Advertisement

ಕಲ್ಲು-ಮರ- ಲೋಹದ ವಸ್ತುಗಳಿಗೆ ಜೀವ ತುಂಬುವ ಬಹುಮುಖ ಪ್ರತಿಭೆ ಮಾನಪ್ಪ ಬಡಿಗೇರ

02:19 PM Sep 24, 2020 | sudhir |

ಶಿಗ್ಗಾವಿ: ಪ್ರಪಂಚಕ್ಕೆ ಶಿಲ್ಪಕಲಾ ವೈಭವವನ್ನು ಕೊಡುಗೆಯಾಗಿ ನೀಡಿದ ಜಕಣಾಚಾರ್ಯರ ಶಿಲ್ಪಕಲೆ ಕುರುಹುಗಳು ನಾಡಿನಾದ್ಯಂತ ಭಾರತೀಯ ಸಂಸ್ಕೃತಿಯನ್ನು ಸಾರುತ್ತವೆ. ಇಂತಹ ಕಲ್ಲು-ಮರ-ಲೋಹದ ವಸ್ತುಗಳಿಗೆ ಜೀವ ತುಂಬುವ ತಾಲೂಕಿನ ಬೆಳಗಲಿಯ ಬಹುಮುಖ ಪ್ರತಿಭೆಯ ಮಾನಪ್ಪ ಬಡಿಗೇರ ಅವರ ಕೈಚಳಕ ಅನನ್ಯವಾದುದು.

Advertisement

ತಾಲೂಕಿನ ಬೆಳಗಲಿ ಗ್ರಾಮದ ಪಂಚ ಕಸುಬುಗಳ ಕುಟುಂಬದ ಕಾಷ್ಠಶಿಲ್ಪಿ ಮಾನಪ್ಪ ಷಣ್ಮುಖಪ್ಪ ಬಡಿಗೇರ, ಮೊದ ಮೊದಲು ಕೃಷಿಕರ ರಂಟೆ, ಕುಂಟೆ, ಕೂರಿಗೆ ಮುಂತಾದ ಪರಿಕರಗಳನ್ನು ತಯಾರು ಮಾಡುತ್ತಿದ್ದರು. ನಂತರ ಅವರು ಮರ, ಕಲ್ಲು, ಸಿಮೆಂಟ್‌ ವಸ್ತುಗಳ ಮೂರ್ತಿ ತಯಾರಿಕೆ ಮತ್ತು ವಿವಿಧ ಬಣ್ಣಗಳಿಂದ ಕುಸೂರಿ ಕಲೆಯ ಅಲಂಕಾರ ಮಾಡುವ ಕಾರ್ಯದಲ್ಲಿ ಪರಿಪೂರ್ಣತೆ ಕಾರ್ಯಕ್ಕೆ ಮುಂದಾಗಿ, ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮರ, ಕಲ್ಲುಗಳಿಗೆ ನಿರ್ದಿಷ್ಟ ಆಕಾರ ಕೊಟ್ಟಾಗ ಮುಂದೆ ಅವು ದೈವೀ ಸ್ವರೂಪ ಪಡೆದು ಪೂಜಿಸುವಂತಾಗಿವೆ.

ಇದನ್ನೂ ಓದಿ :ನಾನು ರಾಜಕೀಯ ಪ್ರವೇಶಿಸುತ್ತಿದ್ದೇನೆ, ಕಳ್ಳನಂತೆ ಅಲ್ಲ, ಸಿಂಹದಂತೆ!: ಬಿಹಾರ ಮಾಜಿ DGP ಪಾಂಡೆ

ಮಾನಪ್ಪ ಬಡಿಗೇರ ತಯಾರಿಸಿದ ಮೂರ್ತಿಗಳು ಜಿಲ್ಲೆಯಲ್ಲಷ್ಟೇ ಅಲ್ಲ, ನಾಲ್ಕೈದು ಜಿಲ್ಲಾ ವ್ಯಾಪ್ತಿಯಲ್ಲೂ ಪ್ರತಿಷ್ಠಾಪಿಸಲ್ಪಟ್ಟು ಪೂಜಿಸುವಂತಾಗಿವೆ. ಪ್ರತಿವರ್ಷ 15ರಿಂದ 20 ಮೂರ್ತಿಗಳನ್ನು ನಿಗದಿತ ಸಮಯಕ್ಕೆ ತಯಾರಿಸಿಕೊಡುವ ಮಾನಪ್ಪ ಅವರು, ಇಬ್ಬರು ಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ಶಿಲ್ಪ ಕೆತ್ತನೆಯ ಸುಸಜ್ಜಿತ ಕುಟೀರ ಹೊಂದಿದ್ದಾರೆ. ಅವರು ವರ್ಷ ಪೂರ್ತಿ ಬಿಡುವಿಲ್ಲದೇ ಕೆತ್ತನೆಯಲ್ಲಿಯೇ ಕಾಲ ಕಳೆಯುತ್ತಾರೆ. ಜಿಲ್ಲೆಯಲ್ಲಿಯೇ ಪ್ರಚಲಿತ ಶಿಲ್ಪಿಗಳಾಗಿದ್ದಾರೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಪ್ರೊ| ವೀರಣ್ಣ ಅರ್ಕಸಾಲಿ ಅವರು ಮಾನಪ್ಪನವರ ಶಿಲ್ಪಕಲಾ ಕುಟೀರಕ್ಕೆ ಭೇಟಿ ನೀಡಿ ವಿವಿಧ ಬಗೆಯ ಶಿಲ್ಪಗಳ ವಿಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೇ, ಈ ಕಾರ್ಯದಲ್ಲಿ ಕುಟುಂಬ ಮುಂದುವರೆಯಲಿ ಎಂಬ ಆಶಯದ ನುಡಿಗಳನ್ನಾಡಿದ್ದಾರೆ.

Advertisement

ಎಲೆಮರೆ ಕಾಯಿ: ಯಾವುದೇ ವಶೀಲಿ, ಲಾಬಿ ಗೊತ್ತಿಲ್ಲದ ಮಾನಪ್ಪನವರ ಕಲೆಗೆ ಮೆಚ್ಚಿ ನಾಡಿನ ಹೆಸರಾಂತ ಮಠ-ಮಾನ್ಯಗಳ ಪೂಜ್ಯರು ಹಾಗೂ ದೈವ ಸಮಿತಿಯವರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅವರನ್ನು ಗೌರವಿಸಿದ್ದಾರೆ. ಶಿಲ್ಪಕಲೆಯಲ್ಲಿ ಆಸಕ್ತ ಯುವಕರು ಇಂತಹ ಹಿರಿಯರ ಮಾರ್ಗದರ್ಶನದಲ್ಲಿ ಕಲೆಯ ಬಗ್ಗೆ ಪರಿಪೂರ್ಣ ಅಧ್ಯಯನ, ಮಾಹಿತಿ ಪಡೆದುಕೊಳ್ಳುವುದು ಅವಶ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next