ಬೆಂಗಳೂರು: ಕಾಯಿಲೆಗಳನ್ನು ತಡೆಗಟ್ಟಲು ಹಸು ಮತ್ತು ಎಮ್ಮೆಗಳಿಗೆ ಪ್ರತಿ ವರ್ಷ ಲಸಿಕೆ ಹಾಕುವಂತೆ ಇನ್ನು ಮುಂದೆ
ಕುರಿ ಮತ್ತು ಮೇಕೆಗಳಿಗೂ ಕಡ್ಡಾಯವಾಗಿ ರೋಗನಿರೋಧಕ ಲಸಿಕೆಗಳನ್ನು ಹಾಕಲಾಗುವುದು ಎಂದು ಪಶುಸಂಗೋಪನಾ ಸಚಿವ ಎ. ಮಂಜು ತಿಳಿಸಿದ್ದಾರೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ಬುಧವಾರ ಹೆಬ್ಟಾಳದ ಪಶು ವೈದ್ಯಕೀಯ ವಿವಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕುರಿ ಮತ್ತು ಮೇಕೆಗಳಿಗೆ ವಾರ್ಷಿಕ ಕಡ್ಡಾಯ ಲಸಿಕಾ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದು ಹೇಳಿದರು.
ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 60 ಸಾವಿರ ಕುರಿಗಳು ಸತ್ತಿದ್ದು, ಅದಕ್ಕೆ ಸರ್ಕಾರದಿಂದ 42 ಕೋಟಿ ರೂ. ಪರಿಹಾರ ನೀಡಲಾಗಿದೆ. ಇಷ್ಟೊಂದು ದೊಡ್ಡ ಮೊತ್ತದ ಪರಿಹಾರ ನೀಡುವ ಬದಲು ರೋಗನಿರೋಧಕ ಲಸಿಕೆಗಳನ್ನು ಹಾಕಿದರೆ, ಕುರಿ ಮತ್ತು ಮೇಕೆಗಳು ಸಾಯುವುದಿಲ್ಲ. ಸರ್ಕಾರಕ್ಕೆ ಇಷ್ಟೊಂದು ಆರ್ಥಿಕ ಹೊರೆ ಆಗುವುದಿಲ್ಲ. ಹಣ ಉಳಿದರೆ, ಅದನ್ನು ಕುರಿ ಸಾಕಾಣಿಕೆಗೆ ಬಳಸಿಕೊಳ್ಳಬಹುದು. ಅದಕ್ಕಾಗಿ ಪ್ರತಿ ವರ್ಷ ಹಸು ಮತ್ತು ಎಮ್ಮೆಗಳಿಗೆ ನೀಡುವಂತೆ, ಕುರಿ ಮತ್ತು ಮೇಕೆಗಳಿಗೂ ರೋಗನಿರೋಧಕ ಲಸಿಕೆ ಹಾಕಲಾಗುವುದು ಎಂದು ಸಚಿವರು ತಿಳಿಸಿದರು.
ಇತ್ತೀಚಿನ ವರ್ಷಗಳಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆಯತ್ತ ಹೆಚ್ಚು ಜನರ ಆಕರ್ಷಿತರಾಗುತ್ತಿದ್ದು, ಅದಕ್ಕೆ ತಕ್ಕಂತೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಇದಕ್ಕಾಗಿ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಸೊಸೈಟಿಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಸೊಸೈಟಿಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೃಷ್ಣ ಮಾತನಾಡಿ, ಮುಂದಿನ ಬಜೆಟ್‌ನಲ್ಲಿ ಕುರಿ ಅಭಿವೃದ್ದಿಗಾಗಿ
ಪ್ರತ್ಯೇಕ ನಿರ್ದೇಶನಾಲಯ ಪ್ರಾರಂಭಿಸಬೇಕು. ಕುರಿಗಾರರು ಸತ್ತಲ್ಲಿ ಪರಿಹಾರ ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.