Advertisement

ಪಂಚಾಕ್ಷರಿ ಗವಾಯಿಗಳ ಹೆಸರಲ್ಲಿ ಮೌಲಿಕ ಪ್ರಶಸ್ತಿ ಘೋಷಿಸಲು ಆಗ್ರಹ

05:36 PM Feb 04, 2022 | Team Udayavani |

ಹಾನಗಲ್ಲ: ಅಂಧ, ಅನಾಥರಿಗೆ ಬೆಳಕು ನೀಡಿದ ಸಂಗೀತದ ದಿವ್ಯ ಚೈತನ್ಯ ಶಕ್ತಿ, ಕಾಡಶೆಟ್ಟಿಹಳ್ಳಿಯಲ್ಲಿ ಜನಿಸಿ ಗದಗನ್ನು ಕಾರ್ಯ ಕ್ಷೇತ್ರವಾಗಿ ಮಾಡಿಕೊಂಡು, ಜಗದ್ವಿಖ್ಯಾತರಾದ ಲಿಂ|ಡಾ|ಪಂ|ಪಂಚಾಕ್ಷರ ಶಿವಯೋಗಿಗಳವರ ಹೆಸರಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಮೌಲಿಕ ಪ್ರಶಸ್ತಿ ನೀಡುವಂತಾಗಬೇಕು ಎಂದು ಅಕ್ಕಿಆಲೂರು ವಿರಕ್ತಮಠದ ಶಿವಬಸವ ಮಹಾಸ್ವಾಮಿಗಳು ಒತ್ತಾಯಿಸಿದರು.

Advertisement

ತಾಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಲಿಂ|ಡಾ|ಪಂ|ಪಂಚಾಕ್ಷರಿ ಶಿವಯೋಗಿಗಳವರ 131ನೇ ಜಯಂತ್ಯುತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಾನಯೋಗಿ ಶಿವಯೋಗಿ ಪಂ.ಪಂಚಾಕ್ಷರಿ ಗವಾಯಿಗಳವರ ಸಾಂಸ್ಕೃತಿಕ ಹಾಗೂ ಸಾಹಿತ್ಯ ಕಲಾ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಸಂಗೀತೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಕಾಡಶೆಟ್ಟಿಹಳ್ಳಿ ಎಂದಾಕ್ಷಣ ಪಂಚಾಕ್ಷರಿ ಗವಾಯಿಗಳವರ ಸಂಗೀತ ಸಾಧನೆ ಹಾಗೂ ಪುಟ್ಟರಾಜ ಕವಿ ಗವಾಯಿಗಳಂತಹ ಮೇಧಾವಿ ಸಂಗೀತಗಾರರ ನೆನಪಾಗುತ್ತದೆ. ಕುರುಡ, ಕುಂಟ, ವಿಕಲಚೇತನರು ಭಿಕ್ಷೆ ಬೇಡುತ್ತಿದ್ದ ಕಾಲ ಹೋಗಿ, ಭಕ್ತಿಯಿಂದ ಸಂಗೀತ ಅಭ್ಯಾಸ ಮಾಡಿ, ಆ ಮೂಲಕ ಬದುಕು ಅರಳಿಸಿಕೊಳ್ಳುವ ದಿವ್ಯ ಚೈತನ್ಯ ನೀಡಿದರು. “ಗುರುವಿನ ಗುರು ಮಹಾಗುರು’ ಎಂಬಂತೆ ಸಂಗೀತದ ಗುರುವಾಗಿ, ಆಧ್ಯಾತ್ಮದ ಶ್ರೇಷ್ಠ ಶಕ್ತಿಯಾಗಿ
ಹೊರಹೊಮ್ಮಿದ ಪಂಚಾಕ್ಷರಿ ಗವಾಯಿಗಳು ಜಗಮೆಚ್ಚಿದ ದಿವ್ಯ ಶಕ್ತಿ ಎಂದರು.

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಪಂ. ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ರಾಷ್ಟ್ರಮಟ್ಟದ ಸಂಗೀತೋತ್ಸವ ನಡೆಯುವಂತಾಗಬೇಕು. ಆ ಮೂಲಕ ವಿಶ್ವವಿಖ್ಯಾತ ಸಂಗೀತ ಕಲಾವಿದರನ್ನು ಪ್ರತಿ ವರ್ಷ ಪ್ರಶಸ್ತಿ ಸಹಿತ ಗೌರವಿಸುವಂತಾಗಬೇಕು. ಆ ಮೂಲಕ ಸಂಗೀತ ಕ್ಷೇತ್ರವನ್ನು ಇನ್ನಷ್ಟು ಶಕ್ತಿಯುತವಾಗಿಸುವ ಮಹತ್ಕಾರ್ಯ ಸರಕಾರಗಳಿಂದ ನಡೆಯಬೇಕಾಗಿದೆ. ಹಾನಗಲ್ಲ ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಂಗೀತೋತ್ಸವಕ್ಕೆ ಇನ್ನಷ್ಟು ಮೆರಗು ಬರುವಂತೆ ಸರಕಾರದಿಂದ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ವೆಂಕಟೇಶ ಪೂಜಾರ, ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷ ಲಿಂ|ಡಾ|ಪಂ|ಪಂಚಾಕ್ಷರಿ ಶಿವಯೋಗಿಗಳ ಜಯಂತ್ಯುತ್ಸವವನ್ನು ಆಚರಿಸುತ್ತ ಬಂದಿದೆ. 131 ವರ್ಷ ಕಳೆದರೂ ಇದುವರೆಗೂ ಶಿವಯೊಗಿಗಳ ಹೆಸರಿನಲ್ಲಿ ಯಾವುದೇ ಪ್ರಶಸ್ತಿ ಘೋಷಣೆಯಾಗಿಲ್ಲ. ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮಗಳಾಗಲಿ, ಸರಕಾರದಿಂದ ಜಯಂತ್ಯುತ್ಸವವಾಗಲಿ ಆಚರಿಸುತ್ತಿಲ್ಲ. ಸರಕಾರ ಕೂಡಲೇ ಗಮನ ಹರಿಸಿ ಇಂತಹ ಮಹಾತ್ಮರ ಜಯಂತಿ ಆಚರಿಸುವಂತಾಗಬೇಕು ಹಾಗೂ ಅವರ ಹೆಸರಿನಲ್ಲಿ ಉನ್ನತ ಪ್ರಶಸ್ತಿ ಘೋಷಿಸಬೇಕು ಎಂದರು.

Advertisement

ಅಕ್ಕಿಆಲೂರು ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಹೋತನಹಳ್ಳಿ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಕೂಡಲದ ಗುರು ಮಹೇಶ್ವರ ಸ್ವಾಮಿಗಳು ಭಾಗವಹಿಸಿದ್ದರು. ಕಲಾ ಸಂಘದ ಅಧ್ಯಕ್ಷ ದಾನಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಾಂವಸಗಿ ಗ್ರಾಪಂ ಅಧ್ಯಕ್ಷ ಬಸವರಾಜ ಅಗಸನಹಳ್ಳಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಸಂಗೀತ ಸೇವೆ: ಡಾ|ಮೃತ್ಯುಂಜಯ ಅಗಡಿ, ಡಾ|ವೆಂಕಟೇಶ ಪೂಜಾರ, ಶಿವಬಸಯ್ಯ ಚರಂತಿಮಠ, ಬಸಯ್ಯ ಹಂಚಿನಾಳ, ರಾಘವೇಂದ್ರ ಭಜಂತ್ರಿ, ಬಸವಣ್ಯಯ್ಯಶಾಸ್ತ್ರಿ ವೆಂಕಟಾಪೂರಮಠ, ಶಿವಯ್ಯ ಇಟಗಿಮಠ, ಪ್ರಕಾಶ ಆನವಟ್ಟಿ, ಡಾ|ಪರಶುರಾಮ ಕಟ್ಟಿಸಂಗಾವಿ ಸಂಗೀತ ಸೇವೆ ಸಲ್ಲಿಸಿದರು.

ಪ್ರಶಸ್ತಿ: ಇದೇ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಗಾನಯೋಗಿ ಲಿಂ.ಪಂಚಾಕ್ಷರಿ ಶಿವಯೋಗಿಗಳವರ ಕಲಾ ಸಂಘ ಕೊಡಮಾಡುವ ಕುಮಾರ ಪಂಚಾಕ್ಷರೇಶ್ವರ
ಪ್ರಶಸ್ತಿಯನ್ನು ಧಾರವಾಡದ ಅಂತಾರಾಷ್ಟ್ರೀಯ ಸಂಗೀತ ಕಲಾವಿದ ಡಾ|ಮೃತ್ಯುಂಜಯ ಅಗಡಿ ಅವರಿಗೆ ಪ್ರದಾನ ಮಾಡಿ, ಗೌರವಿಸಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next