ಮಂಡ್ಯ: ರಾಜ್ಯ ಸರಕಾರ ಹಿಜಾಬ್ ನಿಷೇಧ ವನ್ನು ಹಿಂಪಡೆಯಲು ನಿರ್ಧರಿಸಿರುವುದು ಸ್ವಾಗತಾರ್ಹ. ಇನ್ನು ಮುಂದೆ ನಾನು ಕಾಲೇಜಿಗೆ ಹೋಗುತ್ತೇನೆ ಎಂದು ಹಿಜಾಬ್ ಲೇಡಿ ಎಂದೇ ಖ್ಯಾತಿ ಪಡೆದಿದ್ದ ಬಿ.ಬಿ.ಮುಷ್ಕಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲು ಚಿಂತಿಸುತ್ತಿರುವುದು ಸ್ವಾಗತಾರ್ಹ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಜಮೀರ್ ಅಹಮದ್‌ಖಾನ್, ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ಹಿಜಾಬ್ ಘಟನೆ ನಡೆದ ದಿನದಿಂದ ನಾನು ಒಂದು ವರ್ಷದಿಂದ ಕಾಲೇಜಿಗೆ ಹೋಗಿಲ್ಲ. ಈಗ ನಾನು ಪಿಇಎಸ್ ಕಾಲೇಜಿಗೆ ಹೋಗುತ್ತೇನೆ. ಎಲ್ಲರೂ ಈಗ ಬಂದು ಪರೀಕ್ಷೆ ಬರೆಯಬಹುದು. ಶಿಕ್ಷಣದ ವಿಚಾರದಲ್ಲಿ ರಾಜಕೀಯ ಬೇಡ. ಅಣ್ಣ-ತಮ್ಮಂದಿರಂತೆ ಇರಬೇಕು. ನಾವು ಮೊದಲಿನಿಂದಲೂ ಹಿಜಾಬ್ ಧರಿಸುತ್ತಿದ್ದೆವು. ಎಲ್ಲ ಧರ್ಮವೂ ಒಂದೇ, ಮುಂದೆ ಎಲ್ಲರೂ ಮನುಷ್ಯರ ರೀತಿ ಬದುಕು ಸಾಗಿಸಬೇಕು. ಧರ್ಮ, ಧರ್ಮಗಳ ನಡುವೆ ಸಂಘರ್ಷ ಬೇಡ ಎಂದರು.
ಹಿಜಾಬ್ ಪ್ರತಿಭಟನೆ ಸಂದರ್ಭ ತನ್ನ ಸುತ್ತ ನೆರೆದು ಕೆಲವರು ಜೈಶ್ರೀರಾಂ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ, ಅಲ್ಲಾಹು ಅಕºರ್ ಎಂದು ಕೂಗಿ ಮುಷ್ಕಾನ್ ಗಮನ ಸೆಳೆದಿದ್ದರು.