಭ ಪಡೆದ ಜನತಾ ಪಕ್ಷದ ಎಂ.ಮಂಚೇಗೌಡರು ಮೊದಲ ಬಾರಿ ಗೆಲ್ಲುವ ಮೂಲಕ ಖಾತೆ ತೆರೆದಿದ್ದರು. ಆದರೆ ಬಿಜೆಪಿ ಇದುವರೆಗೂ ಒಂದು ಬಾರಿಯೂ ಗೆದ್ದಿಲ್ಲ. ಎಂ.ಮಂಚೇಗೌಡ ಮೂರು ಬಾರಿ ಗೆದ್ದರೆ, ಡಿ.ಸಿ.ತಮ್ಮಣ್ಣ ಮೂರು ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ. ಇದಕ್ಕೂ ಮೊದಲು 1999ರಲ್ಲಿ ಡಿ.ಸಿ.ತಮ್ಮಣ್ಣ ಕಿರುಗಾವಲು ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಈಗ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಕಾಂಗ್ರೆಸ್‌ನಿಂದ ಡಿ.ಕೆ.ಶಿವಕುಮಾರ್ ಕರೆತರಲು ಮುಂದಾಗಿದ್ದರೆ, ಬಿಜೆಪಿ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಮೇಲುಕೋಟೆ
ಪಾಂಡವರ ನಾಡು, ಚೆಲುವನ ಬೀಡು ಎಂದು ಹೆಸರಾಗಿರುವ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಇಲ್ಲಿ ಒಂದೂ ಉಪಚುನಾವಣೆ ನಡೆಯದಿರುವುದು ವಿಶೇಷ. 15 ಚುನಾವಣೆಗಳು ನಡೆದಿದ್ದು, ಇಲ್ಲಿ ಗೆದ್ದವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ 2018ರಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸಿದ ಸಿ.ಎಸ್.ಪುಟ್ಟರಾಜು ಸಣ್ಣ ನೀರಾವರಿ ಸಚಿವರಾಗುವ ಮೂಲಕ ಮೊದಲ ಸಚಿವ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಮೊದಲು ಪಾಂಡವಪುರ ಕ್ಷೇತ್ರ ಎಂದೇ ಕರೆಯಲಾಗುತ್ತಿತ್ತು. ಅದರಂತೆ 1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿ.ವೈ.ನೀಲೇಗೌಡರು ಗೆಲುವು ಸಾಧಿಸಿ ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು. 1978ರಲ್ಲಿ ಜನತಾ ಪಕ್ಷದಿಂದ ರಾಜಗೋಪಾಲ್ ಗೆಲುವು ಸಾಧಿಸಿದ್ದರು. 1994ರ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘದಿಂದ ಕೆ.ಎಸ್.ಪುಟ್ಟಣ್ಣಯ್ಯ ಗೆಲುವು ಸಾಧಿಸಿದ್ದರು. 2004ರ ಚುನಾವಣೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 2008ರಲ್ಲಿ ಪಾಂಡವಪುರ ವಿಧಾನಸಭಾ ಕ್ಷೇತ್ರ ಮೇಲುಕೋಟೆ ವಿಧಾನಸಭಾ ಕ್ಷೇತ್ರ ಎಂಬ ನಾಮಕರಣಗೊಳ್ಳುತ್ತದೆ. ಮೊದಲು ಕಾಂಗ್ರೆಸ್ ಹಿಡಿತದಲ್ಲಿ ಕ್ಷೇತ್ರ ಅನಂತರ ಜೆಡಿಎಸ್ ಪ್ರಾಬಲ್ಯ ಸಾಧಿಸುತ್ತಿದೆ. ಪ್ರಸ್ತುತ ಜೆಡಿಎಸ್ ಹಾಗೂ ರೈತಸಂಘದ್ದೆ ಪಾರುಪತ್ಯವಾಗಿದೆ. ಕಾಂಗ್ರೆಸ್ ಮತ್ತೆ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿದ್ದರೆ, ಬಿಜೆಪಿ ಖಾತೆ ತೆರೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ನಾಗಮಂಗಲ
ಭೈರವನ ನಾಡಾಗಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ ರಾಜಕೀಯವೇ ವಿಭಿನ್ನವಾಗಿದೆ. ಈ ಕ್ಷೇತ್ರ ಪ್ರತಿಷ್ಠೆ ರಾಜಕಾರಣಕ್ಕೆ ಹೆಸರಾಗಿದೆ. ಇಡೀ ಜಿಲ್ಲೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರವಾಗಿದ್ದರೂ ಹಿಂದುಳಿದ ವರ್ಗದವರು ಶಾಸಕರಾಗಿ ಆಯ್ಕೆಯಾಗಿರುವುದು ವಿಶೇಷ. ಅಲ್ಲದೆ ಇಲ್ಲಿ ಪಕ್ಷೇತರರೇ ಹೆಚ್ಚು ಗೆಲುವು ಸಾಧಿಸಿದ್ದಾರೆ. ಮೂರು ಉಪಚುನಾವಣೆಗಳು ನಡೆದಿವೆ. 1952ರ ಮೊದಲ ಚುನಾವಣೆಯಲ್ಲಿಯೇ ಪಕ್ಷೇತರ ಅಭ್ಯರ್ಥಿ ಮೈಲಾರಪಟ್ಟಣದ ಶಂಕರಲಿಂಗೇಗೌಡ ಗೆದ್ದು ವಿಧಾನಸಭೆ ಪ್ರವೇಶ ಮಾಡಿದ್ದರು. ಒಂದೇ ವರ್ಷದಲ್ಲಿ ಉಪಚುನಾವಣೆ ಎದುರಾಗಿತ್ತು. ಶಂಕರಲಿಂಗೇಗೌಡರ ನಿಧನದಿಂದ 1953ರಲ್ಲಿ ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್‌ನ ಕೆ.ಸಿಂಗಾರಿಗೌಡ ಗೆಲುವು ಸಾಧಿಸುತ್ತಾರೆ. 1973ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಟಿ.ಕೃಷ್ಣಪ್ಪ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಅನಂತರ 1978ರ ಚುನಾವಣೆಯಲ್ಲೂ ಗೆದ್ದು ರೇಷ್ಮೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. 1989, 1994ರಲ್ಲಿ ಎಲ್.ಆರ್.ಶಿವರಾಮೇಗೌಡ ಎರಡು ಬಾರಿ ಪಕ್ಷೇತರರಾಗಿ ಗೆದ್ದು ಶಾಸಕರಾಗಿದ್ದರು. 1999ರ ಚುನಾವಣೆಯಲ್ಲಿ ಚೀಣ್ಯ ಜಿ.ಪಂ. ಸದಸ್ಯರಾಗಿದ್ದ ಎನ್.ಚಲುವರಾಯಸ್ವಾಮಿ ಜನತಾದಳದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಮೊದಲ ಬಾರಿಗೆ ಶಾಸಕರಾಗುತ್ತಾರೆ. 2004ರಲ್ಲಿ ಮತ್ತೂಮ್ಮೆ ಗೆದ್ದು ಸಾರಿಗೆ ಸಚಿವರಾಗುತ್ತಾರೆ. 2013ರಲ್ಲೂ ಗೆದ್ದು ಬೀಗುವ ಚಲುವರಾಯಸ್ವಾಮಿ, ಅನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಇತ್ತ 2008ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಕೆ.ಸುರೇಶ್‌ಗೌಡ ಎರಡನೇ ಬಾರಿಗೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದರೂ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್‌ನದ್ದೇ ಆರ್ಭಟವಾಗಿದೆ. ಕೆ.ಆರ್.ಪೇಟೆ
ಹೇಮಾವತಿ ನದಿ ಹರಿಯುವ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳುವ ಮೂಲಕ ಇತಿಹಾಸ ಬರೆದಿದೆ. ಸಚಿವ ಕೆ.ಸಿ.ನಾರಾಯಣಗೌಡ ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಸಚಿವರಾಗಿದ್ದಾರೆ. ಅಲ್ಲದೆ ಹಿರಿಯ ಗಾಂಧೀವಾದಿಯಾಗಿದ್ದ ಕೆ.ಆರ್.ಪೇಟೆ ಕೃಷ್ಣ ಅವರು ವಿಧಾನಸಭಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. 1952ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಸ್.ಎಂ.ಲಿಂಗಪ್ಪ ಅವರು ಮೊದಲ ಶಾಸಕರಾಗಿ ಆಯ್ಕೆಯಾಗಿದ್ದರು. ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪಕ್ಷೇತರರಾಗಿ ನಂಜೇಗೌಡ, ಎಂ.ಕೆ.ಬೊಮ್ಮೇಗೌಡ, ಬಿ.ಪ್ರಕಾಶ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1985ರಲ್ಲಿ ಕೆ.ಆರ್.ಪೇಟೆ ಕೃಷ್ಣ ಅವರು ಜನತಾ ಪಕ್ಷದಿಂದ ಮೊದಲ ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1999ರ ಚುನಾವಣೆಯಲ್ಲಿ ಕೆ.ಬಿ.ಚಂದ್ರಶೇಖರ್ ಕಾಂಗ್ರೆಸ್‌ನಿಂದ ಗೆಲುವು ಸಾಧಿಸಿದ್ದರು. ಇಲ್ಲಿ ಅತೀ ಹೆಚ್ಚು ಬಾರಿ ಕಾಂಗ್ರೆಸ್ ಗೆದ್ದಿದೆ. ಸಚಿವ ಕೆ.ಸಿ.ನಾರಾಯಣ ಗೌಡ 2008ರ ಚುನಾವಣೆಯಲ್ಲಿ ಬಿಎಸ್ಪಿಯಿಂದ ಸ್ಪರ್ಧಿಸಿ ಪರಾಭವಗೊಂಡು ಅನಂತರ 2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಗೆದ್ದು ಮೊದಲ ಬಾರಿಗೆ ಶಾಸಕರಾಗಿದ್ದರು. ಅನಂತರ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಮತ್ತೆ ಗೆದ್ದು, ಅನಂತರ ಆಪರೇಶನ್ ಕಮಲಕ್ಕೆ ಒಳಗಾಗಿ 2020ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಮೂರನೇ ಬಾರಿ ಗೆಲುವು ಸಾಧಿಸಿ ಸಚಿವರಾಗಿದ್ದಾರೆ. ಪ್ರಸ್ತುತ ಇಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. -ಎಚ್.ಶಿವರಾಜು