Advertisement
ಈ ಯೋಜನೆಗಾಗಿ ಸಚಿವ ಎಂ.ಸಿ. ಮನಗೂಳಿ ಅವರು ಎರಡು ವರ್ಷ ಚಪ್ಪಲಿ ಧರಿಸದೇ ಬರಿಗಾಲ ಫಕೀರನಂತೆ ಹೋರಾಟ ನಡೆಸಿದ್ದರು. ಅಂದಿನ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಯೋಜನೆ ಅನುಷ್ಠಾನಗೊಳಿಸಿ ಈ ಭಾಗದ ನೀರಾವರಿಗೆ ಆದ್ಯತೆ ಕಲ್ಪಿಸಿದ್ದರು. ಆ ಸವಿ ನೆನಪಿಗಾಗಿ ಎಂ.ಸಿ. ಮನಗೂಳಿ ಮತ್ತು ದೇವೇಗೌಡರ ಆತ್ಮೀಯತೆ ತೋರುವ ಜೋಡಿ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. 2014, ಫೆ.12ರಂದು ಎಚ್.ಡಿ.ಕುಮಾರಸ್ವಾಮಿ ಮೂರ್ತಿ ಪ್ರತಿಷ್ಠಾಪಿಸಿದ್ದರು.
ಬಸವನಬಾಗೇವಾಡಿ: ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರ ಪುತ್ಥಳಿಗೆ ಅವಮಾನ ಎಸಗಿರುವುದು ಖಂಡನೀಯ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದ್ದಾರೆ. ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಿನ್ನೆ ರಾತ್ರಿ ಕೆಲ ಕಿಡಿಗೇಡಿಗಳು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮನಗೂಳಿ ಅವರ ಪುತ್ಥಳಿಗೆ ಬೆಂಕಿ ಹಚ್ಚಿರುವುದು ಖಂಡನೀಯ. ಇಬ್ಬರು ನಾಯಕರು ಜಿಲ್ಲೆಯ ಹಾಗೂ ರಾಜ್ಯದ ನೀರಾವರಿ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ ಅವರ ಪುತ್ಥಳಿಯನ್ನು ಆ ಭಾಗದ ರೈತರು ನಿರ್ಮಿಸಿದ್ದರು ಎಂದು ಹೇಳಿದರು.
ಯಾರೋ ಕಿಡಿಗೇಡಿಗಳು ಪುತ್ಥಳಿಗೆ ಅವಮಾನ ಎಸಗಿರುವುದು ಖಂಡನೀಯ. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಬೇಕು. ಇಲ್ಲವಾದರೆ ಜಿಲ್ಲಾದ್ಯಂತ ಹೋರಾಟ ಮಾಡಬೇಕಾಗುತ್ತದೆ. ಮುಂದಾಗುವ ಅನಾಹುತಕ್ಕೆ ಜಿಲ್ಲಾಡಳಿತವೆ ಹೊಣೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.