ಮಂಡ್ಯ: ಲೌಖೀಕವಾದ ಯಾವ ವಿಷಯಗಳೂ ಮನುಷ್ಯನಿಗೆ ಶಾಶ್ವತ ಸುಖವನ್ನು ನೀಡುವುದಿಲ್ಲ. ಆಧ್ಯಾತ್ಮದ ವಿಷಯಗಳು ಮಾತ್ರ ಮನುಷ್ಯನ ಬದುಕನ್ನು ಸುಂದರಗೊಳಿಸಲು ಸಾಧ್ಯ ಎಂದು ಎಂದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯದ ದ್ವಾದಶಾಬ್ದ ಮಹಾಕುಂಭಾಭಿಷೇಕ ಮಹೋತ್ಸವದ ಮೂರನೇ ದಿನದ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಭಗವಂತನಿಗೆ ಅಭಿಮುಖವಾಗಿ ನಡೆದರೆ ಆತನ ಎಲ್ಲಾ ಇಷ್ಟಾರ್ಥಗಳೂ ಈಡೇರುತ್ತವೆ. ಇಂದು ಕಾಲ ಕೆಟ್ಟಿದೆ ಎನ್ನುತ್ತಾರೆ. ಆದರೆ ಕಾಲ ಕೆಟ್ಟಿಲ್ಲ, ಕಾಲ ಕೆಟ್ಟಿದೆ ಎನ್ನುವವರು ಕೆಟ್ಟಿರುತ್ತಾರೆ. ಅವರು ತಾನು ಕೆಟ್ಟಿದ್ದೇನೆ ಎಂದು ಹೇಳಿಕೊಳ್ಳಲಾಗದೆ ಕಾಲ ಕೆಟ್ಟಿದೆ ಎನ್ನುತ್ತಾರೆ. ಆದ್ದರಿಂದ ಮನುಷ್ಯ ಒಳ್ಳೆಯವನಾದರೆ ಕಾಲವೂ ಒಳ್ಳೆಯದಾಗುತ್ತದೆ. ಮಾತೃ ವಾತ್ಸಲ್ಯದ ಮುದ್ರೆಯನ್ನು ಜನಸಾಮಾನ್ಯರಲ್ಲಿ ಒತ್ತಿರುವ ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಇಡೀ ಮಾನವ ಜನಾಂಗದ ಒಳಿತಿಗಾಗಿ ಶ್ರಮಿಸಿ ಹೋಗಿದ್ದಾರೆಂದು ತಿಳಿಸಿದರು.
ಕ್ಷೇತ್ರದ ಉದ್ಧಾರಕ್ಕೆ ಅವತರಿಸಿದ ಮಹಾಪುರುಷ: ಬೀದರ್‌ನ ಚಿದಂಬರಾಶ್ರಮದ ಶಿವಕುಮಾರಸ್ವಾಮೀಜಿ ಮಾತನಾಡಿ, ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ಆದಿಚುಂಚನಗಿರಿ ಕ್ಷೇತ್ರವನ್ನು ಶೂನ್ಯದಿಂದ ಆಕಾಶ ೆತ್ತರಕ್ಕೆ ಬೆಳೆಸಿದ್ದಾರೆ. ಅವರು ಕ್ಷೇತ್ರದ ಉದ್ಧಾರಕ್ಕೆ ಅವತರಿಸಿದ ಮಹಾಪುರುಷ ಎಂದು ಬಣ್ಣಿಸಿದ ಶ್ರೀಗಳು, ಗುರು ಆದವನು ಸಾಮಾನ್ಯರ ಬದುಕಿಗೆ ದಾರಿದೀಪವಾಗಿ ಬೆಳಗಬೇಕು. ಆ ಬೆಳಕಿನಲ್ಲಿ ಮನುಷ್ಯ ಮಾನವತೆಯ ಮಾರ್ಗದಲ್ಲಿ ನಡೆಯಬೇಕು. ಮನೆ ಕಟ್ಟಬಹುದು, ಕಸ ಗುಡಿಸುವವರು ಸಿಗುವುದಿಲ್ಲ, ವಾಹನ ತೆಗೆದು ಕೊಳ್ಳಬಹುದು, ಒಳ್ಳೆಯ ಚಾಲಕ ಸಿಗುವುದಿಲ್ಲ. ಮಠವನ್ನು ಕಟ್ಟಬಹುದು. ಆದರೆ, ಒಳ್ಳೆಯ ಸ್ವಾಮೀಜಿ ಸಿಗುವುದಿಲ್ಲ. ಆದರೆ, ಬಾಲಗಂಗಾಧರನಾಥರು ಬೆಳೆಸಿರುವುದು ಅತ್ಯಂತ ವಿಶೇಷವಾದದ್ದು. ಇಂದಿನ ದಿನಮಾನದಲ್ಲಿ ಮನುಷ್ಯನಿಗೆ ಜ್ಞಾನವನ್ನು ಕರುಣಿಸುವುದಕ್ಕಾಗಿ ಗುರು ಬೇಕೇಬೇಕು. ಗುರುವಿನ ಕೃಪೆ ಆದರೆ ಮಾತ್ರ ಮನುಷ್ಯನಿಗೆ ಒಳಿತುಂಟಾಗಲು ಸಾಧ್ಯ ಎಂದು ಹೇಳಿದರು.