Advertisement
ಕುಡಿತದಿಂದ ಸರ್ವ ನಾಶ. ಕುಡಿತ, ಕುಡುಕನ ಸಂಗಡ ಅವನ ಕುಟುಂಬವನ್ನೂ ನಾಶಪಡಿಸುತ್ತದೆ… ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತದೆ’.
Related Articles
ಕುಡಿತದಿಂದಾಗುವ ಸಾಮಾಜಿಕ ದುಷ್ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿದ ಕೆಲವು ರಾಜ್ಯಗಳು, ಮಹಿಳೆಯರ, ಆದರಲ್ಲೂ ಮುಖ್ಯವಾಗಿ ಸಮಾಜದ ಕೆಳಸ್ತರದ ಮಹಿಳೆಯರ ಆಕ್ರಂದನಕ್ಕೆ ಸ್ಪಂದಿಸಿ, ರಾಜ್ಯ ಬೊಕ್ಕಸಕ್ಕೆ ಉಂಟಾಗುವ ಆದಾಯ ಕೊರತೆಯನ್ನು ಲೆಕ್ಕಿಸದೆ ಪಾನ ನಿಷೇಧವನ್ನು ಜಾರಿಗೊಳಿಸುತ್ತಿವೆ. ಗುಜರಾತ್, ಕೇರಳ, ನಾಗಾಲ್ಯಾಂಡ್, ಮಣಿಪುರ ಮತ್ತು ಕೇಂದ್ರಾಡಳಿತ ಪ್ರದೇಶವಾದ ಲಕ್ಷ ದ್ವೀಪದಲ್ಲಿ ಪಾನ ನಿಷೇಧ ಜಾರಿಯಲ್ಲಿದೆ. ಬಿಹಾರ ರಾಜ್ಯ ಇತ್ತೀಚೆಗೆ ಈ ಜನಸ್ನೇಹಿ ಮತ್ತು ಸಾಮಾಜಿಕ ಕಳಕಳಿಯ ಸಾಹಸಕ್ಕೆ ಕೈಹಾಕಿದೆ. ಬಿಹಾರದಲ್ಲಿ ಈಚೆಗೆ ಪಾನ ನಿರೋಧಕ್ಕೆ ಬೆಂಬಲ ಸೂಚಿಸಿ ಸುಮಾರು 3 ಕೋಟಿಗೂ ಅಧಿಕ ಮಂದಿ 11,000 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ನಿರ್ಮಿಸಿ ಗಿನ್ನಿಸ್ ದಾಖಲೆಯನ್ನು ಮಾಡಿ ಕೇವಲ ಭಾರತಕ್ಕಲ್ಲ ಇಡೀ ವಿಶ್ವಕ್ಕೆ ಸಂದೇಶ ರವಾನಿಸಿದ್ದಾರೆ. ಇನ್ನೂ ಕೆಲವು ರಾಜ್ಯಗಳಲ್ಲಿ ಈ ನಿಟ್ಟಿನಲ್ಲಿ ಚಿಂತನೆ ನಡೆದಿದ್ದು, ಆದಾಯ ನಷ್ಟ ಮತ್ತು ಕ್ರೋಢೀಕರಣದ ಲೆಕ್ಕಾಚಾರ ನಡೆಯುತ್ತಿದೆ.
Advertisement
ಎಪ್ಪತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆಯವರು ರಾಜ್ಯದಲ್ಲಿ ಪಾನ ನಿಷೇಧವನ್ನು ರದ್ದು ಮಾಡಿದಾಗ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತ ಅವರಿಗೆ ಸಾಮಾಜಿಕ ಕಳಕಳಿ ಮುಖ್ಯವಾಗಿತ್ತು. ಕಳ್ಳಭಟ್ಟಿಯಿಂದ ಜೀವ ತೆತ್ತವರ ಮತ್ತು ಅವರ ಕುಟುಂಬದವರ ಆಕ್ರಂದನವನ್ನು ಕಣ್ಣಾರೆ ನೋಡಿದ ಬಳಿಕ, “”ಕುಡಿಯುವುದನ್ನು ತಪ್ಪಿಸಲಾಗದು… ಕುಡಿಯುವವರು ಕನಿಷ್ಟ ಒಳ್ಳೆಯದನ್ನಾದರೂ ಕುಡಿಯಲಿ” ಎನ್ನುವುದು ಸ್ವತಃ ಗಾಂಧೀವಾದಿ ಮತ್ತು ವಿನೋಬಾ ಅನುಯಾಯಿಯಾದ ಅವರ ಒಲ್ಲದ ಮನಸ್ಸಿನ ಇಂಗಿತವಾಗಿತ್ತು. ಪಾನ ನಿರೋಧದ ಅನುಷ್ಠಾನವೂ ಸುಲಭವಾಗಿರದೆ ಒಂದು ಸವಾಲಾಗಿತ್ತು. ಇದರ ಅನುಷ್ಠಾನದಲ್ಲಿ ದುರುಪಯೋಗ ಮತ್ತು ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಅನೇಕ ಅಮಾಯಕರು ಈ ಕಾಯ್ದೆ ಅಡಿಯಲ್ಲಿ ಸಾಕಷ್ಟು ನೋವನ್ನು ಅನುಭವಿಸಿದ್ದರು.
ಸರಕಾರದ ನಿಲುವುಕುಡಿಯುವುದು ತಪ್ಪಲ್ಲ; ಆದರೆ, ಕುಡುಕನಾಗುವುದು ತಪ್ಪು ಎನ್ನುವುದು ಇಂದಿನ ಧ್ಯೇಯ. ಆದರೆ, ಸರಕಾರದ ಕೆಲವು ಕ್ರಮಗಳು ಜನರನ್ನು ಕುಡುಕರನ್ನಾಗಿ ಮಾಡುತ್ತಿರುವುದು ತೀರಾ ವಿಷಾದಕರ ಬೆಳವಣಿಗೆ. ಪಾನ ನಿರೋಧ ಮಂಡಳಿಯನ್ನು ಜೀವಂತವಾಗಿಟ್ಟುಕೊಂಡ ಸರಕಾರ ಹೊಸ ಹೊಸ ಮದ್ಯದಂಗಡಿಗಳಿಗೆ ಅನುಮತಿ ಕೊಡುವುದು ಒಂದು ವಿಪರ್ಯಾಸ. ಹಾಗೆಯೇ ಮದ್ಯದಂಗಡಿಗಳು ಮತ್ತು ಪಬ್‌ಗಳು ಮಾರಾಟ ಹೆಚ್ಚಿಸಿಕೊಂಡು ರಾಜ್ಯದ ಬೊಕ್ಕಸಕ್ಕೆ ಆದಾಯ ವೃದ್ಧಿಸಲು ಪ್ರೇರೇಪಿಸುವುದು ಇನ್ನೊಂದು ವಿಶೇಷ. ಮಾಧ್ಯಮಗಳ ವರದಿಯಂತೆ, ಮದ್ಯದಂಗಡಿ ಮತ್ತು ಬಾರ್‌ಗಳು ಸರಕಾರ ನಿಗದಿಪಡಿಸಿದ ಮಿತಿಗಿಂತ ಕಡಿಮೆ ಮಾರಾಟ ಮಾಡಿದರೆ, ದಂಡ ಕೊಡಬೇಕಂತೆ, ಪ್ರತಿದಿನವೂ ಕನಿಷ್ಟ 468 ಲೀಟರ್ ಮದ್ಯವನ್ನು ಮಾರಾಟ ಮಾಡಲೇ ಬೇಕಂತೆ. ಇತ್ತೀಚೆಗೆ ಸುಮಾರು 150 ಬಾರ್ ಮತ್ತು ರೆಸ್ಟೊರೆಂಟ್‌ಗಳಿಗೆ ಕೋಟಿಗಟ್ಟಲೆ ದಂಡ ವಿಧಿಸಲಾಗಿದೆಯಂತೆ, ಈ ದಂಡ ತಪ್ಪಿಸಿಕೊಳ್ಳಲು ಇವರು ಒತ್ತಾಯಪೂರ್ವಕವಾಗಿ ಗಿರಾಕಿಗಳಿಗೆ ಹೆಚ್ಚು ಹೆಚ್ಚು ಮದ್ಯ ಮಾರಾಟ ಮಾಡುವ ಅನಿವಾರ್ಯತೆ ಬಂದಿದೆ. ಸಮಾಜ ವಿಜ್ಞಾನಿಗಳ ಪ್ರಕಾರ ಸುಮಾರು ಶೇ.80 ಅತ್ಯಾಚಾರದ ಪ್ರಕರಣಗಳಲ್ಲಿ ಮದ್ಯವೇ ಪ್ರೇರಕವಾಗಿರುತ್ತದೆ. ಮದ್ಯದ ಅಮಲು ತಲೆಗೇರಿ, ಸ್ಥಿಮಿತ ತಪ್ಪಿದಾಗ ಇಂತಹ ಹೀನ ಕೃತ್ಯಗಳು ನಡೆಯುತ್ತವೆ. ಇನ್ನಿತರ ಕ್ರಿಮಿನಲ್ ಪ್ರಕರಣಗಳಲ್ಲಿ ಕೂಡ ಮದ್ಯದ ವಾಸನೆ ಇದ್ದೇ ಇರುತ್ತದೆ. ಆದರೆ ಕೆಲವರು ಮಾಡುವ ತಪ್ಪಿಗಾಗಿ ಮದ್ಯ ಮಾರಾಟವನ್ನೇ ಬಂದ್ ಮಾಡುವುದು, ನೆಗಡಿಯಾಯಿತೆಂದು ಮೂಗು ಕತ್ತರಿಸಿದಂತೆ. ಪಾನ ನಿರೋಧವನ್ನು ಕಾಯ್ದೆಯಿಂದ ಮಾಡುವುದು ಸುಲಭ ಸಾಧ್ಯವಲ್ಲ. ಇನ್ನೊಬ್ಬರು ಹೇಳಿ ಅಥವಾ ಕಾಯ್ದೆಯ ಬಲದಿಂದ ಕುಡಿತವನ್ನು ನಿಲ್ಲಿಸುವುದಕ್ಕಿಂತ ಸ್ವತಃ ತಿಳಿದು ನಿಲ್ಲಿಸುವುದು ಮತ್ತು ನಿಯಂತ್ರಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮದ್ಯಪಾನ ಸಂಯಮ ಮಂಡಳಿಯ ಕಾರ್ಯವ್ಯಾಪ್ತಿ ವಿಸ್ತಾರವಾಗಬೇಕಾಗಿದೆ ಮತ್ತು ಮಂಡಳಿ ಇನ್ನೂ ಕ್ರಿಯಾಶೀಲವಾಗಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿರುವ ಎಲ್ಲ ಮದ್ಯದಂಗಡಿಗಳನ್ನು ಮುಚ್ಚಬೇಕು ಎನ್ನುವ ಇತ್ತೀಚೆಗಿನ ಸುಪ್ರೀಂ ಕೋರ್ಟ್ ತೀರ್ಪು ಈ ನಿಟ್ಟಿನಲ್ಲಿ ಒಂದು ಸ್ವಾಗತಾರ್ಹ ಬೆಳವಣಿಗೆ. ಇದು ದೇಶದ ಸುಮಾರು ಶೇ.42 ಮದ್ಯದಂಗಡಿಗಳ ಮೇಲೆ ಪರಿಣಾಮ ಬೀರಬಹುದು. ಮದ್ಯಸೇವನೆಯ ಪರಿಣಾಮವನ್ನು ಮತ್ತು ಅದರಿಂದಾಗುವ ಅನಾಹುತವನ್ನು ನಿಯಂತ್ರಿಸುವ ದಿಶೆಯಲ್ಲಿ ನ್ಯಾಯಾಲಯದ ತೀರ್ಪು ಸ್ತುತ್ಯರ್ಹ. ಆದರೆ, ಈ ತೀರ್ಪು ಹೆದ್ದಾರಿಯ ಇಕ್ಕೆಲಗಳ ಮದ್ಯದಂಗಡಿಗಳನ್ನು ಮುಚ್ಚುವ ಬದಲು “ಸ್ಥಳಾಂತರ’ಕ್ಕೆ ಸೀಮಿತವಾದರೆ ತೀರ್ಪಿನ ನಿರೀಕ್ಷಿತ ಉದ್ದೇಶ ಸಾಧನೆಯಾಗುವುದು ಸಂದೇಹಾಸ್ಪದ. – ಎ. ಬಿ. ಶೆಟ್ಟಿ, ಬೆಂಗಳೂರು