ನವ ಪ್ರತಿಭೆ ಅಭಯ್ ನಾಯಕ ನಟನಾಗಿ ಅಭಿನಯಿಸುತ್ತಿರುವ, ಮೇಘಶ್ರೀ, ಅಥಿರಾ ನಾಯಕಿಯರಾಗಿರುವ, ಸುರೇಶ್ ರೈ, ಭವ್ಯಶ್ರೀ ರೈ, ಸೂರಜ್, ತೇಜಸ್, ಅನೀಶ್, ಚಿದು ಮೊದಲಾ ದವರು ಪ್ರಮುಖಭೂಮಿಕೆಯಲ್ಲಿ ಅಭಿನಯಿಸಿರುವ “ಮನಸಾಗಿದೆ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಗಿದಿದೆ.
ಚಿತ್ರೀಕರಣ ಪೂರ್ಣಗೊಂಡ ಬಳಿಕ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ, ಚಿತ್ರ ಸಾಗಿಬಂದ ಬಗೆ, ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡಿತು.
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಶ್ರೀನಿವಾಸ್ ಶಿಡ್ಲಘಟ್ಟ, “ಅಂದು ಕೊಂಡಂತೆ ನಮ್ಮ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ. ಚಿಕ್ಕಮಗಳೂರಿನ ಸುಂದರ ಪರಿಸರ ದಲ್ಲಿ ಚಿತ್ರದ ಬಹುಭಾಗ ಸಾಗುತ್ತದೆ. ಕೊರೊನಾ ಲಾಕ್ ಡೌನ್, ಅತಿಯಾದ ಮಳೆ ಹೀಗೆ ಅನೇಕ ಸವಾಲುಗಳ ನಡುವೆಯೇ ಚಿತ್ರೀಕರಣ ಪೂರ್ಣಗೊಂಡಿದೆ. ಪ್ರಕೃತಿಯೇ ನಮಗೆ ಸಹಕಾರ ನೀಡಿದ್ದರಿಂದ, ರೈನ್ ಎಫೆಕ್ಟ್ ನಲ್ಲಿ ಸಿನಿಮಾದ ಹಾಡು, ಆ್ಯಕ್ಷನ್ ದೃಶ್ಯಗಳು ತುಂಬ ಚೆನ್ನಾಗಿ ಮೂಡಿಬಂದಿದೆ. ಇಡೀ ತಂಡಕ್ಕೆ ಚಿತ್ರೀಕರಣ ರೋಮಾಂಚನ ಅನು ಭವ ನೀಡಿದೆ’ ಎಂದು ತಮ್ಮ ಅನುಭವ ತೆರೆದಿಟ್ಟರು.
ಇದನ್ನೂ ಓದಿ:ಮತ್ತೆ ಒಂದಾದ ‘ರಾಟೆ’ ಜೊಡಿ ; ‘ಹೆಡ್ ಬುಷ್’ನಲ್ಲಿ ಶೃತಿ ಹರಿಹರನ್
ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ಎಸ್. ಚಂದ್ರಶೇಖರ್, “ಶೂಟಿಂಗ್ ನಮ್ಮ ಪ್ಲಾನ್ ಪ್ರಕಾರ ನಡೆದಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ಅಭಯ್ ಸೇರಿದಂತೆ ಹಲವು ಪ್ರತಿಭೆಗಳನ್ನು ಪರಿಚಯಿಸುತ್ತಿದ್ದೇವೆ. ಇದೊಂದು ಲವ್ ಸ್ಟೋರಿಯಾಗಿದ್ದರೂ, ಇಲ್ಲಿಯವರೆಗೆ ಎಲ್ಲೂ ಹೇಳಿರದ ಹಲವು ಸಂಗತಿಗಳನ್ನ ತೆರೆಮೇಲೆ ತೋರಿಸುತ್ತಿದ್ದೇವೆ. ಸಿನಿಮಾ ಎಲ್ಲರಿಗೂ ಇಷ್ಟವಾಗತ್ತದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
ನಾಯಕ ಅಭಯ್ “ಮನಸಾಗಿದೆ’ ಚಿತ್ರದ ಮೂಲಕ ಯಂಗ್ ಆ್ಯಂಡ್ ಎನರ್ಜಿಟಿಕ್ ಹೀರೋ ಆಗಿ ತೆರೆಗೆ ಎಂಟ್ರಿಕೊಡುವ ಉತ್ಸಾಹದಲ್ಲಿದ್ದಾರೆ. ತಮ್ಮ ಚೊಚ್ಚಲ ಚಿತ್ರದ ಬಗ್ಗೆ ಮಾತನಾಡಿದ ಅಭಯ್, “ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಪಾತ್ರಕ್ಕಾಗಿ ಸಾಕಷ್ಟು ಹೋಮ್ ವರ್ಕ್ ಮಾಡಿದ್ದೇನೆ. ಸಿನಿಮಾ ಚೆನ್ನಾಗಿ ಮಾಡಿದ್ದೇವೆ ಎಂಬ ಭರವಸೆ ಇದೆ. ಆದಷ್ಟು ಬೇಗ ಸಿನಿಮಾ ಆಡಿಯನ್ಸ್ ಮುಂದೆ ಬರಲಿದೆ’ ಎಂದರು.
ಚಿತ್ರದ ನಾಯಕಿಯರಾದ ಮೇಘಶ್ರೀ, ಅಥಿರಾ, ಛಾಯಾಗ್ರಹಕ ಶಂಕರ್ ಚಿತ್ರೀಕರಣದ ಅನುಭವ ಹಂಚಿಕೊಂಡರು