Advertisement
ಮಂಡೆಕೋಲು ಗ್ರಾಮದ ಮಾರ್ಗ ಬಳಿಯ ಹಮೀದ್ ಮಾವಜಿ ಎಂಬವರ ತೋಟಕ್ಕೆ ರಾತ್ರಿ ಲಗ್ಗೆ ಇಟ್ಟಿರುವ ಕಾಡಾನೆಗಳ ಹಿಂಡು ಸುಮಾರು 20ಕ್ಕೂ ಅಧಿಕ ತೆಂಗಿನ ಗಿಡಗಳನ್ನು ನಾಶ ಮಾಡಿದೆ. ಬಾಳೆ ಗಿಡಗಳನ್ನು ಹಾನಿ ಮಾಡಿದೆ. ದೇವರಗುಂಡದ ಹಲವು ಕೃಷಿಕರ ತೋಟಗಳಿಗೆ ಕಾಡಾನೆ ನಿರಂತರ ಲಗ್ಗೆ ಇಟ್ಟು ಬಾಳೆ, ತೆಂಗು, ಅಡಿಕೆ ಕೃಷಿ ನಾಶಪಡಿಸುತ್ತಿವೆ.
ಮಂಡೆಕೋಲು, ಅಜ್ಜಾವರ ಗ್ರಾಮದಲ್ಲಿ ಕಾಡಾನೆಗಳು ಬರದಂತೆ ಆನೆ ಕಂದಕ, ಸೋಲಾರ್ ಬೇಲಿ, ನೇತಾಡುವ ಸೋಲಾರ್ ಬೇಲಿ ಅಳವಡಿಸಲಾಗಿದ್ದರೂ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಬಂದಿಲ್ಲ. ಆನೆ ಹಾವಳಿ ನಿಯಂತ್ರಣಕ್ಕೆ ದೇವರಗುಂಡ ಭಾಗದಲ್ಲಿ ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನು ಅಡ್ಡಲಾಗಿ ಒಂದಕ್ಕೊಂದು ಜೋಡಣೆ ಮಾಡಿ ಸಾಲಾಗಿ ಇರಿಸಲಾಗಿತ್ತು. ಇದರಿಂದ ಯಶಸ್ಸನ್ನೂ ಕಂಡರು. ಆ ನಂತರ ಆನೆಗಳು ಆ ದಾರಿ ಮೂಲಕ ಬಂದು ತೋಟಕ್ಕೆ ದಾಳಿ ಮಾಡಿರಲಿಲ್ಲ. ಇದೀಗ ಪಥ ಬದಲಿಸಿ ಬೇರೆ ದಾರಿಯಿಂದ ಸತತವಾಗಿ ಎರಡು ದಿನಗಳಿಂದ ದಾಳಿ ಮಾಡಲು ಪ್ರಾರಂಭಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
Related Articles
ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ಮಾರಂಗಾಯಿ ಎಂಬಲ್ಲಿ ಶುಕ್ರವಾರ ರಾತ್ರಿ ಹಾಗೂ ಶನಿವಾರ ರಾತ್ರಿ ಶಿಬಾಜೆ ಪತ್ತಿಮಾರು ಸಮೀಪ ಕಾಡಾನೆಗಳು ದಾಳಿ ನಡೆಸಿದ ಪರಿಣಾಮ ಅಡಿಕೆ ಹಾಗೂ ತೆಂಗಿನ ಗಿಡಗಳು ನಾಶವಾಗಿವೆ.
Advertisement
ಚಾರ್ಮಾಡಿ ಸಮೀಪದ ಲೀಲಾವತಿ ಲೋಕಯ್ಯ ಗೌಡ ಎಂಬವರ ತೋಟಕ್ಕೆ ಶುಕ್ರವಾರ ತಡರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು 125ಕ್ಕಿಂತ ಅಧಿಕ ಅಡಿಕೆ ಗಿಡಗಳನ್ನು ಸಂಪೂರ್ಣ ನಾಶ ಮಾಡಿದೆ.ಆನೆಗಳ ಹಿಂಡು ತೋಟದ ಒಂದು ಭಾಗದಲ್ಲಿ ದಾಳಿ ಮಾಡಿದ್ದು, ಅಲ್ಲಿದ್ದ ಅಡಿಕೆ ತೋಟ ಸಂಪೂರ್ಣ ನೆಲಕ್ಕುರುಳಿದೆ. ಕಳೆದ ಮೂರು ವರ್ಷಗಳ ಹಿಂದೆ 240 ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದು ಅದರಲ್ಲಿ ಈಗ ಅರ್ಧಕ್ಕಿಂತ ಹೆಚ್ಚು ಗಿಡಗಳು ಆನೆ ದಾಳಿಗೆ ಬಲಿಯಾಗಿವೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರಕ್ಕೆ ಅರ್ಜಿ ಸಲ್ಲಿಸಲು ಮಾಹಿತಿ ನೀಡಿದ್ದಾರೆ. ಶನಿವಾರ ರಾತ್ರಿ ಶಿಬಾಜೆ ಗ್ರಾಮದ ಪತ್ತಿಮಾರು ರಾಘವೇಂದ್ರ ಅಭ್ಯಂಕರ್ ಅವರ ತೋಟಕ್ಕೆ ತಡರಾತ್ರಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಫಸಲು ಬರುತ್ತಿದ್ದ 10ಕ್ಕೂ ಅಧಿಕ ತೆಂಗಿನ ಮರ, 40ಕ್ಕೂ ಅಧಿಕ ಅಡಿಕೆ ಮರ ಹಾಗೂ ಬಾಳೆಗಿಡಗಳು ನಾಶಗೊಂಡಿದೆ. ಒಂದು ವರ್ಷಗಳ ಹಿಂದೆ ಇದೇ ರೀತಿ ದಾಳಿ ಮಾಡಿ ಕೃಷಿ ನಾಶಮಾಡಿತ್ತು ಎಂದು ಮನೆ ಮಂದಿ ತಿಳಿಸಿದ್ದಾರೆ. ಶಿಬಾಜೆ ಸುತ್ತಮುತ್ತ ನಿರಂತರವಾಗಿ ಕಾಡಾನೆಗಳು ದಾಳಿ ನಡೆಸುತ್ತಿರುವುದರಿಂದ ಕೃಷಿಕರು ಆತಂಕಕ್ಕೀಡಾಗಿದ್ದಾರೆ. ಕಳೆದ ಎರಡು ವಾರಗಳ ಹಿಂದೆ ಇಲ್ಲಿನ ಪತ್ರಿಕಾ ವಿತರಕರು ಮುಂಜಾನೆ ತೆರಳುತ್ತಿದ್ದಾಗ, ದಾರಿಯಲ್ಲೇ ಕಾಡಾನೆ ಪ್ರತ್ಯಕ್ಷವಾಗಿತ್ತು.