ಸುಳ್ಯ : ಮಂಡೆಕೋಲು-ಸುಳ್ಯ ಅಂತಾರಾಜ್ಯ ರಸ್ತೆ ತೀರಾ ಹದಗೆಟ್ಟಿದ್ದು, ಹಲವು ಬಾರಿ ಪ್ರತಿಭಟನೆ ಮಾಡಿ ಎಚ್ಚರಿಸಿದರೂ, ಇನ್ನೂ ದುರಸ್ತಿಗೊಳಿಸದಿರುವ ಕ್ರಮವನ್ನು ಎಸ್‌ಕೆಎಸ್‌ಎಸ್‌ಎಫ್ ಅಜ್ಜಾವರ ಕ್ಲಸ್ಟರ್ ಸಮಿತಿ ಖಂಡಿಸುತ್ತದೆ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಸ್‌ಕೆಎಸ್‌ಎಸ್‌ಎಫ್ ಸುಳ್ಯ ವಲಯ ಅಧ್ಯಕ್ಷ ಶಾಫಿ ದಾರಿಮಿ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಜ್ಯ ರಸ್ತೆಯ ಅಭಿವೃದ್ಧಿಗೆ ಆಗ್ರಹಿಸಿ 2015 ಅಕ್ಟೋಬರ್‌ನಲ್ಲಿ ಬೃಹತ್ ಪಾದಯಾತ್ರೆ ಮೂಲಕ ಎಚ್ಚರಿಸಿದರೂ ಜನಪ್ರತಿನಿಧಿಗಳು ಗಮನ ಹರಿಸಿಲ್ಲ.
ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರೂ ಊರು ಮಂಡೆಕೋಲು ಮೂಲಕ ಹಾದು ಹೋಗುವ ರಸ್ತೆ ಬಗ್ಗೆ ನಿರ್ಲಕ್ಷ ತಾಳಿದ್ದಾರೆ. ಸಂಸದರು, ಶಾಸಕರು ಗಮನಹರಿಸಿಲ್ಲ ಎಂದು ಆರೋಪಿಸಿದರು.
ಹಲವು ಪ್ರಸಿದ್ಧ ದೇವಾಲಯಗಳಿಗೆ, ಮಸೀದಿಗಳಿಗೆ, ಶಿಕ್ಷಣಕ್ಕಾಗಿ ಸುಳ್ಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ಅನುಕೂಲವಾದ ಈ ರಸ್ತೆ ಕಳೆದ 18 ವರ್ಷಗಳಿಂದ ಅಭಿವೃದ್ಧಿಯಾಗದೆ ಬಾಕಿಯಾಗಿದೆ. ಈ ರಸ್ತೆಯಲ್ಲಿ ಓಡಾಡುವವರೆಲ್ಲ ತೀರಾ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ರಸ್ತೆಯ ಅಗಲವೂ ಕಿರಿದಾಗಿದ್ದು, ಇನ್ನೊಂದು ವಾಹನಕ್ಕೆ ಅವಕಾಶ ಮಾಡಿಕೊಡಲು ರಸ್ತೆ ಅಂಚಿಗೆ ಬಂದರೆ ಅದು ತೀರಾ ಕೊರಕಲಾಗಿದೆ. ನಿತ್ಯ ಪ್ರಾಣಾಪಾಯದ ಭಯದಿಂದಲೇ ಪ್ರಯಾಣಿಸಬೇಕಾಗುತ್ತದೆ.
ಕೋಲ್ಚಾರು, ಪೈಂಬೆಚ್ಚಾಲು, ಅಜ್ಜಾವರ ರಸ್ತೆ ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿರುವ ನಾಗರಿಕ ಹಿತರಕ್ಷಣಾ ವೇದಿಕೆಯವರು ನಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇತ್ತ ಕಾಂತಮಂಗಲ ಸೇತುವೆಯೂ ಶಿಥಿಲಗೊಂಡಿದ್ದು, ಮಳೆ ಬಂದಾಗ ಈಜುಕೊಳವಾಗುತ್ತಿದೆ ಎಂದರು.
ರಸ್ತೆ ಅಭಿವೃದ್ಧಿ ಬಗ್ಗೆ ಜನಜಾಗೃತಿಗಾಗಿ ಅರಿವು ಮೂಡಿಸುವ ಆಂದೋಲನ ನಡೆಸುತ್ತೇವೆ. ಅದು ಮುಗಿಯುವಷ್ಟರೊಳಗೆ ರಸ್ತೆ ದುರಸ್ತಿ ಆರಂಭವಾಗದಿದ್ದರೆ ಅಜ್ಜಾವರ-ಮಂಡೆಕೋಲು ಗ್ರಾಮದ ಸರ್ವಧರ್ಮದ ಸಂಘಟನೆಗಳ ಇತರ ಸಾಮಾಜಿಕ, ಶೈಕ್ಷಣಿಕ, ಸ್ವಸಹಾಯ ಸಂಘ ಸಂಸ್ಥೆಗಳನ್ನೆಲ್ಲ ಸೇರಿಸಿ ಬೃಹತ್ ಹೋರಾಟ ಸಮಿತಿ ರಚಿಸಲಿದ್ದೇವೆ. ಈ ಆಂದೋಲನಕ್ಕೆ ಎಸ್‌ಕೆಎಸ್‌ಎಸ್‌ಎಫ್ ಅಡ್ಕ-ಇರುವಂಬಳ್ಳ ಶಾಖೆ, ಮಂಡೆಕೋಲು, ಅಜ್ಜಾವರ, ಪೈಂಬೆಚ್ಚಾಲು ಶಾಖೆಗಳು ಸಹಕಾರ ನೀಡಲಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಮುಂದೆ ಉಗ್ರ ಹೋರಾಟ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸಿದ್ದಿಕ್‌ಅಡ್ಕ, ಸಿದ್ದೀಕ್ ಬೋವಿಕಾನ, ಅಬ್ದುಲ್ಲ ಫೈಝಿ, ಜಂಶೀರ್, ಇಲ್ಯಾಸ್ ಸಲಿಂ ಅಡ್ಕ ಉಪಸ್ಥಿತರಿದ್ದರು.