Advertisement

ಮುಂಡಾಜೆ ಬಾಲಕೃಷ್ಣ ಶೆಟ್ಟಿಯವರಿಗೆ ಮಂಡೆಚ್ಚ ಪ್ರಶಸ್ತಿ

06:04 PM Sep 19, 2019 | mahesh |

ಮುಂಡಾಜೆಯ ಬಾಲಕೃಷ್ಣ ಶೆಟ್ಟಿ ಯವರು 2019ನೇ ಸಾಲಿನ “ದಿ.ಮಂಡೆಚ್ಚ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.ಅಪ್ರತಿಮ ಗಿರ್ಕಿ ವೀರ, ಪ್ರಖ್ಯಾತ ಪುಂಡು ವೇಷಧಾರಿ ಬಾಲಕೃಷ್ಣ ಶೆಟ್ಟಿಯವರು ಕರ್ನಾಟಕ ಮೇಳವೊಂದರಲ್ಲೆ 25 ವರ್ಷ ತಿರುಗಾಟವನ್ನು ಮಾಡಿದವರು. ದಿ.ಮಂಡೆಚ್ಚರ ಕರಕಮಲಸಂಜಾತರಾಗಿ ತುಳು ಯಕ್ಷಗಾನವನ್ನು ಶ್ರೀಮಂತಗೊಳಿಸಿದವರು.

Advertisement

ಧರ್ಮಸ್ಥಳ ಯಕ್ಷಗಾನ ಕೇಂದ್ರದಲ್ಲಿ ದಿ. ಕುರಿಯ ವಿಠಲ ಶಾಸ್ತ್ರಿ ಮತ್ತು ದಿ.ಪಡ್ರೆ ಚಂದು ಅವರಿಂದ ಶಾಸ್ತ್ರೀಯವಾಗಿ ನಾಟ್ಯಾಭ್ಯಾಸವನ್ನು ಪೂರೈಸಿ ಕರ್ನಾಟಕ ಮೇಳ ಸೇರಿದರು. ಪುಟ್ಟ ಪುಟ್ಟ ಪಾತ್ರಗಳನ್ನು ಮಾಡುತ್ತ ಬೆಳೆದರು.ಬೋಳಾರರ ಹಿರಣ್ಯಕಶಿಪುವಿಗೆ ಪ್ರಹ್ಲಾದ, ಕೋಳ್ಯೂರರ ಚಂದ್ರಮತಿಗೆ ಲೋಹಿತಾಶ್ವನ ಪಾತ್ರದಲ್ಲಿ ಬಹುಬೇಗನೆ ಪ್ರಸಿದ್ಧಿಯನ್ನು ಪಡೆದರು.ಪುಂಡು ವೇಷದ ವಿಭಾಗದಲ್ಲಿ ಅವರು ಮಾಡದ ಪಾತ್ರಗಳಿಲ್ಲ, ಪ್ರತೀ ಪಾತ್ರಕ್ಕೂ ಜೀವ ತುಂಬಿದರು. ದೈವದತ್ತವಾಗಿ ದೊರಕಿದ ಶರೀರ, ಶಾರೀರ, ಲವಲವಿಕೆಯ ಚುರುಕಿನ ನಡೆ. ಅವರಿಗೆ ಒಲವು ಇದ್ದದ್ದು ಕುಣಿತದಲ್ಲೆ. ತುಳು ಪ್ರಸಂಗಗಳಲ್ಲಿ ಚೆನ್ನಯ್ಯ (ಕೋಟಿ-ಚೆನ್ನಯ್ಯ), ರಾಜಶೇಖರ (ಪಟ್ಟದ ಪದ್ಮಲೆ), ಶಾಂತಕುಮಾರ (ಕಾಡಮಲ್ಲಿಗೆ), ವೀರಸೇನ (ರಾಜಮುದ್ರಿಕೆ), ಕರ್ಣಗೆ (ಮಾಯಾಜುಮಾದಿ) ಅವರಿಗೆ ಖ್ಯಾತಿ ತಂದೊದಗಿಸಿತು.

ಪ್ರಸಿದ್ಧಿಯ ತುತ್ತತುದಿಯಲ್ಲಿರುವಾಗಲೇ ಅನಾರೊಗ್ಯ ಕಾಡತೊಡಗಿತು. ವಿಪರೀತವಾದ ಕಾಲುನೋವಿನಿಂದಾಗಿ ಮೇಳ ಬಿಡಬೇಕಾದ ಅನಿವಾರ್ಯತೆ ಎದುರಾಯಿತು.ಸಣ್ಣ ವಯಸ್ಸಿನಲ್ಲೇ ಈ ರೀತಿ ಆದರೂ ಎದೆಗುಂದಲಿಲ್ಲ. ಪ್ರಸಾದನ ಕಲಾವಿದರಾಗಿ ಅನಂತರ ತಮ್ಮ ಸ್ವಂತ ಪ್ರಸಾಧನ ಉದ್ದಿಮೆಯನ್ನು ನಡೆಸಿದರು.ಅನೇಕ ಕಡೆ ಯಕ್ಷ ನಾಟ್ಯಾಭ್ಯಾಸವನ್ನು ಮಾಡಿಸಿದರು.ಈ ಮೂಲಕ ಯಕ್ಷಮಾತೆಯ ಸೇವೆಯನ್ನು ಮುಂದುವರಿಸಿದರು.

ಈ ಎಲ್ಲ ಸಾಧನೆಯನ್ನು ಗುರುತಿಸಿ ದಿ.ಮಂಡೆಚ್ಚ ಪ್ರಶಸ್ತಿಯನ್ನು ಮುಂಡಾಜೆ ಬಾಲಕೃಷ್ಣ ಶೆಟ್ಟರಿಗೆ ಈ ಬಾರಿ ಕೊಡಮಾಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಸೆ. 25ರಂದು ಕಟೀಲಿನ ಪದವಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.ಇದೇ ಸಂದರ್ಭದಲ್ಲಿ ‘ದಿ.ಮಂಡೆಚ್ಚ ಪ್ರಶಸ್ತಿ’ಯನ್ನು ಸಂಸ್ಥಾಪಿಸಿದ ಭಾಗವತ ದಿ.ಕುಬಣೂರು ಶ್ರೀಧರ ರಾವ್‌ ಅವರ ಸಂಸ್ಮರಣೆಯೂ ನಡೆಯಲಿದೆ. ಕುಬಣೂರು ಭಾಗವತರಿಂದ ರಚಿತವಾದ ಪ್ರಸಂಗಗಳ ಆಯ್ದ ಪದ್ಯಗಳ ಗಾನವೈಭವವೂ ಇದೆ.

– ಡಾ| ಶ್ರುತಕೀರ್ತಿರಾಜ

Advertisement
Advertisement

Udayavani is now on Telegram. Click here to join our channel and stay updated with the latest news.

Next