ಬಂಟ್ವಾಳ: ಭಾರತದಲ್ಲಿ ಮನೊರೋಗಿಗಳ ಪ್ರಮಾಣ ಕಡಿಮೆ ಇದೆ. ಕಾರಣವೇನೆಂದರೆ ಇಲ್ಲಿನ ದೇವಮಂದಿರಗಳು ಆತ್ಮಸ್ಥೆರ್ಯ ನೀಡುವ ಮಹತ್ತರ ಪಾತ್ರ ವಹಿಸುತ್ತವೆ. ಭಗವಂತನ ನಿರಂತರ ಅನುಸಂಧಾನದಿಂದ ಮಾತ್ರ ಮೋಕ್ಷದತ್ತ ಸಾಗಲು ಸಾಧ್ಯ. ಇದಕ್ಕೆ ಕ್ಷೇತ್ರಗಳು ಪೂರಕವಾಗಿದೆ ಎಂದು ಹೊಸ್ಮಾರು ಕಾರ್ಕಳದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.
ಅವರು ಎ. 27ರಂದು ಮಂಚಿ ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪುನಃ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನ ಪೂರ್ಣೇಶ್ವರೀ ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಷಿ ಮಾತನಾಡಿ, ದೈವಾನುಗ್ರಹ ಸಂಪಾದನೆ ಮಾಡಿ ಕೊಂಡಾಗ ಮಾತ್ರ ಜೀವನ ತೊಳಲಾಟಕ್ಕೆ ಮುಕ್ತಿ ದೊರೆಯಬಲ್ಲುದು ಎಂದು ಹೇಳಿದರು. ಕನ್ಯಾನ ಬಾಳೆಕೋಡಿ ಶ್ರೀ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಅಶೀರ್ವಚನ ನೀಡಿದರು.
ಈ ಸಂದರ್ಭ ಬಂಟ್ವಾಳ ಎಸ್‌ವಿಎಸ್ ಪದವಿ ಕಾಲೇಜಿನ ಉಪನ್ಯಾಸಕ ಪ್ರೊ| ತುಕಾರಾಮ ಪೂಜಾರಿ, ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಪತ್ತುಮುಡಿ ಚಿದಾನಂದ ರಾವ್, ಜೀರ್ನೋದ್ಧಾರ ಸಮಿತಿ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತಿರುಮಲೇಶ್ ಭಟ್ ಸ್ವಾಗತಿಸಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಸ್ತಾವಿಸಿದರು. ಶೇಖರ ಡಿ. ನಿರೂಪಿಸಿ, ವಂದಿಸಿದರು.